ಮೈಕ್ರೊ ಫೈನಾನ್ಸ್ ಕಿರುಕುಳಕ್ಕೆ ಮನೆ ಬಿಟ್ಟ ನೂರಾರು ಕುಟುಂಬ - ಚಾಮರಾಜನಗರ ತಾಲೂಕಲ್ಲಿ ಆಘಾತಕಾರಿ ಘಟನೆ

Published : Jan 11, 2025, 08:30 AM IST
Finance Horoscope 2025

ಸಾರಾಂಶ

ಅನಧಿಕೃತ ಮೈಕ್ರೋ ಫೈನಾನ್ಸ್‌ ಸಾಲ ವಸೂಲಿಗಾರರ ಕಿರುಕುಳ ತಡೆಯಲಾಗದೇ ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರ, ದೇಶವಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ನೂರಾರು ಕುಟುಂಬಗಳ ಜನರು ಗ್ರಾಮ ತೊರೆದ ಆಘಾತಕಾರಿ ಘಟನೆ ನಡೆದಿದೆ

  ಚಾಮರಾಜನಗರ : ಅನಧಿಕೃತ ಮೈಕ್ರೋ ಫೈನಾನ್ಸ್‌ ಸಾಲ ವಸೂಲಿಗಾರರ ಕಿರುಕುಳ ತಡೆಯಲಾಗದೇ ಚಾಮರಾಜನಗರ ತಾಲೂಕಿನ ಹೆಗ್ಗವಾಡಿಪುರ, ದೇಶವಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ನೂರಾರು ಕುಟುಂಬಗಳ ಜನರು ಗ್ರಾಮ ತೊರೆದ ಆಘಾತಕಾರಿ ಘಟನೆ ನಡೆದಿದೆ. ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಈ ಬಗ್ಗೆ ಪರಿಶೀಲಿಸಿ ಸಮಗ್ರ ವರದಿ ನೀಡಲು ಜಿಲ್ಲಾಡಳಿತ ಶುಕ್ರವಾರ ನಾಲ್ಕು ಅಧಿಕಾರಿಗಳ ತಂಡ ರಚಿಸಿದೆ.

ಹೆಗ್ಗವಾಡಿಪುರ, ದೇಶವಳ್ಳಿ ಸೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಸಾಲ ವಸೂಲಿಗಾರರ ಕಿರುಕುಳ ತಾಳಲಾರದೆ ಕಳೆದ 15 ದಿನಗಳಿಂದ ಜನರು ಗ್ರಾಮ ಬಿಟ್ಟು ದೂರದ ನೆಂಟರಿಷ್ಟರ ಊರುಗಳಿಗೆ ಹೋಗುತ್ತಿದ್ದಾರೆ. ಜೊತೆಗೆ ಪೋಷಕರು ವಾರ್ಷಿಕ ಪರೀಕ್ಷೆಗಳು ಸಮೀಪಿಸುತ್ತಿರುವ ಈ ಹೊತ್ತಲ್ಲಿ ಮಕ್ಕಳನ್ನು ಶಾಲೆ ಬಿಡಿಸಿ ತಮ್ಮೊಂದಿಗೆ ಕರೆದೊಯ್ಯುತ್ತಿದ್ದಾರೆ. ಇದರಿಂದ ಮಕ್ಕಳು ಶೈಕ್ಷಣಿಕ ಹಿನ್ನಡೆ ಅನುಭವಿಸುತ್ತಿದ್ದಾರೆ.

ಭಾರೀ ಕಿರುಕುಳ:

ಮನೆಯ ಸಣ್ಣಪುಟ್ಟ ಖರ್ಚು ವೆಚ್ಚ ಸರಿದೂಗಿಸಲು ಇಲ್ಲಿನ ಜನರು ಮೈಕ್ರೋ ಫೈನಾನ್ಸ್‌ ಕಂಪನಿಗಳಿಂದ ಸಾಲ ಪಡೆದುಕೊಂಡಿದ್ದಾರೆ. ಆದರೆ ಸಾಲದ ಕಂತು ಕಟ್ಟುವುದು ಒಂದು ದಿನ ತಡವಾದರೂ ಇನ್ನಿಲ್ಲದ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಕಿಡ್ನಿ ಕೊಡ್ತೀನಿ:

ಈ ಹಿನ್ನೆಲೆಯಲ್ಲಿ ಹೆಗ್ಗವಾಡಿಪುರ ಗ್ರಾಮಕ್ಕೆ ಶುಕ್ರವಾರ ಪತ್ರಕರ್ತರು ಭೇಟಿ ನೀಡಿದ್ದು, ಇಲ್ಲಿಯ ಮೋಹನ್ ಎಂಬ ಬಾಲಕ ಅಳಲು ತೋಡಿಕೊಂಡು ಕಣ್ಣೀರಿಟ್ಟಿದ್ದಾನೆ. ಫೈನಾನ್ಸ್‌ನವರು ಬಾಯಿಗೆ ಬಂದಂತೆ ಬಯ್ತಾರೆ, ರಾತ್ರಿ ವೇಳೆ ಹೊತ್ತಲ್ಲದ ಹೊತ್ತಿನಲ್ಲಿ ಮನೆಗೆ ಬಂದು ಕೆಟ್ಟದಾಗಿ ಮಾತನಾಡುತ್ತಾರೆ. ಕಿರುಕುಳ ಕೊಡುತ್ತಾರೆ ಎಂದು ನೋವು ತೋಡಿಕೊಂಡಿದ್ದಾನೆ.

‘ಕೈ ಮುಗಿದು ಕೇಳ್‌ಕೊಳ್ತೀನಿ ನನ್ನ ಒಂದು ಕಿಡ್ನಿ ಮಾರೋಕ್ಕೆ ಪರ್ಮಿಷನ್ ಕೊಡ್ಸಿ ಸರ್‌. ಕಿಡ್ನಿ ಮಾರಿ ಅಪ್ಪ- ಅಮ್ಮನ ಸಾಲ ತೀರಿಸಿ ಹೆಂಗೋ ಬದುಕೊಂಡು ಹೋಗ್ತೀವಿ’ ಎಂದು ಹೇಳಿ ಬಾಲಕ ಕಣ್ಣೀರಿಟ್ಟಿದ್ದಾನೆ.

ಫೈನಾನ್ಸ್ ಕಿರುಕುಳದಿಂದ ಜನರು ಊರು ತೊರೆಯತ್ತಿರುವ ಬಗ್ಗೆ ರೈತ ಮುಖಂಡರು ಸಚಿವ ಕೆ.ವೆಂಕಟೇಶ್ ಮುಂದೆ ಕಳೆದ ಮಂಗಳವಾರ ಅಳಲು ತೋಡಿಕೊಂಡಿದ್ದರು‌. ಪೋಷಕರು ಮಕ್ಕಳ ಶಿಕ್ಷಣ ಮೊಟಕುಗೊಳಿಸಿ‌ ಊರು ತೊರೆಯುತ್ತಿದ್ದಾರೆ, ಫೈನಾನ್ಸ್ ಕಿರುಕುಳಕ್ಕೆ ಕಡಿವಾಣ ಹಾಕಿ ಎಂದು ಒತ್ತಾಯಿಸಿದ್ದರು‌. ಡೀಸಿ ಮತ್ತು ಎಸ್ಪಿಗೆ ಸೂಕ್ತ ಕ್ರಮಕ್ಕೆ ಸೂಚಿಸಿ ಸಮಸ್ಯೆ ಬಗೆಹರಿಸುವುದಾಗಿ ಸಚಿವರು ಭರವಸೆ ಕೊಟ್ಟಿದ್ದರು.

ಕಿರುಕುಳ ನೀಡಿದರೆ ದೂರು ನೀಡಿ: ಡಿಸಿ ಸೂಚನೆ

ಮೈಕ್ರೋಫೈನಾನ್ಸ್ ಕಂಪನಿಗಳ ಕಿರುಕುಳದಿಂದ ಯಾರೂ ಊರು ಖಾಲಿ ಮಾಡಬೇಡಿ. ಡಿಸಿ, ಎಸಿ, ತಹಸೀಲ್ದಾರ್ ಕಚೇರಿ ಅಥವಾ ಗ್ರಾಪಂಗೆ ದೂರು ನೀಡಿ ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸೂಚಿಸಿದ್ದಾರೆ.

ನಿಮಗೆ ಯಾವುದೇ ತೊಂದರೆ ಆಗದಂತೆ ಸಮಸ್ಯೆ ಬಗೆಹರಿಸುತ್ತೇವೆ. ಸಮಗ್ರ ವರದಿ ನೀಡಲು ನಾಲ್ಕು ಅಧಿಕಾರಿಗಳ ತಂಡ ರಚಿಸಲಾಗಿದೆ. ಯಾವ ಹಣಕಾಸು ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಅಧಿಕೃತ ಎಷ್ಟು, ಅನಧಿಕೃತ ಎಷ್ಟು. ಗ್ರಾಮ ತೊರೆದಿರುವ ಕುಟುಂಬಗಳೆಷ್ಟು ಎಂಬುದನ್ನು ವರದಿ ನೀಡಲು ಸೂಚಿಸಲಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸಲಾಗುವುದು ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.

ಜನರು ಸಹ ಅಧಿಕೃತ ಬ್ಯಾಂಕ್ ಹಾಗೂ ಸಹಕಾರ ಸಂಘಗಳ ಮೂಲಕ ವ್ಯವಹರಿಸಬೇಕು. ಅನಧಿಕೃತ ಹಣಕಾಸು ಸಂಸ್ಥೆಗಳು, ಲೇವಾದೇವಿದಾರರ ಬಗ್ಗೆ ಎಚ್ಚರ ವಹಿಸಬೇಕು ಎಂದು ಅವರು ತಿಳಿಸಿದರು.

ತುಮಕೂರು: ಮೈಕ್ರೋ ಫೈನಾನ್ಸ್ ಕಿರುಕುಳ ತಾಳಲಾರದೆ ತಿಪಟೂರಿನ ಭೋವಿ ಕಾಲೋನಿ ವಾಸಿ ಸಾದೀಕ್ ಬೇಗಂ(42) ಶುಕ್ರವಾರ ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದಾರೆ. ಮೈಕ್ರೋ ಫೈನಾನ್ಸ್ ನಲ್ಲಿ 2 ಲಕ್ಷಕ್ಕೂ ಹೆಚ್ಚು ಹಣ ಸಾಲ ಮಾಡಿದ್ದು, ಸಾಲ ತೀರಿಸುವಂತೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ವಿಡಿಯೋದಲ್ಲಿ ಆರೋಪಿಸಿದ್ದಾರೆ. ==

PREV

Recommended Stories

ಜಮೀನು ಅಕ್ರಮ ಪರಭಾರೆ: ಇಬ್ಬರ ಬಂಧನ
ರೈತನ ಬ್ಯಾಂಕ್ ಖಾತೆಯಲ್ಲಿದ್ದ ಕೋಟ್ಯಂತರ ರು.ಗೆ ಕದೀಮರಿಂದ ಕನ್ನ..!