‘ಬಂಗಾರಿ’ ಕೇಸಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?

Published : Dec 09, 2025, 09:18 AM IST
aishwarya gowda

ಸಾರಾಂಶ

ಬಮೂಲ್ ಅಧ್ಯಕ್ಷ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರಿನಲ್ಲಿ ಕೋಟ್ಯಂತರ ರು. ವಂಚನೆ ಪ್ರಕರಣ ಸಂಬಂಧ ಚಲನಚಿತ್ರ ನಟ ಧರ್ಮ ಅವರಿಗೆ ಧ್ವನಿ ಪರೀಕ್ಷೆಯ ಸಂಕಷ್ಟ ಎದುರಾಗಿದೆ.

 ಗಿರೀಶ್ ಮಾದೇನಹಳ್ಳಿ

 ಬೆಂಗಳೂರು :  ಬಮೂಲ್ ಅಧ್ಯಕ್ಷ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರಿನಲ್ಲಿ ಕೋಟ್ಯಂತರ ರು. ವಂಚನೆ ಪ್ರಕರಣ ಸಂಬಂಧ ಚಲನಚಿತ್ರ ನಟ ಧರ್ಮ ಅವರಿಗೆ ಧ್ವನಿ ಪರೀಕ್ಷೆಯ ಸಂಕಷ್ಟ ಎದುರಾಗಿದೆ.

ಚಿನ್ನದ ವ್ಯಾಪಾರಿ ಜತೆ ಡಿ.ಕೆ.ಸುರೇಶ್ ಅವರ ಧ್ವನಿ ಅನುಕರಿಸಿ ಧರ್ಮ ಮಾತನಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದಕ್ಕೆ ಪೂರಕವಾಗಿ ಆಡಿಯೋಗಳು ಬಹಿರಂಗವಾಗಿದ್ದವು. ಈ ಆಡಿಯೋಗಳ ಸಾಚಾತನ ಪರೀಕ್ಷೆಗೆ ಮುಂದಾಗಿರುವ ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಅಧಿಕಾರಿಗಳು, ಧರ್ಮ ಅವರ ಧ್ವನಿ ಪರೀಕ್ಷೆಗೆ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಈ ಪರೀಕ್ಷೆ ಸಂಬಂಧ ಧರ್ಮ ಅವರಿಂದ ಧ್ವನಿ ಮಾದರಿ ಸಂಗ್ರಹಕ್ಕೆ ಅನುಮತಿ ಕೋರಿ ನ್ಯಾಯಾಲಯಕ್ಕೆ ಸಿಐಡಿ ಮನವಿ ಮಾಡಿದೆ. ನ್ಯಾಯಾಲಯದ ಸಮ್ಮತಿಸಿದರೆ ನಟನಿಗೆ ಅಗ್ನಿ ಪರೀಕ್ಷೆ ಎದುರಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ನಟ ಮತ್ತು ಸ್ನೇಹಿತೆಗೆ ಡ್ರೀಲ್‌:

ಬಹುಕೋಟಿ ವಂಚನೆ ಪ್ರಕರಣ ಸಂಬಂಧ ನ್ಯಾಯಾಲಯ ತನಿಖೆಗೆ ಹಸಿರು ನಿಶಾನೆ ತೋರಿದ ಬೆನ್ನಲ್ಲೇ ನಟ ಧರ್ಮ ಹಾಗೂ ಅವರ ಸ್ನೇಹಿತೆ ಐಶ್ವರ್ಯಗೌಡ ಅವರನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ. ನಾಲ್ಕೈದು ದಿನಗಳಿಂದ ನಿರಂತರವಾಗಿ ಇಬ್ಬರನ್ನೂ ಪ್ರತ್ಯೇಕವಾಗಿ ಪ್ರಶ್ನಿಸಿ ಅಧಿಕಾರಿಗಳು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ನಟ ಧರ್ಮ ಅಲವತ್ತುಕೊಂಡಿರುವುದಾಗಿ ತಿಳಿದು ಬಂದಿದೆ.

ತಾನು ಮಾಜಿ ಸಂಸದ ಸುರೇಶ್ ಅವರ ಸಹೋದರಿ ಎಂದು ಹೇಳಿಕೊಂಡು ಚಿನ್ನ ವ್ಯಾಪಾರಿ ವನಿತಾ ಐತಾಳ್ ಅವರಿಂದ 14 ಕೆಜಿ ಚಿನ್ನ ಪಡೆದು ಐಶ್ವರ್ಯಗೌಡ ವಂಚಿಸಿದ್ದ ಆರೋಪ ಕೇಳಿ ಬಂದಿತ್ತು. ಈ ಕೃತ್ಯದಲ್ಲಿ ಸುರೇಶ್ ಅವರ ಸೋಗಿನಲ್ಲಿ ನಟ ಧರ್ಮ ಮಾತನಾಡಿದ್ದರು ಎನ್ನಲಾಗಿತ್ತು. ಈ ಬಗ್ಗೆ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಯಿತು. ಬಳಿಕ ಈ ಮೋಸದ ಕುರಿತು ಸಿಐಡಿ ತನಿಖೆಗೆ ರಾಜ್ಯ ಸರ್ಕಾರ ಆದೇಶಿಸಿತ್ತು. ತಮ್ಮ ವಿರುದ್ಧ ತನಿಖೆಗೆ ತಡೆ ಕೋರಿ ಆರೋಪಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ಕೊನೆಗೆ ನ್ಯಾಯಾಲಯವು, ತಡೆಯಾಜ್ಞೆ ತೆರವುಗೊಳಿಸಿ ಸಿಐಡಿ ತನಿಖೆಗೆ ಅಸ್ತು ಎಂದಿತ್ತು. ಈ ಬೆನ್ನಲ್ಲೇ ಸಿಐಡಿ ತನಿಖೆಗೆ ಧರ್ಮ ಹಾಗೂ ಐಶ್ವರ್ಯಗೌಡ ಹಾಜರಾಗಿದ್ದಾರೆ.

ಧ್ವನಿ ಪರೀಕ್ಷೆ ಕಂಟಕ ಯಾಕೆ?

ವಂಚನೆ ಪ್ರಕರಣದಲ್ಲಿ ಚಿನ್ನದ ವ್ಯಾಪಾರಿ ವನಿತಾ ಜತೆ ಮಾಜಿ ಸಂಸದ ಸುರೇಶ್ ಎಂದು ಹೇಳಿಕೊಂಡು ಧರ್ಮ ಮಾತನಾಡಿದ್ದರು ಎಂಬ ಆರೋಪವಿದೆ. ಈ ಬಗ್ಗೆ ಬಹಿರಂಗವಾದ ಆಡಿಯೋದಲ್ಲಿ ಪುರುಷ ದನಿ ಇದೆ. ಹೀಗಾಗಿ ಆಡಿಯೋದಲ್ಲಿರುವ ದನಿ, ಧರ್ಮ ಅವರ ಧ್ವನಿ ಸಾಮ್ಯತೆ ಬಗ್ಗೆ ಪರೀಕ್ಷೆ ನಡೆಯಲಿದೆ. ಒಂದು ವೇಳೆ ಹೊಂದಾಣಿಕೆ ಪತ್ತೆಯಾದರೆ ಪ್ರಕರಣದಲ್ಲಿ ಪ್ರಬಲವಾದ ತಾಂತ್ರಿಕ ಸಾಕ್ಷ್ಯ ಸಿಗಲಿದೆ ಎನ್ನಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಶಾಲಾ ಬಸ್ ಅಡ್ಡಗಟ್ಟಿ ಕಿರಿಕ್ ಮಾಡಿದ ಕಿಡಿಗೇಡಿಗಳ ಬಂಧನ
ಹೈದ್ರಾಬಾದ್‌, ಬೆಂಗ್ಳೂರು ಸ್ಪರ್ಧಿಗಳಲ್ಲ : ಡಿಕೆಶಿ