ಬೆಂಗಳೂರು : ಮನೆಯ ಶೌಚಾಲಯದ ಕಿಟಕಿ ಕಂಬಿಗೆ ನೇಣು ಬಿಗಿದುಕೊಂಡು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೆಬ್ಬಾಳದ ಕನಕನಗರ ನಿವಾಸಿ ಬಹರ್ ಅಸ್ಮಾ (30) ಆತ್ಮಹತ್ಯೆಗೆ ಶರಣಾದವರು. ಭಾನುವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 10.30ರ ನಡುವೆ ಈ ಘಟನೆ ನಡೆದಿದೆ. ಪುತ್ರಿ ಬಹರ್ ಅಸ್ಮಾಳದು ಆತ್ಮಹತ್ಯೆ ಅಲ್ಲ. ಅಳಿಯ ಬಶೀರ್ ಉಲ್ಲಾಗೆ ಅನೈತಿಕ ಸಂಬಂಧವಿತ್ತು. ಆತನೇ ತಮ್ಮ ಮಗಳನ್ನು ಕೊಲೆ ಮಾಡಿ ನೇಣು ಬಿಗಿದು ಆತ್ಮಹತ್ಯೆ ಎಂದು ಬಿಂಬಿಸಿದ್ದಾನೆ ಎಂದು ಮೃತಳ ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ಮೃತಳ ಕಡೆಯವರು ನೀಡಿದ ದೂರಿನ ಮೇರೆಗೆ ಅಳಿಯ ಬಶೀರ್ ಉಲ್ಲಾ ಸೇರಿ ಆತನ ಕುಟುಂಬದ 7 ಮಂದಿ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಬಶೀರ್ ಉಲ್ಲಾನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?:ಆತ್ಮಹತ್ಯೆಗೆ ಶರಣಾದ ಬಹರ್ ಅಸ್ಮಾ ಸ್ನಾತಕೋತ್ತರ ಪದವಿಧರೆಯಾಗಿದ್ದರು. ಬಶೀರ್ ಉಲ್ಲಾ ಆಕಾಸ ಏರ್‌ಲೈನ್ಸ್ ಸಂಸ್ಥೆಯಲ್ಲಿ ಕ್ಯಾಬಿನ್ ಕ್ರ್ಯೂಗಳಿಗೆ(ಗಗನ ಸಖಿಯರು) ತರಬೇತಿ ನೀಡುವ ಕೆಲಸ ಮಾಡುತ್ತಿದ್ದ. 2023ರ ಜುಲೈನಲ್ಲಿ ಮುಸ್ಲಿಂ ಸಾಂಪ್ರದಾಯದಂತೆ ಬಹರ್ ಅಸ್ಮಾ ಮತ್ತು ಬಶೀರ್ ಉಲ್ಲಾ ಮದುವೆಯಾಗಿತ್ತು. ದಂಪತಿ ಕಳೆದ ಎರಡು ವರ್ಷಗಳಿಂದ ಹೆಬ್ಬಾಳದ ಕನಕನಗರದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.
ಸೋಮವಾರ ಬೆಳಗ್ಗೆ ಬಹರ್ ಅಸ್ಮಾ ಪೋಷಕರು ಕರೆ ಮಾಡಿದಾಗ ಅಸ್ಮಾ ಕರೆ ಸ್ವೀಕರಿಸಿಲ್ಲ. ಅನುಮಾನಗೊಂಡು ಮನೆ ಬಳಿ ಬಂದು ನೋಡಿದಾಗ ಮನೆಗೆ ಬಾಗಿಲು ಲಾಕ್ ಆಗಿದೆ, ಅಳಿಯ ಬಶೀರ್‌ಗೆ ಹಲವು ಬಾರಿ ಕರೆ ಮಾಡಿದರೂ ಕರೆ ಸ್ವೀಕರಿಸಿಲ್ಲ. ಮಧ್ಯಾಹ್ನ 1 ಗಂಟೆಗೆ ಬಶೀರ್ ಬಂದಿದ್ದು, ಮನೆಯ ಬಾಗಿಲು ತೆರೆದು ನೋಡಿದಾಗ ಶೌಚಾಲಯದಲ್ಲಿ ಬಹರ್ ಅಸ್ಮಾ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಪರಿಶೀಲನೆ ನಡೆಸಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಳಿಯನಿಗೆ ಅನೈತಿಕ ಸಂಬಂಧ:
ಅಳಿಯ ಬಶೀರ್ ಉಲ್ಲಾಗೆ ಗಗನ ಸಖಿಯರು ಸೇರಿ ಹಲವು ಯುವತಿಯರ ಜತೆಗೆ ಅನೈತಿಕ ಸಂಬಂಧವಿತ್ತು. ಈ ವಿಚಾರ ತಮ್ಮ ಮಗಳಿಗೆ ಗೊತ್ತಾಗಿ ಹಲವು ಬಾರಿ ದಂಪತಿ ನಡುವೆ ಗಲಾಟೆಯಾಗಿತ್ತು. ಬಶೀರ್‌ನ ಈ ಅನೈತಿಕ ಸಂಬಂಧದ ಬಗ್ಗೆ ಆತನ ಕುಟುಂಬದ ಸದಸ್ಯರಿಗೂ ಗೊತ್ತಿತ್ತು. ಅವರ ಸಹ ಆತನ ಬೆಂಬಲಕ್ಕೆ ನಿಂತಿದ್ದರು. ಈ ಅನೈತಿಕ ಸಂಬಂಧದ ವಿಚಾರ ಬಹರ್ ಅಸ್ಮಾಗೆ ಗೊತ್ತಾದ ಬಳಿಕ ಬಶೀರ್ ವಿನಾಕಾರಣ ಜಗಳ ತೆಗೆದು ಅಸ್ಮಾ ಜತೆಗೆ ಗಲಾಟೆ ಮಾಡುತ್ತಿದ್ದ. ಹಲವು ಬಾರಿ ಹಲ್ಲೆ ಸಹ ಮಾಡಿದ್ದ. ಇದೀಗ ಆತನೇ ತಮ್ಮ ಮಗಳನ್ನು ಕೊಲೆ ಮಾಡಿ ನೇಣು ಬಿಗಿದು ಆತ್ಮಹತ್ಯೆ ಬಿಂಬಿಸಲು ಮುಂದಾಗಿದ್ದಾನೆ ಎಂದು ಮೃತಳ ಪೋಷಕರು ಆರೋಪಿಸಿದ್ದಾರೆ.
ತಮ್ಮ ಮಗಳು ವಿದ್ಯಾವಂತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲ ಮನಸ್ಥಿತಿ ಇರಲಿಲ್ಲ. ಮಗಳ ಸಾವಿನ ಬಗ್ಗೆ ನಮಗೆ ಅನುಮಾನವಿದ್ದು, ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ದೂರಿನ ಮೇರೆಗೆ ಹೆಬ್ಬಾಳ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.