ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣ: ಎಸ್‌ಐಟಿ ವಶಕ್ಕೆ ಸಾಧ್ಯತೆ

Published : Sep 23, 2024, 09:26 AM IST
MLA Muniratna

ಸಾರಾಂಶ

ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿದ್ದು, ಜೈಲಿನಲ್ಲಿರುವ ಮುನಿರತ್ನ ಅವರನ್ನು ಎಸ್‌ಐಟಿ ಸೋಮವಾರ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ಎಸ್‌ಐಟಿ ರಚನೆ ಮಾಡಿರುವ ಹಿನ್ನೆಲೆಯಲ್ಲಿ ಜೈಲಿನಲ್ಲಿರುವ ಮುನಿರತ್ನ ಅವರನ್ನು ಎಸ್‌ಐಟಿ ಸೋಮವಾರ ವಶಕ್ಕೆ ಪಡೆಯುವ ಸಾಧ್ಯತೆಗಳಿವೆ.

ಕಾಂಗ್ರೆಸ್ ಒಕ್ಕಲಿಗ ನಾಯಕರ ಒತ್ತಾಯದ ಬೆನ್ನಲ್ಲೇ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರ ವಿರುದ್ಧದ ಅತ್ಯಾಚಾರ, ಹನಿಟ್ರ್ಯಾಪ್‌, ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣಗಳ ಕುರಿತು ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ)ವನ್ನು ರಚಿಸಿದೆ.

ಅಪರಾಧ ತನಿಖಾ ಇಲಾಖೆ (ಸಿಐಡಿ)ಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿಜಯ್‌ ಕುಮಾರ್ ಸಿಂಗ್ ಈ ತಂಡದ ನೇತೃತ್ವ ವಹಿಸಲಿದ್ದಾರೆ. ಕೇಂದ್ರ ವಲಯ ಐಜಿಪಿ ಲಾಭೂರಾಮ್ ಹಾಗೂ ಇಬ್ಬರು ಎಸ್ಪಿಗಳು ಈ ತಂಡದ ಸದಸ್ಯರಾಗಿದ್ದಾರೆ.

ಇದರೊಂದಿಗೆ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣ ಬಳಿಕ ಮತ್ತೊಂದು ಬಹುಮುಖ್ಯ ಅಪರಾಧ ಪ್ರಕರಣದ ಎಸ್‌ಐಟಿ ಸಾರಥ್ಯವು ಬಿ.ಕೆ.ಸಿಂಗ್ ಹೆಗಲಿಗೆ ಬಿದ್ದಿದೆ.

ಎಸ್‌ಐಟಿ ರಚನೆ ಮಾಹಿತಿ ಹಿನ್ನಲೆಯಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಮುನಿರತ್ನ ಅವರನ್ನು ಬಂಧಿಸಿದ್ದ ರಾಮನಗರ ಜಿಲ್ಲೆ ಕಗ್ಗಲೀಪುರ ಠಾಣೆ ಪೊಲೀಸರು, ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಿದರೂ ತನಿಖೆಗೆ ವಶಕ್ಕೆ ನೀಡುವಂತೆ ಕೋರಿಕೆ ಸಲ್ಲಿಸಲಿಲ್ಲ. ಹೀಗಾಗಿ ಮುನಿರತ್ನ ಅವರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿ ನ್ಯಾಯಾಲಯವು ಆದೇಶಿಸಿತು.

ಈ ಪ್ರಕರಣದ ತನಿಖೆಯನ್ನು ಎಸ್‌ಐಟಿ ವಹಿಸಿಕೊಂಡ ಬಳಿಕ ಅತ್ಯಾಚಾರ ಪ್ರಕರಣದಲ್ಲಿ ಹೆಚ್ಚಿನ ತನಿಖೆ ಸಲುವಾಗಿ ನ್ಯಾಯಾಲಯದಲ್ಲಿ ಬಾಡಿ ವಾರೆಂಟ್ ಪಡೆದು ವಶಕ್ಕೆ ಪಡೆಯಲಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಶಾಸಕ ಮುನಿರತ್ನ ವಿರುದ್ಧದ ಅತ್ಯಾಚಾರ ಹಾಗೂ ಜಾತಿ ನಿಂದನೆ ಪ್ರಕರಣಗಳ ಸಮಗ್ರ ತನಿಖೆಗೆ ಎಸ್‌ಐಟಿ ರಚಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಶುಕ್ರವಾರ ಕಂದಾಯ ಸಚಿವ ಕೃಷ್ಣಬೈರೇಗೌಡ ನೇತೃತ್ವದಲ್ಲಿ ಒಕ್ಕಲಿಗ ಸಮುದಾಯದ ಶಾಸಕರು ಹಾಗೂ ಮುಖಂಡರು ಮನವಿ ಮಾಡಿದ್ದರು. ಈ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಮುಖ್ಯಮಂತ್ರಿಗಳು, ಮುನಿರತ್ನ ವಿರುದ್ಧ ತನಿಖೆಗೆ ಎಸ್‌ಐಟಿ ರಚಿಸುವಂತೆ ಡಿಜಿಪಿಗೆ ಸೂಚಿಸಿದ್ದರು. ಈ ಬೆನ್ನಲ್ಲೇ ಬಿ.ಕೆ.ಸಿಂಗ್‌ ನೇತೃತ್ವದ ಎಸ್‌ಐಟಿ ರಚಿಸಿದ್ದಾರೆ.

ಎಸ್‌ಐಟಿಗೆ ತನಿಖಾ ದಾಖಲೆ ವರ್ಗ:

ಎಸ್‌ಐಟಿ ರಚನೆ ಮಾಹಿತಿ ಹಿನ್ನೆಲೆಯಲ್ಲಿ ಮುನಿರತ್ನ ವಿರುದ್ಧದ ಅತ್ಯಾಚಾರ, ಜಾತಿ ನಿಂದನೆ ಹಾಗೂ ಜೀವ ಬೆದರಿಕೆ ಪ್ರಕರಣಗಳ ದಾಖಲೆಗಳ ವರ್ಗಾವಣೆಗೆ ಕಗ್ಗಲೀಪುರ ಹಾಗೂ ವೈಯಾಲಿಕಾವಲ್ ಠಾಣೆ ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಈ ಪ್ರಕರಣಗಳ ತನಿಖೆ ನಡೆಸಿದ್ದ ಕಗ್ಗಲೀಪುರ ಹಾಗೂ ವೈಯಾಲಿಕಾವಲ್‌ ಠಾಣೆ ಪೊಲೀಸರು, ಶಾಸಕರನ್ನು ಪ್ರತ್ಯೇಕವಾಗಿ ಬಂಧಿಸಿ ವಿಚಾರಣೆ ನಡೆಸಿದ್ದರು. ಅಲ್ಲದೆ ಘಟನಾ ಸ್ಥಳಗಳಿಗೆ ಸಂತ್ರಸ್ತರನ್ನು ಕರೆದೊಯ್ದು ಪೊಲೀಸರು ಮಹಜರ್ ಕೂಡ ನಡೆಸಿದ್ದರು. ಹೀಗಾಗಿ ಇದುವರೆಗೆ ತನಿಖೆಯಲ್ಲಿ ಸಂಗ್ರಹಿಸಿದ ಸಾಂದರ್ಭಿಕ ಸಾಕ್ಷ್ಯಗಳ ಸಮೇತ ದಾಖಲೆಗಳನ್ನು ಎಸ್ಐಟಿಗೆ ಸ್ಥಳೀಯ ಪೊಲೀಸರು ರವಾನಿಸಲಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ರೌಡಿ ಹತ್ಯೆ: ಯಾವುದೇ ಕ್ಷಣ ಶಾಸಕ ಬೈರತಿ ಸೆರೆ
ಅಕ್ರಮ ಕೃತ್ಯಗಳಿಗೆ ‘ದಂಡ’ ವಿಧಿಸಿ ಮುಚ್ಚು ಹಾಕುತ್ತಿದ್ದ ಅಪಾರ್ಟ್ಮೆಂಟ್ ವಿರುದ್ಧ ಕೇಸು