ಹತ್ಯೆಯಾದ ಭಾಗ್ಯ ಆರೋಪಿ ಪತ್ನಿಯೇ ಅಲ್ಲ!

KannadaprabhaNewsNetwork |  
Published : Jan 10, 2025, 01:46 AM IST
ಗಂಗಾರಾಜು, ಭಾಗ್ಯ, ನವ್ಯಾ | Kannada Prabha

ಸಾರಾಂಶ

ಜಾಲಹಳ್ಳಿ ಕ್ರಾಸ್‌ ಚೊಕ್ಕಸಂದ್ರದಲ್ಲಿ ನಡೆದ ತ್ರಿಪಲ್‌ ಮರ್ಡರ್‌ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕೊಲೆಯಾದ ಭಾಗ್ಯ ಆರೋಪಿ ಗಂಗರಾಜುಗೆ ಪತ್ನಿಯೇ ಅಲ್ಲ. ಇಬ್ಬರು ಕಳೆದ 12 ವರ್ಷಗಳಿಂದ ಲಿವಿಂಗ್‌ ರಿಲೇಶನ್‌ಶಿಪ್‌ನಲ್ಲಿದ್ದರು (ಸಹಜೀವನ) ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಜಾಲಹಳ್ಳಿ ಕ್ರಾಸ್‌ ಚೊಕ್ಕಸಂದ್ರದಲ್ಲಿ ನಡೆದ ತ್ರಿಪಲ್‌ ಮರ್ಡರ್‌ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಕೊಲೆಯಾದ ಭಾಗ್ಯ ಆರೋಪಿ ಗಂಗರಾಜುಗೆ ಪತ್ನಿಯೇ ಅಲ್ಲ. ಇಬ್ಬರು ಕಳೆದ 12 ವರ್ಷಗಳಿಂದ ಲಿವಿಂಗ್‌ ರಿಲೇಶನ್‌ಶಿಪ್‌ನಲ್ಲಿದ್ದರು (ಸಹಜೀವನ) ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ನೆಲಮಂಗಲ ಮೂಲದ ಗಂಗರಾಜು ಕೌಟುಂಬಿಕ ಕಲಹದಿಂದ ಪತ್ನಿಯಿಂದ ದೂರವಾಗಿದ್ದ. ಭಾಗ್ಯ ಸಹ ಕೌಟುಂಬಿಕ ಕಾರಣಗಳಿಂದ ಪತಿಯನ್ನು ತೊರೆದು ಪುತ್ರಿ ನವ್ಯಾ ಜತೆಗೆ ಪ್ರತ್ಯೇಕವಾಗಿ ನೆಲೆಸಿದ್ದಳು. ಗಾರ್ಮೆಂಟ್‌ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಭಾಗ್ಯಗೆ 12 ವರ್ಷದ ಹಿಂದೆ ಗಂಗರಾಜು ಪರಿಚಿತನಾಗಿದ್ದ. ಬಳಿಕ ಪರಸ್ಪರ ಒಪ್ಪಿಗೆ ಮೇರೆಗೆ ಇಬ್ಬರು ಒಂದೇ ಮನೆಯಲ್ಲಿ ಸಹಜೀವನ ನಡೆಸುತ್ತಿದ್ದರು. ಭಾಗ್ಯಳ ಪುತ್ರಿ ನವ್ಯಾ ಸಹ ಇವರೊಂದಿಗೆ ನೆಲೆಸಿದ್ದಳು. ಇತ್ತೀಚೆಗೆ ಭಾಗ್ಯಗಳ ಅಕ್ಕನ ಮಗಳಾದ ಹೇಮಾವತಿ ಸಹ ಇವರ ಜತೆಗೆ ನೆಲೆಸಿದ್ದಳು.

ಶೀಲದ ಮೇಲೆ ಶಂಕೆ:

ಗಂಗರಾಜು ಹೆಬ್ಬಗೋಡಿ ಪೊಲೀಸ್‌ ಠಾಣೆಯಲ್ಲಿ ಹೋಂ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ. ಭಾಗ್ಯ ಗೃಹಿಣಿಯಾಗಿದ್ದಳು. ಪುತ್ರಿ ನವ್ಯಾ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಅಕ್ಕನ ಮಗಳಾದ ಹೇಮಾವತಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಗಂಗರಾಜುಗೆ ಭಾಗ್ಯ ಶೀಲ ಶಂಕಿಸಿ ಆಗಾಗ ಜಗಳ ಮಾಡುತ್ತಿದ್ದ. ಈ ವೇಳೆ ನವ್ಯಾ ಮತ್ತು ಹೇಮಾವತಿ, ಭಾಗ್ಯಳ ಪರ ವಹಿಸಿ ಮಾತನಾಡುತ್ತಿದ್ದರು. ಇದರಿಂದ ಗಂಗರಾಜು ಬೇಸರಗೊಳ್ಳುತ್ತಿದ್ದ.

ಬುಧವಾರ ಸಂಜೆ ಸಹ ಗಂಗರಾಜು, ಭಾಗ್ಯಳ ನಡವಳಿಕೆ ವಿಚಾರ ಪ್ರಸ್ತಾಪಿಸಿ ಜಗಳ ತೆಗೆದಿದ್ದಾನೆ. ಈ ವೇಳೆ ಜಗಳ ವಿಕೋಪ್ಪಕ್ಕೆ ತಿರುಗಿದಾಗ ಭಾಗ್ಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಮನೆಯಲ್ಲೇ ಇದ್ದ ನವ್ಯಾ ಹಾಗೂ ಹೇಮಾವತಿ, ಭಾಗ್ಯಳ ಪರ ವಹಿಸಿಕೊಂಡು ಮಾತನಾಡಲು ಮುಂದಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಗಂಗರಾಜು ಮಚ್ಚು ತೆಗೆದುಕೊಂಡು ಮೂವರ ಮೇಲೂ ಬರ್ಬರವಾಗಿ ಹಲ್ಲೆ ನಡೆಸಿ ಕೊಲೆ ಮಾಡಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ. ಈ ಸಂಬಂಧ ಪೀಣ್ಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಆರೋಪಿ ಗಂಗರಾಜು ಜಾಲಹಳ್ಳಿ ಕ್ರಾಸ್‌ನ ಚೊಕ್ಕಸಂದ್ರದ ಮನೆಯಲ್ಲಿ ಬುಧವಾರ ಸಂಜೆ ಸುಮಾರು 5 ಗಂಟೆಗೆ ಭಾಗ್ಯ, ಆಕೆಯ ಪುತ್ರಿ ನವ್ಯಾ, ಸಂಬಂಧಿ ಹೇಮಾವತಿಯನ್ನು ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಹತ್ಯೆ ಮಾಡಿದ್ದ. ಬಳಿಕ 112 ಸಹಾಯವಾಣಿಗೆ ಕರೆ ಮಾಡಿ ತ್ರಿಬಲ್‌ ಮರ್ಡರ್‌ ವಿಚಾರ ತಿಳಿಸಿದ್ದ. ನಂತರ ರಕ್ತಸಿಕ್ತ ಮಚ್ಚು ಹಿಡಿದು ಪೀಣ್ಯ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದ. ಬಳಿಕ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

₹500 ಕೊಟ್ಟು ಸಂತೆಯಲ್ಲಿ ಮಚ್ಚು ಖರೀದಿಸಿದ್ದ ಆರೋಪಿ

ದಾಸರಹಳ್ಳಿ: ಭಾಗ್ಯಗಳಿಗೆ ಗಂಗರಾಜು ಫೋನ್ ಮಾಡಿದಾಗ ಆಕೆಯ ಫೋನು ಬ್ಯುಸಿಯಾಗಿ ಇರುತ್ತಿತ್ತು. ಇದರಿಂದ ಗಂಗರಾಜು ಕೋಪಗೊಂಡಿದ್ದ. ಭಾಗ್ಯಳ ಶೀಲದ ಮೇಲೆ ಅನುಮಾನ ಕೊಂಡ ಗಂಗರಾಜು ಜ.8ರಂದು ಸಂಜೆ 5ರ ಸಮಯದಲ್ಲಿ ಜಗಳವಾಡಿದ್ದಾನೆ. ಇತ್ತೀಚೆಗೆ ಮನೆಗೆ ಬಂದಿದ್ದ ಮೃತ ಭಾಗ್ಯಮ್ಮ ಅಕ್ಕನ ಮಗಳು ಹೇಮಾವತಿ ನಡತೆ ಮೇಲೂ ಆರೋಪಿಗೆ ಅನುಮಾನ ಶುರುವಾಗಿತ್ತು. ಇದೇ ಕಾರಣಕ್ಕೆ ಗಲಾಟೆ ಮಾಡಿ ಕೊಲೆಗೆ ಸಂಚು ರೂಪಿಸಿದ್ದ. ಗಲಾಟೆ ಬಳಿಕ‌ ಹೆಸರಘಟ್ಟಗೆ ಹೋಗಿದ್ದ ಆರೋಪಿ ರೈತರ ಸಂತೆಯಲ್ಲಿ ಮಚ್ಚು ಖರೀದಿ‌ ಮಾಡಿದ್ದ. ರೈತರು ಬಳಸುವ ಹರಿತವಾದ ಮಚ್ಚನ್ನು ₹500 ಕೊಟ್ಟು ನೇರವಾಗಿ ಮನೆಗೆ ತಂದಿದ್ದ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ತಡೆಗೋಡೆಗೆ ಕಾರು ಡಿಕ್ಕಿ: ನವ ವಿವಾಹಿತೆ ಸಾವು
ಶಾಸಕ ಬೈರತಿಗೆ ಕಂಟಕವಾದ ಕುಂಭಮೇಳ ಯಾತ್ರೆ!