ವಿಶಾಲ್‌ ಮಾರ್ಟ್‌ನ ಬಟ್ಟೆ ಟ್ಯಾಗಿಂದ ಸಿಕ್ಬಿದ್ದ ಕಿಲ್ಲರ್‌

Published : Sep 26, 2026, 09:53 AM IST
wife murder in bengaluru

ಸಾರಾಂಶ

ಒಂದೂವರೆ ತಿಂಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದು ಬಳಿಕ ಖಾಲಿ ನಿವೇಶನದಲ್ಲಿ ಮೃತದೇಹವನ್ನು ಬಿಸಾಡಿ ಪರಾರಿಯಾಗಿದ್ದ ಹೋಟೆಲ್ ಕೆಲಸಗಾರನೊಬ್ಬ ಈಗ ಮೆಗಾ ಮಾರ್ಟ್‌ನ ಬಟ್ಟೆ ಟ್ಯಾಗ್‌ನಿಂದ ಸಂಪಿಗೆಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಕುತೂಹಲಕಾರಿ ಘಟನೆ ನಡೆದಿದೆ.

ಬೆಂಗಳೂರು : ಒಂದೂವರೆ ತಿಂಗಳ ಹಿಂದೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದು ಬಳಿಕ ಖಾಲಿ ನಿವೇಶನದಲ್ಲಿ ಮೃತದೇಹವನ್ನು ಬಿಸಾಡಿ ಪರಾರಿಯಾಗಿದ್ದ ಹೋಟೆಲ್ ಕೆಲಸಗಾರನೊಬ್ಬ ಈಗ ಮೆಗಾ ಮಾರ್ಟ್‌ನ ಬಟ್ಟೆ ಟ್ಯಾಗ್‌ನಿಂದ ಸಂಪಿಗೆಹಳ್ಳಿ ಪೊಲೀಸರಿಗೆ ಸಿಕ್ಕಿಬಿದ್ದಿರುವ ಕುತೂಹಲಕಾರಿ ಘಟನೆ ನಡೆದಿದೆ.

ಒಡಿಶಾದ ಸಾಗರಚಂದ್ರ ರಾವ್ ಬಂಧಿತ. ಕೆಲ ದಿನಗಳ ಹಿಂದೆ ಪತ್ನಿ ಅನುಸೂಯ ಬೇಹಾರ (28)ನನ್ನು ಕೊಲೆ ಮಾಡಿ ತಪ್ಪಿಸಿಕೊಂಡಿದ್ದ. ಎಂ.ಎಸ್‌.ನಗರದ ಅಗ್ರಹಾರ ಲೇಔಟ್‌ನ ಖಾಲಿ ನಿವೇಶನದಲ್ಲಿ ಮೃತದೇಹ ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಸಂಪಿಗೆಹಳ್ಳಿ ಉಪ ವಿಭಾಗದ ಎಸಿಪಿ ಚಂದನ್ ಕುಮಾರ್ ನೇತೃತ್ವದ ತಂಡ ಮೃತಳು ಧರಿಸಿದ ಬಟ್ಟೆಯ ಟ್ಯಾಗ್‌ನಿಂದ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

ಕಪಾಳಕ್ಕೆ ಹೊಡೆದು ಸಾಯಿಸಿದ್ದ:

2 ವರ್ಷಗಳ ಹಿಂದೆ ಒಡಿಶಾದ ಸಾಗರ್‌ ಚಂದ್ರರಾವ್ ಹಾಗೂ ಅನುಸೂಯ ಪ್ರೇಮ ವಿವಾಹವಾಗಿದ್ದು, ಮದುವೆ ಬಳಿಕ ಅಗ್ರಹಾರ ಲೇಔಟ್ ಬಳಿ ದಂಪತಿ ನೆಲೆಸಿದ್ದರು. ಹೋಟೆಲ್‌ನಲ್ಲಿ ಆತ ಕೆಲಸ ಮಾಡುತ್ತಿದ್ದ. ಮದುವೆ ಬಳಿಕ ಅನ್ಯೋನ್ಯವಾಗಿದ್ದ ಸತಿ-ಪತಿ ಮಧ್ಯೆ ಸಂಸಾರಿಕ ವಿಚಾರವಾಗಿ ಮನಸ್ತಾಪವಾಗಿತ್ತು. ಸಣ್ಣಪುಟ್ಟ ವಿಷಯಗಳಿಗೆ ರಾತ್ರಿ ವೇಳೆ ಪತ್ನಿ ಮೇಲೆ ಚಂದ್ರರಾವ್ ಗಲಾಟೆ ಮಾಡುತ್ತಿದ್ದ. ಅಂತೆಯೇ ಆ.11 ರಂದು ಹಣಕಾಸು ವಿಷಯಕ್ಕೆ ಗಂಡ-ಹೆಂಡತಿ ಮಧ್ಯೆ ಜಗಳವಾಗಿದೆ. ಆಗ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಈ ಹಂತದಲ್ಲಿ ಕೆರಳಿದ ಆತ, ಪತ್ನಿಯ ಕಪಾಳಕ್ಕೆ ಬಾರಿಸಿದ್ದಾನೆ. ಈ ಹೊಡೆತದಿಂದ ಕುಸಿದು ಕೆಳಗೆ ಪ್ರಜ್ಞಾಹೀನಾಳಾಗಿ ಬಿದ್ದ ಅನುಸೂಯಳ ಕುತ್ತಿಗೆಯನ್ನು ಹಿಸುಕಿ ಉಸಿರುಗಟ್ಟಿಸಿ ಆತ ಹತ್ಯೆಗೈದಿದ್ದಾನೆ. ಬಳಿಕ ಮೃತದೇಹವನ್ನು ಚೀಲದಲ್ಲಿ ತುಂಬಿ ಮನೆ ಸಮೀಪದ ಖಾಲಿ ನಿವೇಶನದಲ್ಲಿ ಬಿಸಾಡಿ ಆರೋಪಿ ಪರಾರಿಯಾಗಿದ್ದನು.

ಜಿಬಿಎಯಿಂದ ಮೃತದೇಹ ಪತ್ತೆ:

‘ಸ್ವಚ್ಛ ಬೆಂಗಳೂರು’ ಅಭಿಯಾನದಡಿ ಎಂ.ಎಸ್‌.ನಗರದ ಅಗ್ರಹಾರ ಲೇಔಟ್‌ನಲ್ಲಿ ಖಾಲಿ ನಿವೇಶದಲ್ಲಿ ಬೆಳೆದಿದ್ದ ಗಿಡ-ಗಂಟೆಗಳನ್ನು ಕೂಲಿ ಕಾರ್ಮಿಕರು ಕತ್ತರಿಸುತ್ತಿದ್ದರು. ಆಗ ಆ ಪೊದೆಯಲ್ಲಿ ಕೊಳತೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರಿಗೆ ಕಾರ್ಮಿಕರು ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಸಂಪಿಗೆಹಳ್ಳಿ ಪೊಲೀಸರು, ಮೃತದೇಹವನ್ನು ಪರಿಶೀಲಿಸಿದಾಗ ಬೇರೆಡೆ ಎಲ್ಲೋ ಹತ್ಯೆ ಮಾಡಿ ಖಾಲಿ ಪ್ರದೇಶದಲ್ಲಿ ದುಷ್ಕರ್ಮಿಗಳು ಬಿಸಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅನುಮಾನ ಮೂಡಿದೆ.

ಹಂತಕನ ಸುಳಿವು ನೀಡಿದ ಬಟ್ಟೆ ಟ್ಯಾಗ್‌

ಕೊಲೆ ಪ್ರಕರಣದ ತನಿಖೆಗೆ ಎಸಿಪಿ ಚಂದನ್ ಕುಮಾರ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಗುರುಪ್ರಸಾದ್‌, ಸಿ.ಬಿ.ಶಿವಸ್ವಾಮಿ, ಬಾಲಾಜಿ ಹಾಗೂ ಪಿಎಸ್‌ಐ ಶಿವಕುಮಾರ್ ಅವರನ್ನೊಳಗೊಂಡ ವಿಶೇಷ ತಂಡನ್ನು ಈಶಾನ್ಯ ವಿಭಾಗದ ಡಿಸಿಪಿ ಮಿಥುನ್ ಕುಮಾರ್ ರಚಿಸಿದರು. ಮೃತದೇಹ ಪತ್ತೆಯಾದ ಸುತ್ತಲಿನ ಪಿಜಿ, ಹೋಟೆಲ್‌ಗಳು ಹಾಗೂ ಲೇಬರ್ ಶೆಡ್‌ಗಳು ಸೇರಿದಂತೆ ಎಲ್ಲೆಡೆ ಪೊಲೀಸರು ವಿಚಾರಿಸಿದರೂ ಆರೋಪಿಯ ಸುಳಿವು ಸಿಗಲಿಲ್ಲ. ಕೊನೆಗೆ ಮೃತಳು ಧರಿಸಿದ್ದ ಬಟ್ಟೆ ಮತ್ತು ಪೆಂಡೆಂಟ್, ಕೈಬಳೆ ಇವುಗಳ ಫೋಟೋಗಳನ್ನು ತೆಗೆದುಕೊಂಡು ಪರಿಶೀಲಿಸಲಾಯಿತು. ಆಗ ಮೃತಳು ಧರಿಸಿದ್ದ ಬಟ್ಟೆಗಳಲ್ಲಿದ್ದ ಟ್ಯಾಗ್ ಫೋಟೋವನ್ನು ಪರೀಕ್ಷಿಸಿದಾಗ ಅದು ವಿಶಾಲ್ ಮೆಗಾ ಮಾರ್ಟ್‌ ಬಟ್ಟೆ ಎಂಬುದು ಗೊತ್ತಾಯಿತು. ಆ ಬಟ್ಟೆಯನ್ನು ವಿಶಾಲ್ ಮಾರ್ಟ್‌ಗೆ ತೆರಳಿ ಟ್ಯಾಗ್‌ ಸ್ಕ್ಯಾನ್ ಮಾಡಿದಾಗ ಬಟ್ಟೆಯ ವಿವರಗಳು ಲಭಿಸಿದ್ದವು. ಒಡಿಶಾದ ಭುವನೇಶ್ವರ ನಗರದ ವಿಶಾಲ್ ಮಾರ್ಟ್‌ ಶಾಖೆಯಲ್ಲಿ ಖರೀದಿಸಿರುವುದು ಗೊತ್ತಾಯಿತು. ಆ ಬಟ್ಟೆ ಖರೀದಿ ಬೀಲ್ ಆಧರಿಸಿ ತನಿಖೆಗಿಳಿದಾಗ ಆರೋಪಿಯ ಮೊಬೈಲ್ ನಂಬರ್ ಸಿಕ್ಕಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆಗಿಳಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ ಎಂದು ಪೊಲೀಸರು ವಿವರಿಸಿದ್ದಾರೆ.

ಠಾಣೇಲೇ ಇದ್ದ ಆರೋಪಿ:

ಒಂದೂವರೆ ತಿಂಗಳಿಂದ ತಮ್ಮ ಸಂಪರ್ಕಕ್ಕೆ ಅನುಸೂಯ ಸಿಗದೆ ಹೋದಾಗ ಆಕೆಯ ಕುಟುಂಬದವರಿಗೆ ಆಂತಕವಾಗಿದೆ. ಈ ಬಗ್ಗೆ ವಿಚಾರಿಸಲು ಅಳಿಯ ರಾವ್‌ಗೆ ಮಾಡಿದಾಗಲೂ ಸಹ ಆತನಿಂದ ಸೂಕ್ತ ಸ್ಪಂದನೆ ಸಿಗುವುದಿಲ್ಲ. ಇದರಿಂದ ಮತ್ತಷ್ಟು ವ್ಯಾಕುಲಗೊಂಡ ಮೃತಳ ಸೋದರು, ಪೊಲೀಸರಿಗೆ ದೂರು ಕೊಡುವ ಸಲುವಾಗಿ ನಗರಕ್ಕೆ ಬಂದಿದ್ದರು. ಸಂಪಿಗಹಳ್ಳಿ ಠಾಣೆಗೆ ದೂರು ಕೊಡಲು ಬಂದಾಗಲೇ ಆರೋಪಿ ಸಹ ಅದೇ ಠಾಣೆಯಲ್ಲಿದ್ದ ಎಂದು ಗೊತ್ತಾಗಿದೆ.

ಆತ್ಮಹತ್ಯೆ ನಾಟಕ ಕಟ್ಟಿದ:

ಮೊಬೈಲ್ ಕರೆ ಮಾಹಿತಿ ಆಧರಿಸಿ ರಾವ್‌ನನ್ನು ಪೊಲೀಸರು ಬೆನ್ನತ್ತಿದ್ದರು. ಅದೇ ಹೊತ್ತಿಗೆ ರಾವ್‌ ನಡವಳಿಕೆ ಬಗ್ಗೆ ಶಂಕಾಸ್ಪದವಾಗಿದೆ ಎಂದು ಪೊಲೀಸರಿಗೆ ಆತನ ಸ್ನೇಹಿತರು ಬಾತ್ಮಿಕೊಟ್ಟಿದ್ದರು. ಈ ಮಾಹಿತಿ ಆಧರಿಸಿ ಆತನನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಆದರೆ ಆರಂಭದಲ್ಲಿ ತಾನು ಕೊಲೆ ಮಾಡಿಲ್ಲ. ಆಕೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಳು ಎಂದು ಆರೋಪಿ ಹೇಳಿದ್ದಾನೆ. ಆದರೆ ಆತನನ್ನು ‘ತೀವ್ರ’ ವಿಚಾರಣೆ ನಡೆಸಿದಾಗ ಕೊನೆಗೆ ಸತ್ಯ ಬಾಯ್ಬಿಟ್ಟಿದ್ದಾನೆ ಎಂದು ತಿಳಿದು ಬಂದಿದೆ.

5 ದಿನ ಮೃತದೇಹ ಜತೆಗೆ ಇದ್ದ ಆರೋಪಿ

ಪತ್ನಿಯನ್ನು ಕೊಲೆ ಮಾಡಿದ ಬಳಿಕ ಭಯಗೊಂಡು ಆತ, ಆ ಮೃತದೇಹದ ಜತೆ ಮನೆಯಲ್ಲಿ ಐದು ದಿನಗಳು ಕಳೆದಿದ್ದಾನೆ. ಎರಡ್ಮೂರು ದಿನಗ‍ಳು ಯೋಚಿಸಿ ಮನೆ ಸಮೀಪದಲ್ಲಿದ್ದ ಗಿಡ ಗಂಟೆಗಳು ಬೆಳೆದಿದ್ದ ಖಾಲಿ ನಿವೇಶನಕ್ಕೆ ಆ.16 ರ ನಸುಕಿನಲ್ಲಿ ಮೃತದೇಹವನ್ನು ಬೆಡ್‌ ಶೆಟ್‌ನಲ್ಲಿ ಸುತ್ತಿಕೊಂಡು ಹೋಗಿ ಬಿಸಾಡಿದ್ದಾನೆ.ಬಳಿಕ ಮನೆಯನ್ನು ಖಾಲಿ ಮಾಡಿಕೊಂಡು ತಾನು ಕೆಲಸ ಮಾಡುತ್ತಿದ್ದ ಹೋಟೆಲ್‌ನಲ್ಲೇ ಆತ ವಾಸವಾಗಿದ್ದ. ಇತ್ತ ಕೊಲೆ ನಡೆದ 1 ತಿಂಗಳ ಬಳಿಕ ಕೊಳತೆ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು. ಹೀಗಾಗಿ ಮೃತಳ ಗುರುತು ಪತ್ತೆ ಹಚ್ಚುವುದೇ ಪೊಲೀಸರಿಗೆ ಸವಾಲಾಗಿತ್ತು.

ಮೃತದೇಹ ನೀಡಲು ಪೋಷಕರಿಂದ ಮನವಿ

ಕೊಳತೆ ಸ್ಥಿತಿಯಲ್ಲಿದ್ದ ಕಾರಣ ತಲೆಬರುಡೆ ಹಾಗೂ ಕೈ ಕಾಲುಗಳ ಮೂಳೆಗಳನ್ನು ಹೊರತುಪಡಿಸಿ ಮೃತದೇಹವನ್ನು ಪೊಲೀಸರು ಅಂತ್ಯಕ್ರಿಯೆ ನಡೆಸಿದ್ದರು. ಅಪರಿಚಿತ ಮೃತದೇಹದ ಪತ್ತೆಗಾಗಿ ತಲೆಬರುಡೆ ಹಾಗೂ ಕಾಲುಗಳ ಮೂಳೆಗಳನ್ನು ಪೊಲೀಸರು ಸಂಗ್ರಹಿಸಿದ್ದರು. ಈಗ ಮೃತಳ ಪೋಷಕರು ಮೃತದೇಹವನ್ನು ತಮಗೆ ನೀಡುವಂತೆ ಮನವಿ ಮಾಡಿದ್ದಾರೆ. ಹೀಗಾಗಿ ಡಿಎನ್‌ಎ ಪರೀಕ್ಷೆ ಬಳಿಕ ತಲೆಬುರಡೆಯನ್ನು ಪೋಷಕರಿಗೆ ಮರಳಿಸಲು ಪೊಲೀಸರು ತೀರ್ಮಾನಿಸಿದ್ದಾರೆ ಎಂದು ತಿಳಿದು ಬಂದಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಮೋದಿ, ಅಮಿತ್‌, ಯೋಗಿ, ಯತ್ನಾಳ್‌, ರವಿ, ಪ್ರತಾಪ್‌ ಹತ್ಯೆಗೆ ಉಗ್ರ ಸಂಚು!
ಬಾಲಕನ ಹತ್ಯೆಗೆ 15 ದಿನಗಳಿಂದ ತಯಾರಿ