ಕನ್ನಡಪ್ರಭ ವಾರ್ತೆ ಬೆಂಗಳೂರು
ಗೊಟ್ಟಿಗೆರೆ ಸಮೀಪದ ವೀವರ್ಸ್ ಕಾಲೋನಿ ನಿವಾಸಿ ಶಬರಿ(32) ಮೃತ ದುರ್ದೈವಿ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೃತನ ತಾಯಿ ನೀಡಿದ ದೂರಿನ ಮೇರೆಗೆ ಪ್ರಕರಣದ ದಾಖಲಿಸಿಕೊಂಡು ವೀವರ್ಸ್ ಕಾಲೋನಿ ನಿವಾಸಿಗಳಾದ ನವೀನ್ ಕುಮಾರ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್ ಹಾಗೂ ಸಂತೋಷ್ ಕುಮಾರ್ ಎಂಬುವವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಘಟನೆ?: ಮೃತ ಶಬರಿ ಮತ್ತು ಬಂಧಿತ ಆರೋಪಿಗಳು ಸ್ನೇಹಿತರಾಗಿದ್ದು, ವೀವರ್ಸ್ ಕಾಲೋನಿಯ ನಿವಾಸಿಗಳಾಗಿದ್ದಾರೆ. ಗಾರೆ ಕೆಲಸ ಸೇರಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಅ.31ರ ರಾತ್ರಿ ಸುಮಾರು 9 ಗಂಟೆಗೆ ಪಾನಮತ್ತ ಶಬರಿ ವೀವರ್ಸ್ ಕಾಲೋನಿಯ 3ನೇ ಅಡ್ಡರಸ್ತೆಯ ಅಂಥೋನಿ ಎಂಬುವವರ ಅಂಗಡಿ ಬಳಿ ಹೋಗಿದ್ದಾನೆ. ಈ ವೇಳೆ ಆರೋಪಿಗಳು ದೀಪಾವಳಿ ಪ್ರಯುಕ್ತ ರಸ್ತೆಯಲ್ಲಿ ಪಟಾಕಿ ಸಿಡಿಸುತ್ತಿದ್ದರು. ಸ್ನೇಹಿತರು ಪಟಾಕಿ ಸಿಡಿಸುತ್ತಿರುವ ಸ್ಥಳಕ್ಕೆ ಶಬರಿ ತೆರಳಿದ್ದಾನೆ.ಆಟೋ ಕೊಡಿಸುವ ಆಮಿಷ: ಈ ವೇಳೆ ಆರೋಪಿಗಳು ನಾವು ಡಬ್ಬದ ಕೆಳಗೆ ಪಟಾಕಿ ಹಚ್ಚುತ್ತೇವೆ. ನೀನು ಈ ಡಬ್ಬದ ಮೇಲೆ ಕುಳಿತರೇ ನಿನಗೆ ಆಟೋ ಕೊಡಿಸುತ್ತೇವೆ ಎಂದು ಪಾನಮತ್ತ ಶಬದಿಗೆ ಆಮಿಷವೊಡ್ಡಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಶಬರಿ ಇದಕ್ಕೆ ಒಪ್ಪಿಕೊಂಡಿದ್ದಾನೆ.
ಖಾಸಗಿ ಭಾಗಗಳಿಗೆ ಗಂಭೀರ ಗಾಯ: ಬಳಿಕ ಆರೋಪಿಗಳು ಬತ್ತಿಗೆ ಬೆಂಕಿ ಹಚ್ಚಿ ದೂರಕ್ಕೆ ಓಡಿದ್ದಾರೆ. ಧೈರ್ಯದಿಂದ ಶಬರಿ ಡಬ್ಬದ ಮೇಲೆ ಕುಳಿತಿರುವಾಗ ಡಬ್ಬದ ಒಳಗೆ ಪಟಾಕಿಗಳು ಸಿಡಿದಿವೆ. ಪಟಾಕಿಗಳ ಸ್ಫೋಟಕ್ಕೆ ಶಬರಿಯ ತೊಡೆ, ಖಾಸಗಿ ಅಂಗಾಂಗಗಳು ಹಾಗೂ ವೃಷಣಗಳಿಗೆ ಗಂಭೀರ ಗಾಯವಾಗಿದೆ. ತಕ್ಷಣ ಗಾಯಾಳು ಶಬರಿಯನ್ನು ಸ್ಥಳೀಯರು ಆ್ಯಂಬುಲೆನ್ಸ್‌ನಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಆದರೆ, ಪಟಾಕಿ ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡಿದ್ದ ಶಬರಿ ಚಿಕಿತ್ಸೆ ಫಲಿಸದೆ ನ.2ರ ಸಂಜೆ ಸುಮಾರು 5.30ಕ್ಕೆ ಮೃತಪಟ್ಟಿದ್ದಾನೆ.