;Resize=(412,232))
ಹೈದರಾಬಾದ್ : ‘ಅಭಿವೃದ್ಧಿ ಎಂಬುದು ಮ್ಯಾಜಿಕ್ ಮೂಲಕ ಸಾಧ್ಯವಿಲ್ಲ. ಅದನ್ನು ಸಾಧಿಸಲು ಸುಸ್ಥಿರ ಯೋಜನೆ, ಪರಿಶ್ರಮ, ಪ್ರಾಮಾಣಿಕತೆ ಅಗತ್ಯ. ಹೈದ್ರಾಬಾದ್ ಮತ್ತು ಬೆಂಗಳೂರು ಪರಸ್ಪರ ಸ್ಪರ್ಧಿಗಳಲ್ಲ’ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ಹೂಡಿಕೆಗಳನ್ನು ಸೆಳೆಯುವ ಸಲುವಾಗಿ ಕರ್ನಾಟಕ ಮತ್ತು ತೆಲಂಗಾಣ ಪೈಪೋಟಿಗೆ ಬಿದ್ದಿರುವ ಹೊತ್ತಿನಲ್ಲೇ, ಹೈದರಾಬಾದ್‌ನಲ್ಲಿ ಸೋಮವಾರ ನಡೆದ ತೆಲಂಗಾಣ ರೈಸಿಂಗ್ ಜಾಗತಿಕ ಸಮ್ಮೇಳನದಲ್ಲಿ ಅವರು ಹೀಗೆ ಹೇಳಿದ್ದಾರೆ.
‘ತೆಲಂಗಾಣವು ಬೆಂಗಳೂರು ಹಾಗೂ ಕರ್ನಾಟಕದ ಜೊತೆ ಸ್ಪರ್ಧಿಸುತ್ತಿದೆಯೇನೋ ಅಂತ ಅಂದುಕೊಂಡಿದ್ದೆ. ಆದರೆ ತೆಲಂಗಾಣ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. 2047ರ ವೇಳೆಗೆ ಇದು ಯಾವ ಮಟ್ಟಕ್ಕೆ ಬೆಳೆಯಲಿದೆ ಎಂಬುದರ ಚಿತ್ರಣ ಕೊಡುತ್ತಿದೆ. ಜೊತೆಗೂಡುವುದು ಆರಂಭ, ಜೊತೆಗೂಡಿ ಚರ್ಚಿಸುವುದು ಪ್ರಗತಿ, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು’ ಎಂದ ಶಿವಕುಮಾರ್, 2 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ತೆಲಂಗಾಣ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಬಗ್ಗೆ ಮಾತನಾಡುತ್ತಾ, ‘ಈ ಸಮ್ಮೇಳನ ಇವತ್ತಿನ ಬಗ್ಗೆಯಲ್ಲ, ಭವಿಷ್ಯದ ಬಗ್ಗೆ ಚಿಂತನೆ ನಡೆಸಿದೆ. 10 ವರ್ಷಗಳ ನಂತರ ತೆಲಂಗಾಣದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಆಯ್ಕೆ ಮಾಡಿ, ಈ ಸರ್ಕಾರಕ್ಕೆ ವಿಶ್ವಾಸ ತುಂಬಿದ ಜನರಿಗೆ ಅಭಿನಂದನೆಗಳು. ಸಿಎಂ ರೇವಂತ್ ರೆಡ್ಡಿ ಹಾಗೂ ಅವರ ಸಂಪುಟ ಸಚಿವರು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ. ಎಲ್ಲರೂ ಒಟ್ಟಿಗೆ ಸೇರಿ ಭವಿಷ್ಯದತ್ತ ಹೆಜ್ಜೆ ಹಾಕೋಣ’ ಎಂದರು.
ಮುಂದುವರೆದು, ‘ದೇಶದ ಐಟಿ ರಫ್ತಿನಲ್ಲಿ ಬೆಂಗಳೂರು ಶೇ.43ರಷ್ಟು ಪಾಲು ಹೊಂದಿದೆ. ತೆಲಂಗಾಣ ಈ ವಿಚಾರದಲ್ಲಿ ಕಡಿಮೆ ಇದ್ದರೂ ಈ ರಾಜ್ಯದ ದೂರದೃಷ್ಟಿ, ಆಲೋಚನೆ ಬಹಳ ದೊಡ್ಡದಾಗಿದೆ. ನಿಮಗೆ ಬೆಂಬಲ ನೀಡಲು ನಾನು ಈ ಕಾರ್ಯಕ್ರಮಕ್ಕೆ ಬಂದಿರುವೆ. ದೇಶದ ಪ್ರಗತಿಯ ಬಗ್ಗೆ ಚರ್ಚೆ ಮಾಡುವಾಗ ಬೆಂಗಳೂರು ಹಾಗೂ ಹೈದರಾಬಾದ್ ಕೊಡುಗೆ ಸ್ಮರಿಸದೆ ಚರ್ಚೆ ಪೂರ್ಣವಾಗುವುದಿಲ್ಲ. ಕೆಲವರು, ಬೆಂಗಳೂರಿಗೆ ಹೈದರಾಬಾದ್ ಪ್ರತಿಸ್ಪರ್ಧಿ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಸತ್ಯ ಬೇರೆಯದೆ ಇದೆ. ನಾವು ಸ್ಪರ್ಧಿಗಳಲ್ಲ. ಪರಸ್ಪರ ಸಹಕಾರ ನೀಡಿ, ಜೊತೆಯಾಗಿ ಪ್ರಗತಿ ಸಾಧಿಸುವ ಮೂಲಕ ಭವಿಷ್ಯ ಭಾರತ ನಿರ್ಮಾಣಕ್ಕೆ ಕೊಡುಗೆಯಾಗೋಣ’ ಎಂದರು.
‘ದಕ್ಷಿಣ ಭಾರತವು ದೇಶದ ಜಿಡಿಪಿಯಲ್ಲಿ ಶೇ.31ರಷ್ಟು ಕೊಡುಗೆ ನೀಡಿದೆ. ಮುಂದೆ ಇದು ಶೇ.43ಕ್ಕೆ ಏರಿಕೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನ ಬಗ್ಗೆ ನಾನು ಹೆಚ್ಚು ಮಾತನಾಡಿದರೆ ನಿಮಗೆ ಸ್ಪರ್ಧೆ ನೀಡುತ್ತಿರುವಂತೆ ಭಾಸವಾದೀತು. ಕ್ಯಾಲಿಫೋರ್ನಿಯಾದಲ್ಲಿ 13 ಲಕ್ಷ ಇಂಜಿನಿಯರ್ ವೃತ್ತಿಪರರು ಇದ್ದರೆ, ಬೆಂಗಳೂರಿನಲ್ಲಿ 25 ಲಕ್ಷ ಇಂಜಿನಿಯರ್ ಗಳು ಕೆಲಸ ಮಾಡುತ್ತಿದ್ದಾರೆ. ಹೈದರಾಬಾದ್ ಕೂಡ ಉತ್ತಮ ಸಾಮರ್ಥ್ಯ ಹೊಂದಿದೆ. ನಾವು ಒಟ್ಟಾಗಿ ಶ್ರಮಿಸೋಣ’ ಎಂದು ಕರೆ ನೀಡಿದರು.
‘ಇಲ್ಲಿ ಪಾರದರ್ಶಕವಾದ ಮಾದರಿ ಪರಿಚಯಿಸಲಾಗುತ್ತಿದ್ದು, ಈ ನಗರ ಆರೋಗ್ಯ, ತಂತ್ರಜ್ಞಾನ, ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕ್ಷಮತೆ ಹೊಂದಿದೆ. ದಕ್ಷಿಣ ಭಾರತದಲ್ಲಿರುವ ಮಾನವ ಸಂಪನ್ಮೂಲ ಬೇರೆ ಯಾವುದೇ ರಾಜ್ಯ ಅಥವಾ ದೇಶದಲ್ಲಿಲ್ಲ. ಈ ಕಾರ್ಯಕ್ರಮಕ್ಕೆ ಜಗತ್ತಿನ ಪ್ರಮುಖ ಕೈಗಾರಿಕೋದ್ಯಮಿಗಳು ಬಂದಿದ್ದು, ತೆಲಂಗಾಣ ರಾಜ್ಯ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ಉತ್ತಮ ದೂರದೃಷ್ಟಿ ಹೊಂದಿದೆ’ ಎಂದು ತಿಳಿಸಿದರು.
‘ನಮ್ಮ ರಾಜ್ಯದಲ್ಲಿ ಇಂದಿನಿಂದ ವಿಧಾನ ಮಂಡಲ ಅಧಿವೇಶನ ಆರಂಭವಾಗಿದ್ದರೂ ಇಲ್ಲಿಗೆ ಬಂದಿದ್ದೇನೆ. ಇಡೀ ದಕ್ಷಿಣ ಭಾರತ ತೆಲಂಗಾಣ ರಾಜ್ಯದ ಬೆನ್ನಿಗೆ ನಿಲ್ಲುವ ಮೂಲಕ ದೇಶದ ಪ್ರಗತಿಗೆ ಶ್ರಮಿಸಲಿದೆ. ನಾನು ಇಲ್ಲಿ ಕರ್ನಾಟಕದ ಡಿಸಿಎಂ ಮಾತ್ರ ಆಗಿ ಬಂದಿಲ್ಲ. ದಕ್ಷಿಣ ಭಾರತದ ಧ್ವನಿಯಾಗಿ ಬಂದಿದ್ದೇನೆ. ದೇಶದ ಪ್ರಗತಿಯಲ್ಲಿ ದಕ್ಷಿಣ ಭಾರತದ ಕೊಡುಗೆ ಅಪಾರ’ ಎಂದು ಡಿಸಿಎಂ ಹೇಳಿದರು.