17 ವರ್ಷ ‘ನೊಂದಿದ್ದಕ್ಕೆ’ 1 ವರ್ಷ ಜೈಲು ಶಿಕ್ಷೆ ಕಡಿತ!

KannadaprabhaNewsNetwork | Updated : Jul 15 2024, 04:55 AM IST

ಸಾರಾಂಶ

ಲಂಚ ಪಡೆದು ಸಿಕ್ಕಿಬಿದ್ದು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರಿ ನೌಕರನೊಬ್ಬ ಕ್ರಿಮಿನಲ್‌ ಪ್ರಕರಣ ಎದುರಿಸಿದ 17 ವರ್ಷ ಅವಧಿಯಲ್ಲಿ ಅನುಭವಿಸಿದ ದೈಹಿಕ, ಮಾನಸಿಕ ಮತ್ತು ಆರ್ಥಿಕವಾಗಿ ನೊಂದಿರುವ ಸಂಗತಿ ಪರಿಗಣಿಸಿರುವ ಹೈಕೋರ್ಟ್‌, ಶಿಕ್ಷೆ ಪ್ರಮಾಣವನ್ನು ಶೇ.50ರಷ್ಟು ತಗ್ಗಿಸಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು :  ಭವಿಷ್ಯ ನಿಧಿ ಹಣ ಬಿಡುಗಡೆಗೊಳಿಸಲು 1,800 ರು. ಲಂಚ ಪಡೆದು ಸಿಕ್ಕಿಬಿದ್ದು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕೇಂದ್ರ ಸರ್ಕಾರಿ ನೌಕರನೊಬ್ಬ ಕ್ರಿಮಿನಲ್‌ ಪ್ರಕರಣ ಎದುರಿಸಿದ 17 ವರ್ಷ ಅವಧಿಯಲ್ಲಿ ಅನುಭವಿಸಿದ ದೈಹಿಕ, ಮಾನಸಿಕ ಮತ್ತು ಆರ್ಥಿಕವಾಗಿ ನೊಂದಿರುವ ಸಂಗತಿ ಪರಿಗಣಿಸಿರುವ ಹೈಕೋರ್ಟ್‌, ಶಿಕ್ಷೆ ಪ್ರಮಾಣವನ್ನು ಶೇ.50ರಷ್ಟು ತಗ್ಗಿಸಿ ಉದಾರತೆ ಮೆರೆದಿದೆ.

2007ರಲ್ಲಿ ಎಸಗಿದ್ದ ಕ್ರಿಮಿನಲ್‌ ದುರ್ನಡತೆ ಮತ್ತು ಲಂಚ ಸ್ವೀಕಾರ ಅಪರಾಧಗಳಿಗೆ ತಲಾ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿ ಸಿಬಿಐ ವಿಶೇಷ ನ್ಯಾಯಾಲಯ 2010ರಲ್ಲಿ ತೀರ್ಪು ನೀಡಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ, ಬೆಂಗಳೂರಿನ ಬಸವನಗುಡಿ ನಿವಾಸಿ ವಿ.ಗೋಪಿನಾಥ ಪಡಿಯಾರ್‌ 2011ರಲ್ಲಿ ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು.

ಈ ಮೇಲ್ಮನವಿಯನ್ನು ಇತ್ತೀಚೆಗೆ ವಿಲೇವಾರಿ ಮಾಡಿರುವ ನ್ಯಾಯಮೂರ್ತಿ ರಾಮಚಂದ್ರ ಡಿ. ಹುದ್ದಾರ್‌ ಅವರ ಪೀಠ, ಆರೋಪಿ ಗೋಪಿನಾಥ ಹಣ ಸ್ವೀಕರಿಸುವಾಗ ಸಿಕ್ಕಿಬಿದ್ದಿರುವುದು ತನಿಖಾಧಿಕಾರಿಗಳು ಒದಗಿಸಿದ ಸಾಕ್ಷ್ಯಧಾರಗಳು ಮತ್ತು ಸಾಕ್ಷಿಗಳ ಸಾಕ್ಷ್ಯದಿಂದ ಸಾಬೀತಾಗಿದೆ. ಹೀಗಾಗಿ, ಆತನನ್ನು ದೋಷಿಯಾಗಿ ತೀರ್ಮಾನಿಸಿದ ವಿಚಾರಣಾ ನ್ಯಾಯಾಲಯದ ಆದೇಶ ಸೂಕ್ತವಾಗಿದ್ದು, ಯಾವುದೇ ದೋಷ ಕಂಡು ಬರುತ್ತಿಲ್ಲ ಎಂದು ತೀರ್ಮಾನಿಸಿತು.

ಆದರೆ, ಶಿಕ್ಷೆ ಪ್ರಮಾಣ ನಿಗದಿಪಡಿಸುವಾಗ ಗೋಪಿನಾಥ ಕ್ರಿಮಿನಲ್‌ ಪ್ರಕರಣ ಎದುರಿಸಿದ 17 ವರ್ಷ ಮತ್ತು ಆ ಅವಧಿಯಲ್ಲಿ ಆತ ಅನುಭವಿಸಿದ ನೋವಿನ ಸಂಗತಿಯನ್ನು ಪರಿಗಣಿಸಿದ ನ್ಯಾಯಮೂರ್ತಿಗಳು, 2007ರಲ್ಲಿ ಪ್ರಕರಣ ದಾಖಲಾಗಿದೆ. ಈಗಾಗಲೇ 17 ವರ್ಷ ಕಳೆದಿವೆ. ಈ ಸಮಯದಲ್ಲಿ ಅಪರಾಧಿ ದೈಹಿಕ, ಮಾನಸಿಕ ಮತ್ತು ಆರ್ಥಿಕವಾಗಿ ನೊಂದಿರಬೇಕು. ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ದಾಖಲಾದಾಗ ಆತನಿಗೆ 46 ವರ್ಷ. ಸದ್ಯ ಆತ ಸೇವೆಯಿಂದ ನಿವೃತ್ತಿ ಅಂಚಿನಲ್ಲಿರಬೇಕು. ಇನ್ನೂ ಅಪರಾಧಿಯು ಪತ್ನಿ ಮತ್ತು ಮಕ್ಕಳ ಜೀವನ ನಿರ್ವಹಿಸಬೇಕಿದೆ. ಈ ಅಂಶ ಪರಿಗಣಿಸಿದರೆ ಶಿಕ್ಷೆ ಪ್ರಮಾಣದಲ್ಲಿ ಉದಾರತೆ ತೋರಬಹುದು. ಅದರಂತೆ ವಿಚಾರಣಾ ನ್ಯಾಯಾಲಯವು ವಿಧಿಸಿರುವ ದಂಡದ ಮೊತ್ತವನ್ನು ಯಥಾವತ್ತಾಗಿ ಉಳಿಸಿಕೊಂಡು ಎರಡು ವರ್ಷದ ಜೈಲು ಶಿಕ್ಷೆಯನ್ನು ಒಂದು ವರ್ಷಕ್ಕೆ ಇಳಿಸಿದರೆ, ನ್ಯಾಯ ಒದಗಿಸಿದಂತಾಗುತ್ತದೆ ಎಂದು ನಿರ್ಧರಿಸಿದರು.

ನಂತರ ಕ್ರಿಮಿನಲ್‌ ದುರ್ನಡತೆ ಮತ್ತು ಲಂಚ ಸ್ವೀಕಾರ ಅಪರಾಧ ಕೃತ್ಯಗಳಿಗೆ ಸಿಬಿಐ ವಿಶೇಷ ನ್ಯಾಯಾಲಯ ವಿಧಿಸಿರುವ ತಲಾ ಎರಡು ವರ್ಷ ಜೈಲು ಶಿಕ್ಷೆಯನ್ನು ಒಂದು ವರ್ಷ ಸಾಧಾರಣ ಸಜೆಗೆ ಇಳಿಸಿದ ನ್ಯಾಯಮೂರ್ತಿಗಳು, ಕೂಡಲೇ ಗೋಪಿನಾಥ ಸಿಬಿಐ ನ್ಯಾಯಾಲಯದ ಮುಂದೆ ಹಾಜರಾಗಬೇಕು. ನ್ಯಾಯಾಲಯ ಕೂಡಲೇ ಆತನನ್ನು ವಶಕ್ಕೆ ಪಡೆದು ಶಿಕ್ಷೆ ಅನುಭವಿಸಲು ಕಾರಾಗೃಹಕ್ಕೆ ಕಳುಹಿಸಬೇಕು ಎಂದು ಆದೇಶಿಸಿದ್ದಾರೆ.

22,400 ರು. ಬಿಡುಗಡೆಗೆ 1800 ರು. ಲಂಚ: ವಿ.ಗೋಪಿನಾಥ ಪಡಿಯಾರ್‌ 2007ರಲ್ಲಿ ‘ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ’ಯ ಬೆಂಗಳೂರಿನ ಪ್ರಾದೇಶಿಕ ಕಚೇರಿಯಲ್ಲಿ ಹಿರಿಯ ಸಾಮಾಜಿಕ ಭದ್ರತಾ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಆ ವೇಳೆ ಖಾಸಗಿ ಕಂಪನಿಯ ಉದ್ಯೋಗಿ ಎಸ್‌.ಸುರೇಶ್‌ ಬಾಬು, ಮದುವೆಗಾಗಿ ತನ್ನ ಭವಿಷ್ಯ ನಿಧಿ ಖಾತೆಯಿಂದ 50 ಸಾವಿರ ರು. ಬಿಡುಗಡೆ ಮಾಡುವಂತೆ ಕೋರಿ 2007ರ ಮಾ.12ರಂದು ಅರ್ಜಿ ಸಲ್ಲಿಸಿದ್ದರು. ಏಳು ವರ್ಷ ಸೇವಾವಧಿ ಪೂರ್ಣಗೊಳಿಸದ್ದಕ್ಕೆ ಪಿಎಫ್‌ ಹಣ ಬಿಡುಗಡೆಗೆ ಕೋರಲು ಅರ್ಹನಾಗಿಲ್ಲ ಎಂದು ತಿಳಿಸಿದ್ದ ಗೋಪಿನಾಥ್‌, 2,500 ರು. ಲಂಚ ನೀಡಿದರೆ 22,400 ರು. ಪಿಎಫ್‌ ಹಣವನ್ನು ತ್ವರಿತವಾಗಿ ಬಿಡುಗಡೆ ಮಾಡುವುದಾಗಿ ಬೇಡಿಕೆಯಿಟ್ಟಿದ್ದರು. ಮಾತುಕತೆ ನಡೆಸಿದ ನಂತರ 1,800 ರು.ಗೆ ಒಪ್ಪಿಕೊಂಡಿದ್ದರು. ಆದರೆ, ಲಂಚ ನೀಡಲು ಒಪ್ಪದ ಸುರೇಶ್‌ ಬಾಬು, 2007ರ ಮಾ.26ರಂದು ಸಿಬಿಐಗೆ ಲಿಖಿತ ದೂರು ನೀಡಿದ್ದರು. ಮಾ.27ರಂದು ಸುರೇಶ್‌ ಬಾಬು ಅವರಿಂದ 1,800 ರು. ಲಂಚ ಸ್ವೀಕರಿಸುವಾಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದಾಗ ಗೋಪಿನಾಥ ಹಣ ಸಮೇತ ಸಿಕ್ಕಿಬಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ, ಕಾಯ್ದೆ-1988ರ ಸೆಕ್ಷನ್‌ 13(2) ಪ್ರಕಾರ ಕ್ರಿಮಿನಲ್‌ ದುರ್ನಡತೆ ಮತ್ತು ಸೆಕ್ಷನ್‌ 13(1)(ಡಿ) ಅನುಸಾರ ಲಂಚ ಸ್ವೀಕಾರ ಅಪರಾಧಕ್ಕೆತಲಾ ಎರಡು ವರ್ಷ ಸಾಧಾರಣ ಜೈಲು ಮತ್ತು 10 ಸಾವಿರ ದಂಡ ವಿಧಿಸಿ 2010ರ ಡಿ.12ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಗೋಪಿನಾಥ 2011ರ ಜ.4ರಂದು ಹೈಕೋರ್ಟ್‌ಗೆ ಕ್ರಿಮಿನಲ್‌ ಮೆಲ್ಮನವಿ ಸಲ್ಲಿಸಿದ್ದರು.

Share this article