ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚೆಗೆ ಚಿನ್ನಾಭರಣ ಅಂಗಡಿಗೆ ನುಗ್ಗಿ ಕೆಲಸಗಾರರಿಗೆ ಜೀವ ಬೆದರಿಕೆ ಹಾಕಿ ಬಂಗಾರ ದೋಚಿದ್ದ ಫೆನಾಯಿಲ್ ವ್ಯಾಪಾರಿ ಸೇರಿದಂತೆ ಐವರನ್ನು ಕೆ.ಆರ್.ಪುರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.ಕೆಂಗೇರಿಯ ನಾರಾಯಣ್ ಲಾಲ್, ಕೀರ್ತರಾಮ್, ಮಹೇಂದ್ರ ಗೆಹಲೊತ್, ಪುಷ್ಪೇಂದ್ರ ಸಿಂಗ್ ಹಾಗೂ ಇವರಿಂದ ಕಳವು ಚಿನ್ನ ಖರೀದಿಸಿದ್ದ ವ್ಯಾಪಾರಿ ದಿಲೀಪ್ ಸಹ ಬಂಧಿತರಾಗಿದ್ದು, ಆರೋಪಿಗಳಿಂದ 50 ಲಕ್ಷ ರು. ಮೌಲ್ಯದ 478 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಕೆಲ ದಿನಗಳ ಹಿಂದೆ ಸೀಗೇಹಳ್ಳಿ ಮುಖ್ಯರಸ್ತೆಯ ಭವಾನಿ ಜ್ಯುವೆಲರ್ಸ್ ಗೆ ನುಗ್ಗಿ ಕೆಲಸಗಾರರಿಗೆ ಬೆದರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಈ ಕೃತ್ಯದ ದರೋಡೆಕೋರರ ಬೇಟೆಗೆ ಕಾರ್ಯಾಚರಣೆ ನಡೆಸಿದ ಇನ್ಸ್‌ಪೆಕ್ಟರ್ ಬಿ.ರಾಮಮೂರ್ತಿ ನೇತೃತ್ವದ ತಂಡವು, ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಆಧರಿಸಿ ರಾಜಸ್ಥಾನದಲ್ಲಿ ಆರೋಪಿಗಳನ್ನು ಬಂಧಿಸಿ ಕರೆ ತಂದಿದೆ.ಹೊಂಚು ಹಾಕಿ ದರೋಡೆ:
ನಾರಾಯಣ್, ಕೀರ್ತರಾಮ್, ಮಹೇಂದ್ರ, ಪುಷ್ಪೇಂದ್ರ ಹಾಗೂ ದಿಲೀಪ್ ಮೂಲತಃ ರಾಜಸ್ಥಾನ ರಾಜ್ಯದವರಾಗಿದ್ದು, ಸುಲಭವಾಗಿ ಹಣ ಸಂಪಾದನೆಗೆ ದರೋಡೆಗಿಳಿದು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದಾರೆ. ಕೆಂಗೇರಿ ಸಮೀಪ ನೆಲೆಸಿದ್ದ ನಾರಾಯಣ್, ನಗರದಲ್ಲಿ ಫೆನಾಯಿಲ್ ಮಾರಾಟ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಕೆ.ಆರ್.ಪುರದ ಸಿಗೇಹಳ್ಳಿಯ ಭವಾನಿ ಜ್ಯುವೆಲರ್ಸ್ ಮಳಿಗೆಯ ಭದ್ರತೆ ಬಗ್ಗೆ ಮಾಹಿತಿ ಕಲೆ ಹಾಕಿ ಆತನ ದರೋಡೆ ಸಂಚು ರೂಪಿಸಿದ್ದಾನೆ.ಇನ್ನು ಕೆಂಗೇರಿ ಸಮೀಪ ಮಹೇಂದ್ರ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದು, ಇನ್ನುಳಿದವರು ರಾಜಸ್ಥಾನದಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದರು. ಈ ನಾಲ್ವರನ್ನು ಒಟ್ಟುಗೂಡಿಸಿ ಮೇ 9 ರಂದು ನಾರಾಯಣ್ ಸಂಚು ಕಾರ್ಯರೂಪಕ್ಕಿಳಿಸಿದ್ದ. ಅಂದು ಸಂಜೆ 4 ಗಂಟೆಯಲ್ಲಿ ಜ್ಯುವೆಲರ್ಸ್‌ನಲ್ಲಿ ಕೆಲಸಗಾರರಿಬ್ಬರಿದ್ದರು. ಅದೇ ವೇಳೆ ಎರಡು ಬೈಕ್‌ಗಳಲ್ಲಿ ಭವಾನಿ ಜ್ಯುವೆಲರ್ಸ್ ಬಳಿಗೆ ನಾರಾಯಣ್ ತಂಡ ತೆರಳಿತ್ತು. ಈ ನಾಲ್ವರ ಪೈಕಿ ಇಬ್ಬರು ಮಳಿಗೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದರು. ಬಳಿಕ 6 ಟ್ರೇಗಳಲ್ಲಿದ್ದ 600 ಗ್ರಾಂ ತೂಕದ 41 ಚಿನ್ನದ ಸರಗಳನ್ನು ದೋಚಿ ಆರೋಪಿಗಳು ಪರಾರಿಯಾಗಿದ್ದರು.
ಈ ಬಗ್ಗೆ ಮಳಿಗೆ ಮಾಲಿಕ ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆಗಿಳಿದರು. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಬೋರುಂಡ ಗ್ರಾಮದಲ್ಲಿ ಮಹೇಂದ್ರ ಗೆಹಲೊತ್ ಹಾಗೂ ಆರೋಪಿಗಳಿಂದ ಆಭರಣ ಸ್ವೀಕರಿಸಿದ್ದ ಅಲ್ಲಿನ ಚಿನ್ನದ ವ್ಯಾಪಾರಿ ದಿಲೀಪ್‌ನನ್ನು ಪೊಲೀಸರು ಬಂಧಿಸಿ ಕರೆತಂದಿದ್ದಾರೆ. ನಂತರ ಈ ಆರೋಪಿಗಳ ಮಾಹಿತಿ ಮೇರೆಗೆ ಇನ್ನುಳಿದವರು ಸಿಕ್ಕಿಬಿದ್ದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.-ಈಚೆಗೆ ಸೀಗೇಹಳ್ಳಿ ಮುಖ್ಯರಸ್ತೆಯ ಜ್ಯುವೆಲ್ಲರಿಗೆ ನುಗ್ಗಿ ಕೆಲಸಗಾರರಿಗೆ ಬೆದರಿಸಿ ಆಭರಣ ದೋಚಿ ಪರಾರಿ -ಸಿಸಿಟೀವಿ ದೃಶ್ಯಾವಳಿ ಆಧರಿಸಿ ರಾಜಸ್ಥಾನದಲ್ಲಿ ಆರೋಪಿಗಳನ್ನು ಬಂಧಿಸಿ ಕರೆ ತಂದ ಪೊಲೀಸರು