ಕಾಂಗ್ರೆಸ್‌ ಅಭ್ಯರ್ಥಿ ಡಿಕೆಸು ಆಪ್ತನ ಮೇಲೆ ಐಟಿ ದಾಳಿ

KannadaprabhaNewsNetwork |  
Published : Apr 25, 2024, 02:11 AM ISTUpdated : Apr 25, 2024, 04:53 AM IST
ಐಟಿ | Kannada Prabha

ಸಾರಾಂಶ

ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ಆಪ್ತನ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. 87 ಲಕ್ಷ ಹಣವನ್ನು ಜಪ್ತಿ ಮಾಡಲಾಗಿದೆ.

 ಬೆಂಗಳೂರು ;  ರಾಜ್ಯದ ಮೊದಲ ಹಂತದ ಲೋಕಸಭಾ ಚುನಾವಣೆಗೆ ಕೆಲವೇ ತಾಸುಗಳು ಬಾಕಿ ಇರುವ ಹೊತ್ತಿನಲ್ಲಿಯೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ಆಪ್ತ ಹಾಗೂ ಬಿಬಿಎಂಪಿ ಮಾಜಿ ಸದಸ್ಯರೊಬ್ಬರ ಮನೆ ಮೇಲೆ ದಾಳಿ ನಡೆಸಿ ನಗ-ನಾಣ್ಯ ವಶಪಡಿಸಿಕೊಂಡಿದ್ದಾರೆ.

ಬಿಬಿಎಂಪಿ ಮಾಜಿ ಸದಸ್ಯ ಗಂಗಾಧರ್‌ ಅವರ ಕೋಣನಕುಂಟೆ ಕ್ರಾಸ್‌ ಬಳಿ ಇರುವ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ 87 ಲಕ್ಷ ರು. ನಗದು ಸೇರಿದಂತೆ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ಮತ್ತು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ಗಂಗಾಧರ್‌ ನಿವಾಸದಲ್ಲಿ ಸತತ 12 ಗಂಟೆಗಳ ಕಾಲ ಶೋಧ ಕಾರ್ಯ ನಡೆಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಹಣ ಹಂಚಿಕೆ ಮಾಡಲು ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದಾರೆ. ಮೂರು ಕಾರುಗಳಲ್ಲಿ ಒಟ್ಟು 11 ಅಧಿಕಾರಿಗಳು ಮನೆಗೆ ಆಗಮಿಸಿ ತಪಾಸಣೆ ಕೈಗೊಂಡರು ಎನ್ನಲಾಗಿದೆ.

ಕೆಲವು ದಾಖಲೆಗಳನ್ನು ವಶಕ್ಕೆ ಪಡೆದಿರುವ ಐಟಿ ಅಧಿಕಾರಿಗಳು ವಿಚಾರಣೆ ಹಾಜರಾಗುವಂತೆ ನೊಟೀಸ್‌ ಜಾರಿ ಮಾಡಲಾಗಿದೆ. ವಿಚಾರಣೆ ವೇಳೆ ಪತ್ತೆಯಾದ ವಸ್ತುಗಳು ಮೌಲ್ಯವು ಮತ್ತು ಹೇಳಿಕೆಯಲ್ಲಿ ನೀಡಲಾಗುವ ಮೌಲ್ಯವು ಹೊಂದಾಣಿಕೆಯಾಗಲಿದೆಯೇ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

ಶೋಧ ಕಾರ್ಯ ಮುಗಿಸಿದ ಬಳಿಕ ಮಾತನಾಡಿದ ಗಂಗಾಧರ್‌, ಕಾರ್ಯಾಚರಣೆ ವೇಳೆ ಬಂದಿದ್ದ ಬಹುತೇಕ ಅಧಿಕಾರಿಗಳು ಉತ್ತರ ಭಾರತದವರಾಗಿದ್ದರು. ಅವರ ಭಾಷೆ ನಮಗೆ ಅರ್ಥವಾಗುತ್ತಿರಲಿಲ್ಲ. ಮನೆಗೆ ಬಂದ ತಕ್ಷಣ ದೌರ್ಜನ್ಯ ಮಾಡುವ ರೀತಿಯಲ್ಲಿ ಮಾತನಾಡಿದರು. ಅವರು ಬಳಸಿದ ಭಾಷೆಯು ಕಾಂಗ್ರೆಸ್‌ ಪಕ್ಷಕ್ಕೆ ಕೆಲಸ ಮಾಡಬಾರದು ಎನ್ನುವ ರೀತಿಯಲ್ಲಿತ್ತು. ನನ್ನ ಬಳಿ ಚುನಾವಣಾ ಹಣ ಇರಲಿಲ್ಲ. ಇತ್ತೀಚೆಗೆ ಜಮೀನು ಮಾರಿದ್ದು, ಅದರ ಹಣ ಮನೆಯಲ್ಲಿತ್ತು. ಈ ವಿಚಾರವಾಗಿ ನಮ್ಮ ಅಕೌಂಟೆಂಟ್‌ ಉತ್ತರ ನೀಡಲಿದ್ದಾರೆ. ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಪಕ್ಷದ ಪರವಾಗಿ ಕೆಲಸ ಮಾಡಬಾರದು ಎನ್ನುವ ರೀತಿಯಲ್ಲಿತ್ತು ಎಂದರು.

ಈ ನಡುವೆ, ದಾಳಿಯನ್ನು ವಿರೋಧಿಸಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು.ಪಾಲಿಕೆ ಮಾಜಿ ಸದಸ್ಯ ರಾಮಚಂದ್ರ

ಮನೆ ಮೇಲೆ ಚುನಾವಣಾಧಿಕಾರಿ ದಾಳಿ

 ಬೆಂಗಳೂರು :  ಲೋಕಾಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಕ್ರಮವಾಗಿ ಹಣ ಸಂಗ್ರಹ ಮಾಡಲಾಗಿದೆ ಎಂಬ ಆರೋಪದ ಮೇರೆಗೆ ನಟಿ ಅಮೂಲ್ಯ ಮಾವ ಮತ್ತು ಬಿಬಿಎಂಪಿ ಮಾಜಿ ಸದಸ್ಯ ರಾಮಚಂದ್ರ ಮನೆ ಮೇಲೆ ಚುನಾವಣಾ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.

ಬುಧವಾರ ತಡರಾತ್ರಿ ರಾಜರಾಜೇಶ್ವರಿನಗರದಲ್ಲಿ ಇರುವ ನಿವಾಸದ ಮನೆ ಮೇಲೆ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ರಾತ್ರಿ‌ 10 ಗಂಟೆ ಸುಮಾರಿಗೆ‌ ದಾಳಿ ನಡೆಸಲಾಗಿದ್ದು, 10 ವಾಹನಗಳಲ್ಲಿ ಬಂದ ಸುಮಾರು 30ಕ್ಕೂ ಹೆಚ್ಚು ಅಧಿಕಾರಿಗಳು ಮನೆ ತಪಾಸಣೆ ನಡೆಸಿದರು ಎಂದು ಹೇಳಲಾಗಿದೆ. ಆದರೆ, ಪರಿಶೀಲನೆ ವೇಳೆ ಪತ್ತೆಯಾದ ನಗ-ನಾಣ್ಯದ ಕುರಿತು ಮಾಹಿತಿ ಲಭ್ಯವಾಗಿಲ್ಲ. ಗುರುವಾರ ಈ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಕಾರ್ಯಾಚರಣೆ ವೇಳೆ ನಟಿ ಅಮೂಲ್ಯ ಮತ್ತು ಪತಿ ಜಗದೀಶ್ ಸಹ ಮನೆಯಲ್ಲಿಯೇ ಇದ್ದರು. ಮಧ್ಯರಾತ್ರಿ‌ಯ ವರೆಗೆ ಕಾರ್ಯಾಚರಣೆ ನಡೆದಿದ್ದು, ಮಧ್ಯರಾತ್ರಿ 12ರ ಬಳಿಕ ಶೋಧ ಕಾರ್ಯ ಮುಕ್ತಾಯಗೊಂಡಿತು ಎನ್ನಲಾಗಿದೆ.

ಈ ನಡುವೆ, ದಾಳಿ ಮಾಹಿತಿ ತಿಳಿದು ಮನೆ ಬಳಿ ಬಿಜೆಪಿ ಕಾರ್ಯಕರ್ತರು ಜಮಾಯಿಸಿದರು ಎಂದು ಹೇಳಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು