ಕನ್ನಡಪ್ರಭ ವಾರ್ತೆ ಬೆಂಗಳೂರು
ರಾಜಧಾನಿಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿ ₹50 ಸಾವಿರಕ್ಕೂ ಅಧಿಕ ದಂಡ ಮೊತ್ತ ಬಾಕಿ ಉಳಿಸಿಕೊಂಡಿರುವ ವಾಹನ ಮಾಲೀಕರ ಮನೆಗೆ ನಗರ ಸಂಚಾರ ಪೊಲೀಸರು ಭೇಟಿ ನೀಡಿ ಬಾಕಿ ದಂಡ ವಸೂಲಿಗೆ ಮುಂದಾಗಿದ್ದಾರೆ.
ನಗರದ ಎಲ್ಲಾ ಸಂಚಾರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ದಾಖಲಾಗಿರುವ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಪರಿಶೀಲಿಸಿ, ₹50 ಸಾವಿರಕ್ಕೂ ಅಧಿಕ ದಂಡದ ಮೊತ್ತವನ್ನು ಬಾಕಿ ಉಳಿಸಿಕೊಂಡಿರುವ ವಾಹನಗಳ ಪಟ್ಟಿ ಮಾಡಲಾಗಿದೆ.
ಸದ್ಯಕ್ಕೆ ನಗರದಲ್ಲಿ 2,681 ವಾಹನಗಳ ಮಾಲೀಕರು ₹50 ಸಾವಿರಕ್ಕೂ ಅಧಿಕ ದಂಡ ಬಾಕಿ ಉಳಿಸಿಕೊಂಡಿರುವುದು ಪತ್ತೆಯಾಗಿದೆ.
ಕಳೆದ 10 ದಿನಗಳಲ್ಲಿ 120 ಮಂದಿ ವಾಹನ ಮಾಲೀಕರ ವಿಳಾಸ ಪತ್ತೆಹಚ್ಚಿ ಬಾಕಿ ದಂಡ ವಸೂಲಿ ಮಾಡಲಾಗಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದರು.
ಕೆಲ ವಾಹನ ಸವಾರರು ಬೇರೆ ವ್ಯಕ್ತಿಗಳಿಗೆ ವಾಹನಗಳನ್ನು ಮಾರಾಟ ಮಾಡಿದ್ದಾರೆ. ಅಂತವರಿಗೆ ಬಾಕಿ ದಂಡ ಪಾವತಿಸಲು ನೋಟಿಸ್ ನೀಡಿ ಕಾಲಾವಕಾಶ ನೀಡಲಾಗಿದೆ.
ನೋಟಿಸ್ ನೀಡಿಯೂ ದಂಡ ಪಾವತಿಸದಿದ್ದಲ್ಲಿ ಅಂತಹ ವಾಹನ ಮಾಲೀಕರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗುವುದು. ಬಳಿಕ ನ್ಯಾಯಾಲಯದಲ್ಲಿ ವಿಚಾರಣೆ ಎದುರಿಬೇಕಾಗುತ್ತದೆ ಎಂದು ಹೇಳಿದರು.
6 ವರ್ಷ+ ಮಕ್ಕಳಿಗೆ ಹೆಲ್ಮೆಟ್ ಕಡ್ಡಾಯ
ಇನ್ನು ಆರು ವರ್ಷದೊಳಗಿನ ಮಕ್ಕಳು ಹೆಲ್ಮೆಟ್ ಧರಿಸಲು ವಿನಾಯಿತಿ ಇದೆ. ಆರು ವರ್ಷದ ಮೇಲ್ಪಟ್ಟ ಮಕ್ಕಳನ್ನು ದ್ವಿಚಕ್ರ ವಾಹನದಲ್ಲಿ ಕರೆದೊಯ್ಯುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು.
ಇನ್ನು ಆಟೋಗಳಲ್ಲಿ 10-12 ಶಾಲಾ ಮಕ್ಕಳನ್ನು ಕರೆದೊಯ್ಯುವುದು ತಪ್ಪು. ನಿಯಮದ ಪ್ರಕಾರ ಆಟೋದಲ್ಲಿ ಮೂರು ಮಾತ್ರ ಪ್ರಯಾಣಿಸಬೇಕು. ಆಟೋ, ಆಮ್ನಿ ವಾಹನಗಳಲ್ಲಿ ನಿಗದಿತ ಮಿತಗಿಂತ ಹೆಚ್ಚಿನ ಮಕ್ಕಳನ್ನು ಶಾಲೆಗೆ ಕರೆದೊಯ್ಯುವುದು ಸರಿಯಲ್ಲ.
ಅದು ಸುರಕ್ಷಿತವೂ ಅಲ್ಲ. ಹೀಗಾಗಿ ಅಂತಹ ವಾಹನಗಳ ವಿರುದ್ಧವೂ ನಗರದಲ್ಲಿ ವಿಶೇಷ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಎಂ.ಎನ್.ಅನುಚೇತ್ ತಿಳಿಸಿದರು.