ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಕೊಲ್ಲಿ ವೃತ್ತದ ಬಳಿ ಇರುವ ವಿನಾಯಕ ಬಡಾವಣೆಯ ಮನೆ ಹಾಗೂ ತಾಲೂಕಿನ ಹೂತಗೆರೆಯಲ್ಲಿರುವ ಫಾರ್ಮ್‌ಹೌಸ್ ಸೇರಿದಂತೆ ಒಟ್ಟು ಎರಡು ಪ್ರಮುಖ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಮಂಡ್ಯ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸುರೇಶ್ ಬಾಬು ಹಾಗೂ ಲೋಕಾಯುಕ್ತ ಪೊಲೀಸ್ ಇನ್ಸ್‌ಪೆಕ್ಟರ್ ಬ್ಯಾಟರಾಯಗೌಡ ಅವರ ನೇತೃತ್ವದಲ್ಲಿ ಈ ಭರ್ಜರಿ ಕಾರ್ಯಾಚರಣೆ ನಡೆದಿದೆ.
ಕಳೆದ ತಿಂಗಳಷ್ಟೇ ನಿವೃತ್ತಿಯಾಗಿದ್ದ ವಾರ್ಡನ್!:ಆರೋಪಿ ಶಿವರಾಜು ಅವರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ವಾರ್ಡನ್ ಆಗಿ ಸೇವೆ ಸಲ್ಲಿಸುತ್ತಿದ್ದು, ಸೋಮನಹಳ್ಳಿ ಹಾಗೂ ಬೆಸಗರಹಳ್ಳಿಯ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಕಳೆದ ತಿಂಗಳಷ್ಟೇ ಅವರು ಸೇವೆಯಿಂದ ನಿವೃತ್ತರಾಗಿದ್ದರು. ಆದಾಗ್ಯೂ, ಇವರ ವಿರುದ್ಧ ಸಲ್ಲಿಕೆಯಾಗಿದ್ದ ಅಕ್ರಮ ಆಸ್ತಿ ಗಳಿಕೆ ದೂರಿನನ್ವಯ ಲೋಕಾಯುಕ್ತ ಪೊಲೀಸರು ಈ ದಾಳಿ ನಡೆಸಿದ್ದಾರೆ.
ಶೋಧ ಕಾರ್ಯದ ವೇಳೆ ಅಧಿಕಾರಿಗಳಿಗೆ ಆಘಾತಕಾರಿ ವಿಚಾರಗಳು ತಿಳಿದುಬಂದಿವೆ. ಹಾಸ್ಟೆಲ್ ವಿದ್ಯಾರ್ಥಿಗಳಿಗೆ ವಿತರಿಸಬೇಕಿದ್ದ ಸರ್ಕಾರಿ ಪುಸ್ತಕಗಳು, ಬೆಡ್‌ಶೀಟ್‌ಗಳು ಹಾಗೂ ಇತರೆ ಸಾಮಗ್ರಿಗಳನ್ನು ಶಿವರಾಜು ತಮ್ಮ ಖಾಸಗಿ ಫಾರ್ಮ್‌ಹೌಸ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಅಷ್ಟೇ ಅಲ್ಲದೇ, ಫಾರ್ಮ್‌ಹೌಸ್‌ನಲ್ಲಿ ಮಿನಿ ಬಾರ್ ನಿರ್ಮಿಸಿಕೊಂಡಿದ್ದ ಅವರು, ದುಬಾರಿ ಬೆಲೆಯ ಸುಮಾರು ೭೦ ಮದ್ಯದ ಬಾಟಲಿಗಳನ್ನು ದಾಸ್ತಾನು ಮಾಡಿದ್ದರು.
ದಾಳಿಯ ವೇಳೆ ಒಟ್ಟು ೨.೭೧ ಕೋಟಿಗೂ (ಶೇ.೨೪೫.೬೧) ಅಧಿಕ ಮೌಲ್ಯದ ಆದಾಯಕ್ಕೂ ಮೀರಿದ ಆಸ್ತಿ ಪತ್ತೆಯಾಗಿದೆ ಎಂದು ಅಂದಾಜಿಸಲಾಗಿದೆ.
ಚರಾಸ್ತಿಗಳು (ಅಂದಾಜು ಮೌಲ್ಯ: ೧,೬೬,೩೦,೦೦೦) ದಾಳಿ ವೇಳೆ ಸಿಕ್ಕಿಬಿದ್ದ ೨,೫೦,೦೦೦ ರು. ನಗದು, ೩೩.೮೦ ಲಕ್ಷ ರು. ಮೌಲ್ಯದ ೬೦೦ ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ಆಭರಣಗಳು. ೧೫ ಲಕ್ಷ ರು. ಮೌಲ್ಯದ ೨ ಐಷಾರಾಮಿ ಕಾರುಗಳು (ಇನ್ನೋವಾ ಮತ್ತು ಟಾಟಾ ನೆಕ್ಸಾನ್).