ಕೆ.ಆರ್.ಪೇಟೆ:
ಪಟ್ಟಣದ ದೇವೀರಮ್ಮಣ್ಣಿ ಕೆರೆಯಲ್ಲಿ ಬುಧವಾರ ಬೆಳಿಗ್ಗೆ ಅಪರಿಚಿತ ವ್ಯಕ್ತಿಯ ಶವ ಕಂಡು ಬಂದಿತ್ತು. ತನಿಖೆ ನಡೆಸಿದ ಪೋಲೀಸರಿಗೆ ಇದು ತಾಲೂಕಿನ ಕರೋಟಿ ಗ್ರಾಮದ ರೈತ ದೇವರಾಜು ಅವರ ಶವ ಎನ್ನುವುದು ಪತ್ತೆಯಾಯಿತು.
ಆತ್ಮಹತ್ಯೆ ಮಾಡಿಕೊಂಡ ದೇವರಾಜುಗೆ ಸ್ವಗ್ರಾಮ ವ್ಯಾಪ್ತಿಯಲ್ಲಿ ಒಂದು ಎಕರೆ ಕೃಷಿ ಭೂಮಿ ಇದ್ದು ಕಬ್ಬು ಮತ್ತಿತರ ಬೆಳೆ ಬೆಳೆಯುತ್ತಿದ್ದ. ಕೃಷಿ ಭೂಮಿಯಲ್ಲಿ ಅಂತರ್ಜಲ ಮಟ್ಟ ಕುಸಿದು ನಾಲ್ಕಾರು ಬೋರ್ ಕೊರೆಸಿದರೂ ಸಮರ್ಪಕ ನೀರು ಬರಲಿಲ್ಲ. ಬೋರ್ ಕೊರೆಸಲು ಮತ್ತು ಕೃಷಿ ಚಟುವಟಿಗಳನ್ನು ನಿರ್ವಹಿಸಲು ಮೃತ ದೇವರಾಜು ಖಾಸಗಿ ವ್ಯಕ್ತಿಗಳು ಮತ್ತು ವಿವಿಧ ಸಂಘ ಸಂಸ್ಥೆಗಳಲ್ಲಿಂದ ಸುಮಾರು 10 ಲಕ್ಷಕ್ಕೂ ಅಧಿಕ ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ.ಕೊಳವೆ ಬಾವಿಯಲ್ಲಿ ಸಮರ್ಪಕ ನೀರು ಬಾರದೆ ಕಿನ್ನತೆಗೆ ಒಳಗಾಗಿದ್ದ ದೇವರಾಜು ಸಾಲದ ಬಾಧೆ ತಾಳಲಾರದೆ ಮನನೊಂದು ಪಟ್ಟಣದ ದೇವೀರಮ್ಮಣ್ಣಿ ಕೆರೆಗೆ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಮೃತ ದೇವರಾಜು ಪತ್ನಿ, ಓರ್ವ ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾನೆ.