ಕಾಡು ಹಂದಿ ಬೇಟೆ ಪ್ರಕರಣದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಧಿಕೃತ ಅಧಿಕಾರಿ ದೂರು ಸಲ್ಲಿಸದೆ, ಪೊಲೀಸರೇ ನೇರವಾಗಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸುವುದು ಕಾನೂನು ಬಾಹಿರ ಕ್ರಮ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕಾಡು ಹಂದಿ ಬೇಟೆ ಪ್ರಕರಣದಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಧಿಕೃತ ಅಧಿಕಾರಿ ದೂರು ಸಲ್ಲಿಸದೆ, ಪೊಲೀಸರೇ ನೇರವಾಗಿ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸುವುದು ಕಾನೂನು ಬಾಹಿರ ಕ್ರಮ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿ ನಡೆದ ಕಾಡು ಹಂದಿ ಬೇಟೆ ನಡೆಸಿದ ಆರೋಪದ ಮೇಲೆ ತಮ್ಮ ವಿರುದ್ಧ ಪೊಲೀಸರು ಸಲ್ಲಿಸಿರುವ ದೋಷಾರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ರಮೇಶ್ ಎನ್. ಸೇರಿದಂತೆ ನಾಲ್ವರು ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸೆಕ್ಷನ್ 55ರ ಪ್ರಕಾರ, ವನ್ಯಜೀವಿ ಸಂರಕ್ಷಣಾ ನಿರ್ದೇಶಕರು, ಮುಖ್ಯ ವನ್ಯಜೀವಿ ರಕ್ಷಕರು ಅಥವಾ ಸರ್ಕಾರದಿಂದ ಅಧಿಕಾರ ಪಡೆದ ನಿರ್ದಿಷ್ಟ ಅಧಿಕಾರಿಗಳು ದೂರು ಸಲ್ಲಿಸಿದರೆ ಮಾತ್ರ ನ್ಯಾಯಾಲಯಗಳು ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಲು (ಕಾಗ್ನಿಜೆನ್ಸ್ ಪಡೆದುಕೊಳ್ಳಲು) ಅವಕಾಶವಿದೆ. ಈ ಪ್ರಕರಣದಲ್ಲಿ ಪೊಲೀಸರು ನೇರವಾಗಿ ತನಿಖೆ ನಡೆಸಿ ಆರೋಪಪಟ್ಟಿ ಸಲ್ಲಿಸಿರುವುದು ಕಾಯ್ದೆಯ ಸೆಕ್ಷನ್ 55ರ ಸ್ಪಷ್ಟ ಉಲ್ಲಂಘನೆಯಾಗಿದೆ. ಹಾಗಾಗಿ, ಅರ್ಜಿದಾರರ ವಿರುದ್ಧ ಅರಕೆರೆ ಠಾಣಾ ಪೊಲಿಸರು ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ದಾಖಲಿಸಿದ ದೋಷಾರೋಪ ಪಟ್ಟಿ ಮತ್ತು ಆ ನ್ಯಾಯಾಲಯ ಕಾಗ್ನಿಜೆನ್ಸ್ ಪಡೆದುಕೊಂಡಿರುವುದನ್ನು ರದ್ದುಪಡಿಸಿದೆ. ಅಲ್ಲದೆ, ನಿಗದಿಪಡಿಸಿದ ಅರ್ಹ ಅಧಿಕಾರಿಗಳ ಮೂಲಕ ಹೊಸದಾಗಿ ದೂರು ದಾಖಲಿಸಿ, ಮುಂದಿನ ಕಾನೂನು ಪ್ರಕಾರ ಪ್ರಕ್ರಿಯೆ ನಡೆಸಲು ಪೀಠ ಇದೇ ವೇಳೆ ಅನುಮತಿ ನೀಡಿದೆ.
ಪ್ರಕರಣ ವಿವರ
2019ರ ಆ.25ರಂದು ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಪರವಾನಗಿ ಹೊಂದಿದ್ದ ಬಂದೂಕನ್ನು ಬಳಸಿ ಕಾಡು ಹಂದಿಯನ್ನು ಬೇಟೆಯಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ದಾಳಿ ನಡೆಸಿದ್ದ ಪೊಲೀಸರು ಅರ್ಜಿದಾರ ಆರೋಪಿಗಳಿಂದ ವನ್ಯಜೀವಿ ಮಾಂಸ, 30.06 ಸ್ಪೋರ್ಟಿಂಗ್ ರೈಫಲ್ ಏರ್ ಗನ್ ಹಾಗೂ ಸರಕು ವಾಹನವನ್ನು ಜಪ್ತಿ ಮಾಡಿದ್ದರು. ನಂತರ ತನಿಖೆ ಪೂರ್ಣಗೊಳಿಸಿ ಶ್ರೀರಂಗಪಟ್ಟಣದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 3, 25(1), 27, ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸೆಕ್ಷನ್ 9 ಮತ್ತು 51 ಹಾಗೂ ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ಅದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.