-ಓಲೆ ಕಸಿಯಲು ಹೋದಾಗ ಅಜ್ಜಿ ಪ್ರತಿರೋಧ । ಎದೆಗೆ ಬಲವಾಗಿ ಗುದ್ದಿ ಕೊಲೆ । ಆರೋಪಿ ಸೆರೆ
ಇತ್ತೀಚಿಗೆ ನಗರದ ಹೊರವಲಯದ ದೇವಾಲಯದಲ್ಲಿ ಅಶ್ರಯ ಪಡೆದಿದ್ದ ವೃದ್ಧೆ ನಾರಾಯಣಮ್ಮ (65) ಅವರನ್ನು ಹಣಕ್ಕಾಗಿ ಕೊಲೆ ಮಾಡಲಾಗಿತ್ತು. ಘಟನೆ ಸಂಬಂಧ ದುಷ್ಕರ್ಮಿಯನ್ನು ಕೆಂಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೋಣಸಂದ್ರ ಸಮೀಪದ ವೃಷಾಭವತಿ ಲೇಔಟ್ ನಿವಾಸಿ ನಾರಾಯಣಮ್ಮ (65) ಕೊಲೆಯಾಗಿದ್ದು, 24 ತಾಸಿನೊಳಗೆ ಆರೋಪಿಯನ್ನು ತಾಂತ್ರಿಕ ಮಾಹಿತಿ ಆಧರಿಸಿ ಪೊಲೀಸರು ಬಂಧಿಸಿದ್ದಾರೆ. 10 ವರ್ಷಗಳ ಹಿಂದೆ ತನ್ನ ಕುಟುಂಬದಿಂದ ನಾರಾಯಣಮ್ಮ ಪ್ರತ್ಯೇಕವಾಗಿ ಬಿಡದಿ ತೊರೆದು ಕೆಂಗೇರಿ ಸುತ್ತಮುತ್ತ ನೆಲೆಸಿದ್ದರು. ಕೆಲ ದಿನಗಳಿಂದ ವೃಷಭಾವತಿ ಲೇಔಟ್‌ನ ಪಟಾಲದಮ್ಮ ದೇವಾಲಯದ ಮುಂಭಾಗ ರಾತ್ರಿ ವೇಳೆ ಈಕೆಗೆ ಆಶ್ರಯ ಸಿಕ್ಕಿತು. ದೇವಾಲಯದ ಸಮೀಪದ ಕೆಲಸ ಮಾಡುತ್ತಿದ್ದ ತನ್ನ ಸೋದರನ ಭೇಟಿಗೆ ಬಂದಾಗ ಆರೋಪಿ ಕಣ್ಣಿಗೆ ನಾರಾಯಣಮ್ಮ ಬಿದ್ದಿದ್ದರು. ಅಜ್ಜಿ ಸೊಂಟದಲ್ಲಿ ಸಿಕ್ಕಿಸಿಕೊಂಡಿದ್ದ ಕೈ ಚೀಲದಲ್ಲಿ ಸದಾ ಐದಾರು ಸಾವಿರ ರು. ಹಣ ಇರುತ್ತಿತ್ತು. ಅವರು ಚಿನ್ನದ ಓಲೆ ಹಾಗೂ ಉಂಗುರವನ್ನು ಸಹ ಧರಿಸಿದ್ದರು.ಇದನ್ನು ಗಮನಿಸಿದ್ದ ಆರೋಪಿ, ಅಜ್ಜಿಯಿಂದ ಹಣ ಹಾಗೂ ಚಿನ್ನ ದೋಚಲು ಮಂಗಳವಾರ ನಸುಕಿನಲ್ಲಿ ದೇವಾಲಯ ಪ್ರಾಂಗಣದಲ್ಲಿ ಮಲಗಿದ್ದ ಅಜ್ಜಿಯಿಂದ ಉಂಗುರು ಬಿಚ್ಚಿಕೊಂಡು ಕಿವಿಯೋಲೆಗೆ ಆತ ಕೈ ಹಾಕಿದ್ದಾನೆ. ಈ ವೇಳೆಗೆ ವೃದ್ಧೆಗೆ ಎಚ್ಚರವಾಗಿ ಆರೋಪಿಗೆ ಪ್ರತಿರೋಧಿಸಿದ್ದಾರೆ. ಈ ಹಂತದಲ್ಲಿ ಆರೋಪಿ ಅಜ್ಜಿ ಎದೆಗೆ ಬಲವಾಗಿ ಗುದ್ದಿದಾಗ ಅವರು ಕೊನೆಯುಸಿರೆಳೆದಿದ್ದಾರೆ. ಅದೇ ವೇಳೆ ದೇವಾಲಯ ಹತ್ತಿರದಲ್ಲಿ ನೆಲೆಸಿರುವ ಕ್ಯಾಬ್ ಚಾಲಕ, ನಸುಕಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ಮರಳುವಾಗ ದೇವಾಲಯ ಪ್ರಾಂಗಣದಲ್ಲಿ ಅಜ್ಜಿ ಬಳಿ ಅಪರಿಚಿತನ ಕಂಡು ಕ್ಯಾಬ್ ಹಾರನ್ ಮಾಡಿದ್ದಾರೆ. ತಕ್ಷಣವೇ ಭೀತಿಯಿಂದ ಆರೋಪಿ ಓಡಿ ಹೋಗಿದ್ದಾನೆ. ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕ್ಯಾಬ್ ಚಾಲಕ ಮಾಹಿತಿ ನೀಡಿದ್ದಾನೆ. ಈ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಧಾವಿಸಿದ ಕೆಂಗೇರಿ ಠಾಣೆಯ ಹೊಯ್ಸಳ ಸಿಬ್ಬಂದಿ, ಅಜ್ಜಿಯನ್ನು ಪರೀಕ್ಷಿಸಿದಾಗ ಮೃತಪಟ್ಟಿರುವುದು ಖಚಿತವಾಗಿದೆ.
ಮೃತದೇಹದಲ್ಲಿ ಹೊರ ನೋಟಕ್ಕೆ ಯಾವುದೇ ಗಾಯದ ಗುರುತು ಪತ್ತೆಯಾಗಿರಲಿಲ್ಲ. ಹೀಗಾಗಿ ಶಂಕಾಸ್ಪದ ಸಾವು ಎಂದು ಕೆಂಗೇರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಯಿತು. ಈ ಕೃತ್ಯದ ಬಗ್ಗೆ ಡಿಸಿಪಿ ಸೌಮ್ಯಲತಾ ಮಾರ್ಗದರ್ಶನದಲ್ಲಿ ಕೆಂಗೇರಿ ಪೊಲೀಸ್ ತಂಡವು ತನಿಖೆಗಿಳಿಯಿತು. 2 ದಿನಗಳ ಬಳಿಕ ಪೊಲೀಸರ ಕೈ ಸೇರಿದ ಅಜ್ಜಿ ಮೃತದೇಹದ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಲವಾದ ಪೆಟ್ಟಿನಿಂದ ನಾರಾಯಣಮ್ಮ ಸಾವನ್ನಪ್ಪಿರುವುದಾಗಿ ತಜ್ಞರು ಅಭಿಪ್ರಾಯಪಟ್ಟಿದ್ದರು. ನಂತರ ಘಟನಾ ಸ್ಥಳದ ಸುತ್ತಮುತ್ತ ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕ ನಂತರ ಆತನನ್ನು ಕೆಂಗೇರಿ ಪೊಲೀಸರು ಸೆರೆ ಹಿಡಿದಿದ್ದಾರೆ.
ಡ್ರಗ್ಸ್ ಪೆಡ್ಲರ್ ಆಗಿದ್ದ ಆರೋಪಿ