)
-ಕ್ಯಾಬ್ ಚಾಲಕನಿಂದ ಕೃತ್ಯ । ಕೆಲವು ದಿನದಿಂದ ಇಂದು ಶೇಖರ್ ದಂಪತಿ ನಡುವೆ ಜಗಳ । 2 ದಿನಗಳ ಹಿಂದೆ ಒರಳುಕಲ್ಲಿಂದ ಪತ್ನಿ ಕೊಂದಿದ್ದಇಂದುಶೇಖರ್ ಬಳಿಕ ಪತ್ನಿ ಮನೆಯವರ ಒಬ್ಬೊಬ್ಬರಾಗಿ ಹತ್ಯೆಗೈದು ಶವ ಎಸೆದಿದ್ದ । ಮಗಳ ನಾಪತ್ತೆ ಬಗ್ಗೆ ನಳಿನಿ ತಾಯಿಯಿಂದ ದೂರು ದಾಖಲು । ಬಳಿಕ ಪ್ರಕರಣ ಬೆಳಕಿಗೆ
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಕ್ಯಾಬ್ ಚಾಲಕನೊಬ್ಬ ತನ್ನ ಪತ್ನಿ ಹಾಗೂ ಆಕೆಯ ಪರಿವಾರದ 7 ಮಂದಿಯನ್ನು ರುಬ್ಬುಗುಂಡಿನಿಂದ ಮನಬಂದಂತೆ ಹಲ್ಲೆ ನಡೆಸಿ ಬೀಭತ್ಸವಾಗಿ ಹತ್ಯೆಗೈದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಶ್ರೀರಾಮಪುರದ ರೂಪವತಿ, ಆಕೆಯ ಮಗಳು ಸುನೀತಾ, ಪುತ್ರರಾದ ಶಿವಕುಮಾರ್, ಶಂಕರ್, ಸೊಸೆಯಂದಿರಾದ ದಿವ್ಯಾ, ನಳಿನಿ ಹಾಗೂ ಮೊಮ್ಮಗ ಪುನೀತ್ (7) ಮೃತ ದುರ್ದೈವಿಗಳು. ಈ ಹತ್ಯಾಕಾಂಡ ಸಂಬಂಧ ಮೃತರ ಅಳಿಯ ರಾಜಾಜಿನಗರ ಸಮೀಪದ ನಿವಾಸಿ ಇಂದುಶೇಖರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತನ್ನ ಮನೆಯಲ್ಲಿ ಒಬ್ಬೊಬ್ಬರನ್ನೇ ಕೊಂದ ಬಳಿಕ ಮೃತದೇಹವನ್ನು ಚಿಕ್ಕಬಳ್ಳಾಪುರ ಜಿಲ್ಲೆ ನಂದಿಬೆಟ್ಟ ಸೇರಿದಂತೆ ಇತರೆಡೆ ಆತ ಎಸೆದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ತನ್ನ ಮಗಳು ನಳಿನಿ ನಿಗೂಢವಾಗಿ ಕಣ್ಮರೆಯಾದ ಬಗ್ಗೆ ಶಂಕಿಸಿ ಶ್ರೀರಾಮಪುರ ಠಾಣೆ ಪೊಲೀಸರಿಗೆ ಮೃತ ನಳಿನಿ ತಾಯಿ ದೂರು ನೀಡಿದ್ದರು. ಅದರನ್ವಯ ತನಿಖೆಗಿಳಿದ ಪೊಲೀಸರು, 2 ದಿನಗಳ ಹಿಂದೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಭೀಕರ ಹತ್ಯಾಕಾಂಡ ಬಯಲಾಗಿದೆ. ನಂದಿನಿ ಬೆಟ್ಟದ ತಪ್ಪಲಿಗೆ ಗುರುವಾರ ಆರೋಪಿಯನ್ನು ಕರೆದೊಯ್ದು ಮೃತದೇಹಗಳನ್ನು ಶೋಧಿಸಲು ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.
ಪತ್ನಿ ಮೇಲೆ ಸಿಟ್ಟಿಗೆ ಕೃತ್ಯ :ಶೇಖರ್‌ಗೆ 2 ದಶಕಗಳ ಹಿಂದೆ ಸುನಿತಾ ಜತೆ ವಿವಾಹವಾಗಿತ್ತು. ರಾಜಾಜಿನಗರದ ಭಾಷ್ಯಂ ವೃತ್ತದ ಸಮೀಪ ದಂಪತಿ ವಾಸವಾಗಿದ್ದರು. ಆದರೆ ಇತ್ತೀಚೆಗೆ ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದಿತ್ತು. ಕೌಟುಂಬಿಕ ವಿಷಯಗಳಿಗೆ ಸತಿ-ಪತಿ ಮಧ್ಯೆ ಮನಸ್ತಾಪವಾಗಿತ್ತು. ಹಲವು ಬಾರಿ ರಾಜಿ ಪಂಚಾಯ್ತಿ ನಡೆದರೂ ಕೂಡ ಸಂಸಾರಿಕ ಕಲಹ ಮುಂದುವರಿದಿತ್ತು. ತನ್ನ ಪತ್ನಿ ನೆರವಿಗೆ ಆಕೆಯ ತಾಯಿ ಹಾಗೂ ಸೋದರರು ನಿಲ್ಲುತ್ತಾರೆ ಎಂದು ಆರೋಪಿಗೆ ಅಸಮಾಧಾನ ಹುಟ್ಟಿತು. ಈ ವಿಚಾರಕ್ಕೆ ತನ್ನ ಬಾಮೈದರಾದ ಶಿವಕುಮಾರ್ ಹಾಗೂ ಶಂಕರ್ ವಿರುದ್ಧ ಆತ ಬಹಿರಂಗವಾಗಿ ಕೋಪ ಸಹ ತೋರಿಸಿದ್ದ.ಶ್ರೀರಾಮಪುರದಲ್ಲಿದ್ದ ತವರು ಮನೆಗೆ ಇಂದುಶೇಖರ್ ಪತ್ನಿ ಭೇಟಿ ನೀಡುತ್ತಿದ್ದಳು. ಆದರೆ ತವರು ಮನೆಗೆ ಹೋಗದಂತೆ ಇಂದುಶೇಖರ್ ನಿರ್ಬಂಧಿಸಿದ್ದರೂ, ಆಕೆ ತವರಿನ ಬಾಂಧವ್ಯ ಕಡಿದುಕೊಂಡಿರಲಿಲ್ಲ. ತನ್ನ ಬದುಕಿಗೆ ಕಂಟಕವಾಗಿದ್ದಾರೆ ಎಂದು ಭಾವಿಸಿ ಸುನೀತಾ ಪರಿವಾರ ಹತ್ಯೆಗೆ ಆತ ನಿರ್ಧರಿಸಿದ್ದಾನೆ. ಪೂರ್ವಯೋಜಿತ ಸಂಚಿನಂತೆ ಮೊದಲು ಪತ್ನಿ ತಲೆಗೆ ಮನೆಯಲ್ಲಿ ಮಸಾಲೆ ಅರೆಯಲು ಇಟ್ಟಿದ್ದ ರುಬ್ಬುಗುಂಡಿನಿಂದ ಹೊಡೆದು ಹತ್ಯೆ ಮಾಡಿದ್ದಾನೆ. ಬಳಿಕ ಮೃತದೇಹವನ್ನು ತೆಗೆದು ಕೊಂಡು ಹೋಗಿ ನಂದಿ ಬೆಟ್ಟಕ್ಕೆ ಎಸೆದು ಬಂದಿದ್ದಾನೆ. ಮರುದಿನ ತನ್ನ ಸ್ನೇಹಿತೆಯರ ಜತೆ ಸುನೀತಾ ಪ್ರವಾಸಕ್ಕೆ ಹೋಗಿದ್ದಾಳೆ ಎಂದು ಸುಳ್ಳು ಹೇಳಿ ನೆರೆಹೊರೆಯಲ್ಲಿ ಆರೋಪಿ ನಂಬಿಸಿದ್ದಾನೆ. ಆಕೆಯ ಕುಟುಂಬದವರಿಗೆ ಅನುಮಾನಬಾರದಂತೆ ಮೊಬೈಲ್ ಅನ್ನು ಸಹ ಸ್ವಿಚ್ಡ್ ಆಫ್ ಮಾಡಿದ್ದಾನೆ.
--ನಂದಿ ಬೆಟ್ಟದಲ್ಲಿ ಮೃತದೇಹ
ಗೊಂದಲಕಾರಿ ಹೇಳಿಕೆ ಸುಳಿವುಮೃತ ಸುನೀತಾ ಕುಟುಂಬದ ನಿಗೂಢ ನಾಪತ್ತೆ ಬಗ್ಗೆ ಶ್ರೀರಾಮಪುರ ಠಾಣೆಯಲ್ಲಿ ಕಣ್ಮರೆ ಪ್ರಕರಣ ದಾಖಲಾಯಿತು. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ಶಂಕೆ ಮೇರೆಗೆ ಇಂದು ಶೇಖರ್‌ನನ್ನು ವಶಕ್ಕೆ ಪಡೆದು ವಿಚಾರಿಸಿದರು. ಆದರೆ ಆತ ಗೊಂದಲಕಾರಿ ಹೇಳಿಕೆ ನೀಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಷ್ಟರಲ್ಲಿ ಆರೋಪಿ ಮನೆಗೆ ಶೋಧಿಸಿದಾಗ ಕೊಲೆ ಬಗ್ಗೆ ಸುಳಿವು ಸಿಕ್ಕಿತು. ಈ ಮಾಹಿತಿ ಆಧರಿಸಿ ಆತನನ್ನು ತೀವ್ರವಾಗಿ ಪ್ರಶ್ನಿಸಿದಾಗ ಕೊನೆಗೆ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.
ಈ ಸಾಮೂಹಿಕ ಹತ್ಯಾಕಾಂಡದ ಬಗ್ಗೆ ತಿಳಿದ ಕೂಡಲೇ ರಾಜಾಜಿನಗರ ಠಾಣೆಗೆ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ವಂಶಿಕೃಷ್ಣ ಹಾಗೂ ಉತ್ತರ ವಿಭಾಗದ ಡಿಸಿಪಿ ನೇಮಗೌಡ ಧಾವಿಸಿದ್ದಾರೆ. ಠಾಣೆಯಲ್ಲೇ ಗುರುವಾರ ಬೀಡು ಬಿಟ್ಟ ಜಂಟಿ ಆಯುಕ್ತರು, ತನಿಖೆಗೆ ಡಿಸಿಪಿ ಸಾರಥ್ಯದಲ್ಲಿ ಮೂವರು ಎಸಿಪಿಗಳ ತಂಡವನ್ನು ರಚಿಸಿ ಕಾರ್ಯಾಚರಣೆಗಿಳಿಸಿದರು.--