‘ಪ್ರೀತಿ ಹೆಸರಿ’ನಲ್ಲಿ ಹಿಂದೂ ಅಪ್ರಾಪ್ತ ಯುವತಿ ಅಪಹರಣ..!

KannadaprabhaNewsNetwork | Published : Jan 16, 2024 1:47 AM

ಸಾರಾಂಶ

ಪ್ರೀತಿ ಹೆಸರಿನಲ್ಲಿ ಅಪ್ರಾಪ್ತ ಹಿಂದೂ ಯುವತಿಯನ್ನು ಅಪಹರಿಸಿದ್ದ ಮುಸ್ಲಿಂ ಯುವಕ, ಕಡೂರಿನಲ್ಲಿ ಮುಸ್ಲಿಂ ಯುವಕನ್ನು ಬಂಧಿಸಿದ ಪೊಲೀಸರು. ಹಿಂದೂಪರ ಸಂಘಟನೆಗಳ ಪ್ರತಿಭಟನೆ, ಯುವಕನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರ ಭರವಸೆ, ಪ್ರತಿಭಟನೆ ವಾಪಸ್, ಪ್ರಕರಣ ಸುಖಾಂತ್ಯ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಪ್ರೀತಿ ಹೆಸರಿನಲ್ಲಿ ಅಪ್ರಾಪ್ತ ಹಿಂದೂ ಯುವತಿಯನ್ನು ಅಪಹರಿಸಿದ್ದ ಮುಸ್ಲಿಂ ಯುವಕನನ್ನು ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದಲ್ಲಿ ಬಂಧಿಸಿರುವ ಪಟ್ಟಣದ ಪೊಲೀಸರು ಲವ್ ಜಿಹಾದ್ ಆಗಿ ಮಾರ್ಪಡಾಗುವ ಪ್ರಕರಣವನ್ನು ಸುಖಾಂತ್ಯಗೊಳಿಸಿದ್ದಾರೆ.

ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ಅಪ್ರಾಪ್ತ ಹಿಂದೂ ಯುವತಿಯನ್ನು ಇನ್ಸ್ಟಾಗ್ರಾಂ ಮೂಲಕ ಪರಿಚಯಮಾಡಿಕೊಂಡು ಅಪಹರಿಸಿದ್ದ ಮುಸ್ಲಿಂ ಯುವಕ ಸೈಯದ್ ತಬರೇಜ್ (21) ಬಂಧಿಸಲಾಗಿದೆ.

ಕಳೆದ ಜ.12ರಂದು ಯುವತಿ ಕಾಣೆಯಾಗಿರುವ ಬಗ್ಗೆ ತಾಯಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಮ್ಮ ಮಗಳು ಅಪ್ರಾಪ್ತಳಾಗಿದ್ದು ಯಾರೋ ದುಷ್ಕರ್ಮಿಗಳು ಅಪಹರಿಸಿರುವ ಶಂಕೆ ಇದೆ. ಕೂಡಲೇ ಹುಡುಕಿ ರಕ್ಷಣೆ ಮಾಡುವಂತೆ ದೂರಿನಲ್ಲಿ ತಿಳಿಸಿದ್ದರು.

ಯುವತಿಯ ತಾಯಿ ದೂರು ಆಧರಿಸಿ ಪಟ್ಟಣ ಠಾಣೆ ಸಬ್ ಇನ್ಸ್ ಪೆಕ್ಟರ್ ನವೀನ್ ಇಬ್ಬರ ಪತ್ತೆಗಾಗಿ ಹುಡುಕಾಟವನ್ನು ಆರಂಭಿಸಿದ್ದರು. ಮೊಬೈಲ್ ಸಂಖ್ಯೆ ಆಧರಿಸಿ ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಬಾಲಕಿಯನ್ನು ಅಪಹರಿಸಿದ್ದ ಆರೋಪಿಯನ್ನು ಬಂಧಿಸಿ ಕರೆತರಲಾಗಿದೆ. ಅಪ್ರಾಪ್ತ ಯುವತಿಯನ್ನು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ. ಘಟನೆ ಕುರಿತಂತೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಆರೋಪಿ ವಿರುದ್ಧ ಪಟ್ಟಣ ಪೊಲೀಸರು ಫೋಕ್ಸೋ ಪ್ರಕರಣ ದಾಖಲಿಸಿಕೊಂಡು ಆರೋಪಿ ಸೈಯದ್ ತಬರೇಜ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.

ಹಿಂದೂಪರ ಸಂಘಟನೆಗಳ ಪ್ರತಿಭಟನೆ:

ಭಾನುವಾರ ರಾತ್ರಿ ಘಟನೆ ವಿಷಯವನ್ನು ತಿಳಿದ ಆರ್‌ಎಸ್‌ಎಸ್, ಬಜರಂಗದಳ, ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಇದೊಂದು ಲವ್‌ ಜಿಹಾದ್ ಪ್ರಕರಣವಾಗಿದೆ. ಯುವಕನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಪಟ್ಟಣ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.

ಮಧ್ಯೆ ಪ್ರವೇಶಿಸಿದ ಪೊಲೀಸರು ಯುವಕನ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಪ್ರತಿಭಟನೆಯನ್ನು ವಾಪಸ್ ಪಡೆದರು. ಗಂಭೀರ ಸ್ವರೂಪದ ಪ್ರಕರಣವನ್ನು ಸುಖಾಂತ್ಯಗೊಳಿಸಿರುವ ಪೊಲಿಸರ ಕ್ರಮಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

Share this article