ಸೌಜನ್ಯ ಹತ್ಯೆ ಕೇಸ್‌ ಮರುತನಿಖೆ ನಡೆಸಿ: ಸುಪ್ರೀಂ ನಿರ್ದೇಶನ

Published : Sep 22, 2026, 06:59 AM IST
soujanya case

ಸಾರಾಂಶ

ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂಕೋರ್ಟ್, ತನಿಖೆಗಾಗಿ ಹೊಸ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ನವದೆಹಲಿ: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿರುವ ಸುಪ್ರೀಂಕೋರ್ಟ್, ತನಿಖೆಗಾಗಿ ಹೊಸ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೆ, ಎಸ್‌ಐಟಿ ಮುಂದಿನ 3 ತಿಂಗಳ ಒಳಗಾಗಿ ಸಂಪೂರ್ಣ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ. ಕೊಲೆ ನಡೆದು 14 ವರ್ಷಗಳ ಬಳಿಕ ಮರುತನಿಖೆಗೆ ನ್ಯಾಯಾಲಯ ಆದೇಶ ನೀಡಿರುವುದು ಮಹತ್ವದ ಬೆಳವಣಿಗೆಯಾಗಿದೆ.

ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ.ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠ, ಪ್ರಕರಣದ ಮರುತನಿಖೆಗೆ ಆದೇಶಿಸಿದೆ.

ಈ ಹಿಂದಿನ ವಿಚಾರಣೆ ವೇಳೆ ಪ್ರಕರಣದ ಸಿಬಿಐ ತನಿಖೆ ಬಗ್ಗೆ ಸುಪ್ರೀಂಕೋರ್ಟ್‌ ಅಸಮಾಧಾನ ವ್ಯಕ್ತಪಡಿಸಿತ್ತು. ಸಿಐಡಿ ತನಿಖೆಯಲ್ಲಿ ಸಂಗ್ರಹಿಸಲಾಗಿದ್ದ ಸಾಕ್ಷ್ಯಗಳನ್ನೇ ಆಧರಿಸಿ ವರದಿ ಸಿದ್ಧಪಡಿಸಲಾಗಿದೆ, ಸಿಬಿಐನಿಂದ ಸ್ವತಂತ್ರ ತನಿಖೆ ನಡೆದಿಲ್ಲ. ತನಿಖಾಧಿಕಾರಿ ಘಟನಾ ಸ್ಥಳಕ್ಕೆ ಹೋಗದೆ ತನಿಖೆ ಮಾಡಿದ್ದು ಹೇಗೆ ಎಂದು ಪ್ರಶ್ನಿಸಿತ್ತು. ಈ ಮಧ್ಯೆ, ಪ್ರಕರಣ ಸಂಬಂಧ ವಾದ ಮಂಡಿಸಿದ್ದ ಕರ್ನಾಟಕ ಸರ್ಕಾರ, ನ್ಯಾಯಾಲಯ ಮರುತನಿಖೆಗೆ ಆದೇಶಿಸಿದರೆ ಹೊಸದಾಗಿ ವಿಶೇಷ ತನಿಖಾ ತಂಡ ರಚಿಸಲು ಸಿದ್ಧವಿರುವುದಾಗಿ ತಿಳಿಸಿತ್ತು.

ಇದರನ್ವಯ ಸುಪ್ರೀಂಕೋರ್ಟ್‌ ಸೋಮವಾರ ಆದೇಶ ನೀಡಿದ್ದು, ದಕ್ಷ ಅಧಿಕಾರಿಯ ನೇತೃತ್ವದಲ್ಲಿ ಹೊಸ ಎಸ್‌ಐಟಿ ಮೂಲಕ ತನಿಖೆ ನಡೆಸಬೇಕು. ಎಸ್‌ಐಟಿ ಯಾವುದೇ ಪ್ರಭಾವಕ್ಕೆ ಒಳಗಾಗಬಾರದು. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತನಿಖೆ ನಡೆಸಬೇಕು. ಹೊಸ ಎಸ್‌ಐಟಿಯಲ್ಲಿ ಈ ಹಿಂದೆ ಪ್ರಕರಣದ ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸ್ ಅಥವಾ ಸಿಬಿಐ ಅಧಿಕಾರಿಗಳನ್ನು ಸೇರಿಸಬಾರದು. ಈ ಹಿಂದೆ ಆರೋಪಿಯಾಗಿದ್ದ ಸಂತೋಷ್‌ ರಾವ್‌ ಅವರನ್ನು ವಿಚಾರಣೆಗೆ ಒಳಪಡಿಸಬಾರದು. ಮೂರು ತಿಂಗಳೊಳಗೆ ತನಿಖಾ ವರದಿ ಸಲ್ಲಿಸಬೇಕು. ಪೊಲೀಸ್‌ ವರದಿಯನ್ನು ಕಾನೂನಿನ ಪ್ರಕಾರ ಸಂಬಂಧಪಟ್ಟ ನ್ಯಾಯಾಲಯದ ಮುಂದೆ ಸಲ್ಲಿಸಿ, ನಂತರ ಕಾನೂನಿನ ಪ್ರಕಾರ ಪ್ರಕರಣದ ವಿಚಾರಣೆ ಮುಂದುವರಿಸಬೇಕು ಎಂದು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

ಪ್ರಕರಣವೇನು?:

2012ರ ಅ.9ರಂದು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಸಮೀಪ ಕಾಲೇಜು ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾಗಿದ್ದರು. ಪ್ರಕರಣದ ತನಿಖೆ ನಡೆಸಿದ್ದ ಸ್ಥಳೀಯ ಪೊಲೀಸರು, ಸಂತೋಷ್ ರಾವ್ ಎಂಬುವರನ್ನು ಬಂಧಿಸಿದ್ದರು. ಬಳಿಕ, ಪ್ರಕರಣದ ತನಿಖೆಯನ್ನು ಸಿಐಡಿ, ನಂತರ ಸಿಬಿಐಗೆ ವಹಿಸಲಾಗಿತ್ತು. ಸಿಬಿಐ, ಪ್ರಕರಣದ ತನಿಖೆ ವೇಳೆ ಸಂತೋಷ್ ರಾವ್ ಅವರನ್ನು ಆರೋಪಿಯನ್ನಾಗಿ ಹೆಸರಿಸಿತ್ತು. ಆದರೆ, 2023ರ ಜೂನ್ 16ರಂದು ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ, ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿತ್ತು.

ತೀರ್ಪನ್ನು ಪ್ರಶ್ನಿಸಿ ಸಿಬಿಐ, ಹೈಕೋರ್ಟ್‌ನಲ್ಲಿ ಮೇಲ್ಮನವಿ

ಈ ಖುಲಾಸೆ ತೀರ್ಪನ್ನು ಪ್ರಶ್ನಿಸಿ ಸಿಬಿಐ, ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ಮತ್ತೊಂದೆಡೆ, ಸೌಜನ್ಯ ಅವರ ತಂದೆ ಚಂದಪ್ಪ ಗೌಡ ಹಾಗೂ ತಾಯಿ ಕುಸುಮಾವತಿ ಅವರು ಪ್ರಕರಣದ ಮರುತನಿಖೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಖುಲಾಸೆಯಾದ ಸಂತೋಷ್ ರಾವ್ ಕೂಡ ತಮ್ಮ ವಿರುದ್ಧ ನಡೆದ ವಿಚಾರಣೆಗೆ ಪರಿಹಾರ ಕೋರಿ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

2024ರ ಆಗಸ್ಟ್‌ 20ರಂದು ಈ ಮೂರೂ ಅರ್ಜಿಗಳ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್, ಈ ಅರ್ಜಿಗಳನ್ನು ವಜಾಗೊಳಿಸಿತ್ತು.

2026ರಲ್ಲಿ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಕರ್ನಾಟಕ ಹೈಕೋರ್ಟ್‌ ತೀರ್ಪು ಪ್ರಶ್ನಿಸಿ ಕುಸುಮಾವತಿ ಗೌಡ ಅವರು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದರು. ಮರುತನಿಖೆ ನಡೆಸುವ ವಿಧಾನ ಮತ್ತು ಯಾವ ತನಿಖಾ ಸಂಸ್ಥೆಯ ಮೂಲಕ ತನಿಖೆ ನಡೆಸಬೇಕು ಎಂಬ ವಿಚಾರದಲ್ಲಿ ನ್ಯಾಯಾಲಯದಲ್ಲಿ ವಾದ-ಪ್ರತಿವಾದಗಳು ನಡೆದಿದ್ದವು. ರಾಜ್ಯ ಸರ್ಕಾರ ಕೂಡ ಅಗತ್ಯವಿದ್ದಲ್ಲಿ ಎಸ್‌ಐಟಿ ರಚಿಸಲು ಸಿದ್ಧವಿರುವುದಾಗಿ ನ್ಯಾಯಾಲಯಕ್ಕೆ ತಿಳಿಸಿತ್ತು.

ಇದೀಗ ಸುಪ್ರೀಂಕೋರ್ಟ್ ಹೊಸ ಎಸ್‌ಐಟಿ ಮೂಲಕ ಮರುತನಿಖೆಗೆ ಆದೇಶ ನೀಡಿ, ಮೂರು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ವಿವಾಹಿತೆಯನ್ನು ಅಪಹರಿಸಿದ್ದು ಸೋದರತ್ತೆ, ಆಕೆಯ ಸಂಬಂಧಿ
ಹೂಡಿಕೆ ಹೆಸರಿನಲ್ಲಿ ವಂಚನೆ: ಮೂವರ ಬಂಧನ