ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಉಪವಿಭಾಗ ಸೆಸ್ಕಾಂನಲ್ಲಿ ಮೀಟರ್ ರೀಡರ್ ಆಗಿ ಕೆಲಸ ನಿರ್ವಹಿಸುತ್ತಿರುವ ಪಿ.ಸಿ.ಚನ್ನಕೇಶವ (೪೫) ಹಲ್ಲೆಗೊಳಗಾದ ವ್ಯಕ್ತಿ. ಈತನ ಮೇಲೆ ಪ್ರಕಾಶ್, ಆತನ ಮಗ ಅರ್ಜುನ, ಹೆಂಡತಿ, ತಾಯಿ ಹಾಗೂ ಮೊಮ್ಮಕ್ಕಳು ಸೇರಿ ಹಲ್ಲೆ ನಡೆಸಿದ್ದಾರೆಂದು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಡಿ.೭ರಂದು ಗಾಂಧಿನಗರದ ಏಳನೇ ಕ್ರಾಸ್‌ನಲ್ಲಿರುವ ಪ್ರಕಾಶ್ ಅವರ ಮನೆಗೆ ಚನ್ನಕೇಶವ ಮೀಟರ್ ರೀಡಿಂಗ್‌ಗೆ ತೆರಳಿದ್ದಾಗ ಮೀಟರ್ ದುಸ್ಥಿತಿಯಲ್ಲಿರುವುದನ್ನು ಗಮನಿಸಿದ್ದಾರೆ. ಅಲ್ಲಿರುವ ತೊಂದರೆಗಳನ್ನು ಮನೆಯವರಿಗೆ ವಿವರಿಸಿ ಹೇಳಿ ಮೀಟರ್ ಸರಿಪಡಿಸಿಕೊಳ್ಳುವಂತೆ ತಿಳಿವಳಿಕೆ ಹೇಳಿದರು. ನಂತರ ಮುಂದಿನ ಮನೆಗೆ ಹೋಗಿ ವಿದ್ಯುತ್ ಬಿಲ್ ನೀಡುತ್ತಿದ್ದಾಗ ಪ್ರಕಾಶ್‌ರವರ ಮಗ ಅರ್ಜುನ ನನಗೆ ಮೊಬೈಲ್ ಕರೆ ಮಾಡಿ ಮನೆಯ ಹತ್ತಿರ ಬರುವಂತೆ ಕರೆಸಿಕೊಂಡರು.ಚನ್ನಕೇಶವ ಅಲ್ಲಿಗೆ ಹೋದಾಗ ಐದಾರು ಜನ ಗುಂಪಿನವರಲ್ಲಿ ಅರ್ಜುನ ಎಂಬಾತ ನಿನ್ನ ಕೆಲಸ ಎಷ್ಟಿದೆ ಅಷ್ಟನ್ನು ಮುಗಿಸಿಕೊಂಡು ಹೋಗಬೇಕು. ಮೀಟರ್ ಬೋರ್ಡ್ ಹೇಗಾದರೂ ಇರಲಿ. ನೀನು ಬಿಲ್ಲು ಕೊಟ್ಟು ಹೋಗಬೇಕು. ನಮಗೇನು ನೀನು ಬುದ್ಧಿ ಹೇಳೋದು ಎಂದು ಏರಿದ ಧ್ವನಿಯಲ್ಲಿ ತಿಳಿಸಿದರು. ಇದು ನನ್ನ ಕರ್ತವ್ಯ ಆದ್ದರಿಂದ ತಿಳಿಸಿದ್ದೇನೆ ಎಂದಾಗ ರೊಚ್ಚಿಗೆದ್ದ ಆತ ಅವಾಚ್ಯಶಬ್ಧಗಳಿಂದ ನಿಂದಿಸಿ ಏಕಾಏಕಿ ಚನ್ನಕೇಶವನ ಮೇಲೆ ರಿಪೀಸ್ ಪಟ್ಟಿಯಿಂದ ತಲೆಗೆ ಹೊಡೆದನು. ನಂತರ ಆತನ ತಂದೆ ಪ್ರಕಾಶ್, ಹೆಂಡತಿ ಹಾಗೂ ಕುಟುಂಬದವರೆಲ್ಲರೂ ಸೇರಿ ಚನ್ನಕೇಶವ ಮುಂದೆ ಹೋಗದಂತೆ ತಬ್ಬಿ ಹಿಡಿದು ಮನೆಯ ಆವರಣದ ಒಳಗಡೆ ಎಳೆದೊಯ್ದು ರಿಪೀಸ್ ಪಟ್ಟಿ, ಇಟ್ಟಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದರು. ಚನ್ನಕೇಶವ ಎಷ್ಟೇ ಬೇಡಿಕೊಂಡರೂ ಬಿಡದೆ ರಕ್ತ ಸುರಿಯುತ್ತಿದ್ದರೂ ಆತನ ಮೊಬೈಲ್, ದ್ವಿಚಕ್ರ ವಾಹನವನ್ನು ಬಲವಂತವಾಗಿ ಕಸಿದುಕೊಂಡು ಮತ್ತೆ ಹಲ್ಲೆ ನಡೆಸಿ ಮನೆಯ ಆವರಣದ ಒಳಗಡೆ ಕೂಡಿಹಾಕಿದರು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಚನ್ನಕೇಶವ ಸಂಬಂಧಿ ಹರ್ಷ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಆಸ್ಪತ್ರೆಗೆ ತೆರಳಿದರು ಎನ್ನಲಾಗಿದೆ.ಹಲ್ಲೆ ನಡೆಸಿರುವ ಆರೋಪಿಗಳ ವಿರುದ್ಧ ಪಶ್ಚಿಮಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.