ಕನ್ನಡಪ್ರಭ ವಾರ್ತೆ ಹಲಗೂರು
ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿ ತಲೆ ಮೇಲೆ ದಿಂಡುಗಲ್ಲು ಎತ್ತಿ ಹಾಕಿ ಹತ್ಯೆ ಮಾಡಿರುವ ಘಟನೆ ಸರ್ಕಾರಿ ಪ್ರಾಥಮಿಕ ಬಾಲಕಿಯರ ಶಾಲಾ ಆವರಣದಲ್ಲಿ ಶುಕ್ರವಾರ ತಡ ರಾತ್ರಿ ನಡೆದಿದೆ.ಮೃತ ವ್ಯಕ್ತಿ ಮೈಸೂರಿನ ಕುವೆಂಪು ನಗರದ ನಿವಾಸಿ ರಂಗಸ್ವಾಮಿ ಪುತ್ರ ರಮೇಶ್ (31) ಎಂದು ಗುರುತಿಸಲಾಗಿದೆ. ಕಳೆದ ಏಳು-ಎಂಟು ವರ್ಷಗಳಿಂದ ಮನೆಯಲ್ಲಿ ಜಗಳ ಮಾಡಿಕೊಂಡು ಮನೆಬಿಟ್ಟು ಹಲಗೂರಿನಲ್ಲಿ ಸಂಬಂಧಿಕನ ಜೊತೆ ಗಾರೆ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದನು. ನಂತರ ಮೂರು-ನಾಲ್ಕು ವರ್ಷಗಳಿಂದ ಚಿಂದಿ ಹಾಗೂ ಪ್ಲಾಸ್ಟಿಕ್ ಬಾಟಲ್ ಸಂಗ್ರಹಿಸಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ.ತಡರಾತ್ರಿ ಅಪರಿಚಿತ ದುಷ್ಕರ್ಮಿಗಳು ದಿಂಡುಗಲ್ಲಿನಿಂದ ತಲೆಗೆ ಹೊಡೆದು ರಮೇಶ್‍ನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಸ್ಥಳಕ್ಕೆ ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ಡಿವೈಎಸ್ಪಿ ಕೃಷ್ಣಪ್ಪ, ಹಲಗೂರು ವೃತ್ತ ನಿರೀಕ್ಷಕ ಶ್ರೀಧರ್, ಕೆ.ಎಂ.ದೊಡ್ಡಿ ವೃತ್ತ ನಿರೀಕ್ಷಕ ಆನಂದ್, ಶ್ವಾನ ದಳ ಹಾಗೂ ಸೊಕೊ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಸ್ಥಳದಿಂದ ಸಾಕ್ಷ್ಯ, ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.ಈ ಸಂಬಂಧ ಹಲಗೂರು ಪೊಲೀಸ್ ಠಾಣೆ ಪಿಎಸ್ಐ ಲೋಕೇಶ್ ಹಾಗೂ ಬೆಳಕವಾಡಿ ಠಾಣೆ ಪಿಎಸ್ಐ ಪ್ರಕಾಶ್ ಪ್ರಾಥಮಿಕ ತನಿಖೆ ಕೈಗೊಂಡಿದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ.
ಬಾಲಕಿ ಅಪಹರಣ: ದೂರು ದಾಖಲುಕನ್ನಡಪ್ರಭ ವಾರ್ತೆ ಮಂಡ್ಯ
ಹದಿನೇಳು ವರ್ಷದ ಬಾಲಕಿಯನ್ನು ಅಪಹರಣ ಮಾಡಿರುವ ಬಗ್ಗೆ ನಗರದ ಸೆಂಟ್ರಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತಾಲೂಕಿನ ಕೋಣನ ತಿಟ್ಟು ಗ್ರಾಮದ ಚಂದ್ರ ಮತ್ತು ಕೆ.ಎಸ್.ಶ್ರುತಿ ದಂಪತಿ ಪುತ್ರಿ ಸಿ.ದಿವ್ಯಾ (೧೭) ಅಪಹರಣಕ್ಕೊಳಗಾಗಿರುವ ಬಾಲಕಿ. ಈಕೆ ಮಂಡ್ಯ ನಗರದ ಪೊಲೀಸ್ ಕಾಲೋನಿಯ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಳು. ಕಳೆದ ನಾಲ್ಕು ದಿನಗಳ ಹಿಂದೆ ಪಕ್ಕದ ಮನೆಯ ದೀಕ್ಷಿತ್ ಎಂಬಾತನನ್ನು ಪ್ರೀತಿಸುತ್ತಿರುವ ವಿಷಯ ತಿಳಿದ ಹೆತ್ತವರು ಈಕೆಯನ್ನು ಕಾಲೇಜಿಗೆ ಹೋಗುವುದು ಬೇಡವೆಂದು ಹೇಳಿ ಅದೇ ಗ್ರಾಮದಲ್ಲಿದ್ದ ಶ್ರುತಿಯವರ ತಂಗಿ ಶಶಿಕಲಾ ಮನೆಯಲ್ಲಿ ಬಿಟ್ಟಿದ್ದರು.
ಆ.೨೨ರಂದು ಬೆಳಗ್ಗೆ ೧೦ ಸಮಯದಲ್ಲಿ ದಿವ್ಯಾ ಬಟ್ಟೆ ಹೊಲೆಯಲು ಕೊಟ್ಟಿದ್ದು ಅದನ್ನು ತೆಗೆದುಕೊಂಡು ಬರುವುದಾಗಿ ಹೇಳಿ ಹೋದವಳು ಇದುವರೆಗೂ ಮನೆಗೆ ಬಂದಿಲ್ಲ. ದಿವ್ಯಾಳ ಸ್ನೇಹಿತರ ಮನೆ, ಸಂಬಂಧಿಕರ ಮನೆಗಳಲ್ಲಿ ವಿಚಾರಿಸಿದರೂ ಪತ್ತೆಯಾಗಲಿಲ್ಲ. ಆಕೆಯ ಮೊಬೈಲ್ ಸ್ವಿಚ್‌ಆಫ್ ಆಗಿದೆ ಎಂದು ಸೆಂಟ್ರಲ್ ಪೊಲೀಸರಿಗೆ ತಾಯಿ ಕೆ.ಎಸ್.ಶ್ರುತಿ ದೂರು ನೀಡಿದ್ದಾರೆ.