;Resize=(412,232))
ಕೊಚ್ಚಿ: ಮೈಸೂರಿನಲ್ಲಿ ಡ್ರಗ್ಸ್ ಜಾಲವನ್ನು ಈ ಹಿಂದೊಮ್ಮೆ ಮಹಾರಾಷ್ಟ್ರ ಪೊಲೀಸರು ಭೇದಿಸಿದ್ದರು. ಇದೀಗ ಮೈಸೂರು ಸನಿಹ ನಂಜನಗೂಡಿನಲ್ಲಿ ಕೇಂದ್ರಸ್ಥಾನ ಹೊಂದಿದ್ದ ಡ್ರಗ್ಸ್ ಜಾಲವನ್ನು ಕೇರಳ ಪೊಲೀಸರು ಭೇದಿಸಿದ್ದಾರೆ. ಬೆಂಗಳೂರು-ಮೈಸೂರು-ಕೇರಳಂ ನಡುವೆ ಕಾರ್ಯಾಚರಣೆ ನಡೆಸುತ್ತಿದ್ದ ನಿಷೇಧಿತ ಮಾದಕವಸ್ತು ಎಂಡಿಎಂಎ ಬೃಹತ್ ಪೂರೈಕೆ ಜಾಲದ ಪ್ರಮುಖ ಆರೋಪಿಯನ್ನು ಅವರು ಸೋಮವಾರ ಬಂಧಿಸಿದ್ದಾರೆ.
ಕೇರಳ ಮೂಲದ ಸದ್ಯ ಮೈಸೂರು ಸನಿಹ ನಂಜನಗೂಡಿನಲ್ಲಿ ನೆಲೆಸಿರುವ ಧನೇಶ್ ಎಸ್. ನಾಯರ್ ಅಲಿಯಾಸ್ ದನ್ನಿ (31) ಬಂಧಿತ ಆರೋಪಿ. ನಂಜನಗೂಡಿನಲ್ಲಿ ಬೃಹತ್ ಬಾಳೆ ತೋಟವನ್ನೂ ಹೊಂದಿರುವ ಆರೋಪಿಯು ಬಾಳೆಗೊನೆಗಳ ನಡುವೆ ಡ್ರಗ್ಸ್ ಅಡಗಿಸಿಟ್ಟು ಕೇರಳಕ್ಕೆ ಸಾಗಿಸುತ್ತಿದ್ದ ವಿಚಾರವೂ ತನಿಖೆ ವೇಳೆ ಬೆಳಕಿಗೆ ಬಂದಿದೆ.
ಕೇರಳದ ಆಲುವ ಡಿವೈಎಸ್ಪಿ ಬೈಜು ಪೌಲೋಸ್ ಅವರ ನೇತೃತ್ವದ ತಂಡ ಎರ್ನಾಕುಲಂ ಜಿಲ್ಲೆಯ ಅಂಗಮಲೈನಲ್ಲಿ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದೆ. ಈ ವೇಳೆ 803 ಗ್ರಾಂ ಹಶೀಶ್ ಆಯಿಲ್ ಮತ್ತು ಎಂಟು ಗ್ರಾಂ ಎಂಡಿಎಂಎ ಅನ್ನು ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ.
ಆರೋಪಿ ಧನೇಶ್ ಕೇರಳದ ಆಲಪ್ಪುಳ ಜಿಲ್ಲೆಯ ಹರಿಪಾದ್ ಮೂಲದವನಾಗಿದ್ದು, ಸದ್ಯ ಮೈಸೂರು ಸನಿಹ ನಂಜನಗೂಡಿನಲ್ಲಿ ನೆಲೆಸಿದ್ದಾನೆ. ಬೆಂಗಳೂರಿನಿಂದ ಕೇರಳಂಗೆ ಡ್ರಗ್ಸ್ ಅದರಲ್ಲೂ ಮುಖ್ಯವಾಗಿ ಎಂಡಿಎಂಎ ಪೂರೈಕೆ ಜಾಲದಲ್ಲಿ ಈತ ಮಹತ್ವದ ಪಾತ್ರವಹಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಭಾನುವಾರವಷ್ಟೇ ಕೇರಳದ ಆಳುವದಲ್ಲಿ 185 ಗ್ರಾಂ ಎಂಡಿಎಂಎ ಜತೆಗೆ ಹರಿಕೃಷ್ಣನ್ ಕೆ.ಎಸ್. ಎಂಬಾತನನ್ನು ಬಂಧಿಸಲಾಗಿತ್ತು. ಇದಕ್ಕೂ ಮೊದಲು ಶಿನು ಸೆಬಾಸ್ಟಿಯನ್ ಎಂಬಾತನನ್ನು ಬಂಧಿಸಲಾಗಿತ್ತು. ಹರಿಕೃಷ್ಣನ್‌ನ ಮೊಬೈಲ್ ಪರಿಶೀಲಿಸಿದಾಗ ಧನೇಶ್‌ನ ಸುಳಿವು ಸಿಕ್ಕಿದೆ. ಇದರ ಬೆನ್ನಲ್ಲೇ ವಿಶೇಷ ತನಿಖಾ ತಂಡವು ತಮಿಳುನಾಡು, ಕರ್ನಾಟಕದಲ್ಲಿ ತನಿಖೆ ತೀವ್ರಗೊಳಿಸಿದ್ದು, ಖಚಿತ ಮಾಹಿತಿ ಮೇರೆಗೆ ಧನೇಶ್‌ನನ್ನು ಬಂಧಿಸಿದೆ.
ಪೊಲೀಸ್ ಮೂಲಗಳ ಪ್ರಕಾರ ಡ್ರಗ್ಸ್ ಕಳ್ಳಸಾಗಣೆ ಮತ್ತು ಮಾರಾಟ ಜಾಲಕ್ಕೆ ಯುವಕರನ್ನು ಧನೇಶ್‌ನೇ ನೇಮಿಸಿಕೊಳ್ಳುತ್ತಿದ್ದ. ಆ ಬಳಿಕ ಅವರನ್ನು ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಕರೆದೊಯ್ಯುತ್ತಿದ್ದ. ಅಲ್ಲಿಂದ ದೊಡ್ಡ ಪ್ರಮಾಣದ ಎಂಡಿಎಂಎ ಅನ್ನು ಕೇರಳಕ್ಕೆ ಸಾಗಣೆ ಮಾಡಿ ಡ್ರಗ್ ಡೀಲರ್‌ಗಳು ಹಾಗೂ ಗ್ರಾಹಕರಿಗೆ ತಲುಪಿಸುತ್ತಿದ್ದ.
ಆರೋಪಿಯ ಮೊಬೈಲ್‌ನಲ್ಲಿ ಸಿಕ್ಕಿದ ವಿಡಿಯೋಗಳಲ್ಲಿ ಡ್ರಗ್ಸ್ ಅನ್ನು ಬಾಳೆಯ ಗೊನೆಗಳ ನಡುವೆ ಯಾವ ರೀತಿ ಕಳ್ಳಮಾರ್ಗದಲ್ಲಿ ಸಾಗಿಸಲಾಗುತ್ತದೆ ಎಂಬ ಕುರಿತು ಮಾಹಿತಿ ಇತ್ತು.
ಇನ್‌ಸ್ಟಾ ಮೂಲಕ ವ್ಯವಹಾರ
ಧನೇಶ್ ಬಂಧನದೊಂದಿಗೆ ಬೆಂಗಳೂರು-ಮೈಸೂರು-ಕೇರಳ ನಡುವಿನ ಡ್ರಗ್ಸ್ ದಂಧೆಯ ಪ್ರಮುಖ ಜಾಲ ಭೇದಿಸಿದಂತಾಗಿದೆ. ಇದರ ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಯಾವ ರೀತಿ ಡ್ರಗ್ಸ್ ಜಾಲ ಕಾರ್ಯಾಚರಣೆ ನಡೆಸುತ್ತದೆ ಎಂಬುದೂ ಬಯಲಾಗಿದೆ.
‘ದನಿ ಭಾಯ್’ ಎಂದೇ ಕರೆಯಲ್ಪಡುವ ಧನೇಶ್ ಇನ್‌ಸ್ಟಾಗ್ರಾಂನಲ್ಲಿ ಡ್ರಗ್ಸ್ ಹಂಚಿಕೆ ಜಾಲದ ಜತೆಗೆ ಸಮನ್ವಯ ಸಾಧಿಸುತ್ತಿದ್ದ. ಯಾರಿಗೆ ಡ್ರಗ್ಸ್ ತಲುಪಿಸಬೇಕು, ಹೇಗೆ ಮತ್ತು ಎಲ್ಲಿ ತಲುಪಿಸಬೇಕು ಎಂದು ನಿರ್ದೇಶನ ನೀಡುತ್ತಿದ್ದ. ಈತನ ನಿರ್ದೇಶನದಂತೆ ಇತ್ತೀಚೆಗೆ ಬಂಧಿತ ಆರೋಪಿಗಳಾದ ಹರಿಕೃಷ್ಣನ್ ಮತ್ತು ಶಿನು ಸೆಬಾಸ್ಟಿಯನ್ ಅವರು ಗ್ರಾಹಕರಿಗೆ ಡ್ರಗ್ಸ್ ಪೂರೈಸುತ್ತಿದ್ದರು. ಬಳಿಕ ಅವರಿಂದ ಹಣ ಸಂಗ್ರಹಿಸಿ ಧನೇಶ್‌ಗೆ ತಲುಪಿಸುತ್ತಿದ್ದರು.