ಕನ್ನಡಪ್ರಭ ವಾರ್ತೆ ಬೆಂಗಳೂರು
ಉಲ್ಲಾಳ ಸಮೀಪದ ಸೊಣ್ಣೇನಹಳ್ಳಿ ನಿವಾಸಿ ಫಯಾಜ್ ಬಂಧಿತನಾಗಿದ್ದು, ಆರೋಪಿಯಿಂದ 160 ಗ್ರಾಂ ಚಿನ್ನಾಭರಣ ಹಾಗೂ ಒಂದು ಕೆ.ಜಿ. ಬೆಳ್ಳಿ ವಸ್ತುಗಳು ಸೇರಿದಂತೆ ₹12 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ವೆಂಕಟೇಗೌಡ ಲೇಔಟ್‌ನಲ್ಲಿ ಮನೆ ಬೀಗ ಮುರಿದು ಚಿನ್ನಾಭರಣಗಳನ್ನು ದುಷ್ಕರ್ಮಿ ದೋಚಿದ್ದ. ಈ ಬಗ್ಗೆ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.ಫಯಾಜ್ ವೃತ್ತಿಪರ ಮನೆಗಳ್ಳನಾಗಿದ್ದು, ಆತನ ವಿರುದ್ಧ ನಗರದ ವಿವಿಧ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ವಸತಿ ಪ್ರದೇಶದಲ್ಲಿ ಹಗಲು ಹೊತ್ತಿನಲ್ಲಿ ಅಡ್ಡಾಡಿ ಬೀಗ ಹಾಕಿದ ಮನೆಗಳನ್ನು ಆತ ಗುರುತಿಸುತ್ತಿದ್ದ. ಬಳಿಕ ರಾತ್ರಿ ವೇಳೆ ಆ ನಿಗದಿತ ಮನೆಗಳ ಬೀಗ ಮುರಿದು ಆರೋಪಿ ಕಳ್ಳತನ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಹಿಂದೆ ಆರೋಪಿಯು ರಾಮಮೂರ್ತಿನಗರ, ಬಾಣಸವಾಡಿ, ಕೆ.ಆರ್.ಪುರ ಮತ್ತು ಮಹದೇವಪುರ ಪೊಲೀಸ್ ಠಾಣೆಗಳಲ್ಲಿ ದಸ್ತಗಿರಿಯಾಗಿದ್ದು, ಕಳೆದ ಡಿಸೆಂಬರ್ ತಿಂಗಳಲ್ಲಿ ಜಾಮೀನಿನ ಮೇಲೆ ಆತ ಬಿಡುಗಡೆಯಾಗಿದ್ದ.++++ಈಗ ಬಂಧನದಿಂದ ಅಮೃತ್‌ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಮೂರು ಮನೆಗಳ್ಳತನ ಮತ್ತು ವಿವೇಕ್ ನಗರ, ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ, ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಚಿನ್ನಾಭರಣ ಮಳಿಗೆ ಕಳವು ಕೃತ್ಯಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.