ಕನ್ನಡಪ್ರಭ ವಾರ್ತೆ ಮದ್ದೂರು
ಹಳೇ ಎಂ.ಸಿ.ರಸ್ತೆಯ ಕಮಲ ನೆಹರು ಬಾಲಿಕಾ ಪ್ರೌಢಶಾಲೆ ಪಕ್ಕದ ತಮಿಳು ಕಾಲೋನಿ ನಿವಾಸಿ ಕುಮಾರ್ ಪುತ್ರ ನಂದನ್ (25) ಕೊಲೆಯಾದ ಯುವಕ. ಕೂಲಿ ಹಣ ಪಾವತಿಗೆ ಸಂಬಂಧಿಸಿದಂತೆ ಆರೋಪಿಗಳಾದ ಶಿವರಾಜು, ಧನುಷ್ ಹಾಗೂ ನಿಖಿಲ್ ಅವರುಗಳ ನಡುವೆ ರಾತ್ರಿ 8 ಗಂಟೆ ಸುಮಾರಿಗೆ ಮಾತಿನ ಚಕಮಕಿ ನಡೆದು ಗಲಾಟೆಯಾಗಿದೆ.
ಈ ಪೈಕಿ ಸ್ಥಳದಲ್ಲಿದ್ದ ನಂದನ್ ಜಗಳ ಬಿಡಿಸಲು ಮಧ್ಯ ಪ್ರವೇಶ ಮಾಡಿದ್ದಾನೆ. ಇದರಿಂದ ರೊಚ್ಚಿಗೆದ್ದ ಮೂವರು ಆರೋಪಿಗಳ ಪೈಕಿ ಶಿವರಾಜ್ ಎಂಬಾತ ಡ್ರ್ಯಾಗನ್ ನಿಂದ ನಂದನ್ ಕುತ್ತಿಗೆ ಭಾಗಕ್ಕೆ ಇರಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ನಂದನ್ ಸ್ಥಳದಲ್ಲಿ ಅಸ್ವಸ್ಥಗೊಂಡಿದ್ದಾನೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ಈತನನ್ನು ಬಡಾವಣೆ ನಿವಾಸಿಗಳು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಕಾರಿಯಾಗಿದೆ ನಂದನ್ ಸ್ವಲ್ಪ ಹೊತ್ತಿನಲ್ಲಿಯೇ ಕೊನೆ ಉಸಿರೆಳೆದಿದ್ದಾನೆ. ಘಟನೆಯಿಂದಾಗಿ ಆಸ್ಪತ್ರೆ ಬಳಿ ಮೃತನ ಸಂಬಂಧಿಕರು ಹಾಗೂ ನೂರಾರು ಸಾರ್ವಜನಿಕರು ಜಮಾಯಿಸಿದ್ದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗುವಿನ ಪರಿಸ್ಥಿತಿ ಉಂಟಾಗಿತ್ತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಜೆ. ಶೋಭಾರಾಣಿ, ಡಿವೈಎಸ್ಪಿ ಯಶವಂತ್, ಸಿಪಿಐ ನವೀನ್, ಪಿಎಸ್ಐ ರಸುಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.