ಚಾಲಕನ ನಿಯಂತ್ರಣ ತಪ್ಪಿ ಕುಂದನಹಳ್ಳಿ ಗೇಟ್ ಬಳಿ ಮರಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ: 35 ಮಂದಿಗೆ ಗಾಯ

KannadaprabhaNewsNetwork |  
Published : Feb 14, 2025, 12:35 AM ISTUpdated : Feb 14, 2025, 04:14 AM IST
13ಕೆಎಂಎನ್ ಡಿ22 | Kannada Prabha

ಸಾರಾಂಶ

ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿಯಾಗಿ 35 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಘಟನೆ ಕೆ.ಆರ್.ಪೇಟೆ ತಾಲೂಕಿನ ಹೇಮಗಿರಿ ರಸ್ತೆಯ ಕುಂದನಹಳ್ಳಿಗೇಟ್ ಬಳಿ ಗುರುವಾರ ಬೆಳಗ್ಗೆ ನಡೆದಿದೆ.  

 ಕೆ.ಆರ್.ಪೇಟೆ : ಚಾಲಕನ ನಿಯಂತ್ರಣ ತಪ್ಪಿ ಕೆಎಸ್‌ಆರ್‌ಟಿಸಿ ಬಸ್ ಮರಕ್ಕೆ ಡಿಕ್ಕಿಯಾಗಿ 35 ಮಂದಿಗೆ ತೀವ್ರ ಸ್ವರೂಪದ ಗಾಯಗಳಾಗಿರುವ ಘಟನೆ ತಾಲೂಕಿನ ಹೇಮಗಿರಿ ರಸ್ತೆಯ ಕುಂದನಹಳ್ಳಿಗೇಟ್ ಬಳಿ ಗುರುವಾರ ಬೆಳಗ್ಗೆ ನಡೆದಿದೆ.

ತಾಲೂಕಿನ ಆಲೇನಹಳ್ಳಿಯಿಂದ ಕೆ.ಆರ್.ಪೇಟೆ ತಾಲೂಕು ಕೇಂದ್ರದ ಕಡೆಗೆ ಬರುತ್ತಿದ್ದ ಪಟ್ಟಣದ ಬಸ್ ಡಿಪೋಗೆ ಸೇರಿದ ಬಸ್ (ಕೆ.ಎ.11-ಎಫ್-0278) ಕುಂದನಹಳ್ಳಿ ಗೇಟ್ ಬಳಿ ಹೇಮಗಿರಿ ಮುಖ್ಯ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ಮರಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಘಟನೆಯಲ್ಲಿ ನಾಟನಹಳ್ಳಿ ಗ್ರಾಮದ ಪ್ರೇಕ್ಷಿತಾ, ಸುಚಿತ್ರ, ರಾಜೇಗೌಡ, ಮಲ್ಲೇನಹಳ್ಳಿಯ ನಿಂಗಮ್ಮ, ನಾರ್ಗೋನಹಳ್ಳಿಯ ಶಿವಮ್ಮ, ಶೋಭ, ಆಲೇನಹಳ್ಳಿಯ ಬಿಂದು, ಹೊನ್ನೇನಹಳ್ಳಿಯ ದೇವರಾಜು, ಬಂಡಿಹೊಳೆ ಕೀರ್ತನ, ಮಡುವಿನಕೋಡಿ ಕಿರಣ್, ಮೂಡನಹಳ್ಳಿ ಅರ್ಪಿತಾ, ಆಶಾ, ವಡ್ಡರಹಳ್ಳಿ ಅರ್ಪಿತ, ಕಾಂತಾಮಣಿ, ಚಾಲಕ ಎಂ.ಬಿ.ಕಿರಣ್, ನಿರ್ವಾಹಕ ಸೇರಿದಂತೆ 35 ಮಂದಿಗೆ ಗಾಯಗಳಾಗಿವೆ.

ಈ ಪೈಕಿ ಪ್ರೇಕ್ಷಿತಾ, ನಿಂಗಮ್ಮ, ರಾಜೇಗೌಡ, ಬಿಂದು ಸೇರಿದಂತೆ ಆರೇಳು ಮಂದಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ತಾಲೂಕು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಶಶಿಧರ್ ನೇತೃತ್ವದಲ್ಲಿ ಆ್ಯಂಬುಲೆನ್ಸ್‌ನಲ್ಲಿ ಕೆ.ಆರ್.ಪೇಟೆ ಸರ್ಕಾರಿ ಆಸ್ಪತೆಗೆ ಕರೆತಂದು ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಿಕೊಡಲಾಯಿತು.

ಘಟನೆ ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಎಚ್.ಟಿ.ಮಂಜು, ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್, ತಹಸೀಲ್ದಾರ್ ಡಾ.ಎಸ್.ಯು.ಅಶೋಕ್, ಜಿಲ್ಲಾ ಸಾರಿಗೆ ನಿಯಂತ್ರಣಾಧಿಕಾರಿ ನಾಗರಾಜು, ಡಿಪೋ ಮ್ಯಾನೇಜರ್ ರವಿ ಸೇರಿದಂತೆ ಹಲವು ಅಧಿಕಾರಿಗಳು ಬೇಟಿ ನೀಡಿ ಗಾಯಾಳುಗಳಿಗೆ ಸಾಂತ್ವನ ಹೇಳಿದರು.

ಗುಣಮಟ್ಟವಿಲ್ಲದ ಬಸ್ ನೀಡುತ್ತಿರುವ ಸರ್ಕಾರ:

ಶಾಸಕ ಎಚ್.ಟಿ.ಮಂಜು ಗಾಯಾಳುಗಳನ್ನು ಮೈಸೂರು ಆಸ್ಪತ್ರೆಗೆ ಕಳುಹಿಸಲು ಸಹಕರಿಸಿ ಮಾತನಾಡಿ, ತಾಲೂಕಿಗೆ ಮೈಸೂರು, ಬೆಂಗಳೂರು ಕಡೆಗಳಲ್ಲಿ ಓಡಿಸಿದ ಹಳೆಯ ಬಸ್‌ಗಳನ್ನು ಕೊಡಲಾಗುತ್ತಿದೆ. ಇದರಿಂದ ಬಸ್‌ಗಳು ಚಲಿಸಲು ಗುಣಮಟ್ಟವಿಲ್ಲದೆ ಅಲ್ಲಲ್ಲಿ ಕೆಟ್ಟು ನಿಲ್ಲುವುದು, ಅಪಘಾತಗಳಾಗಲು ಕಾರಣವಾಗಿದೆ. ಕೂಡಲೇ ಹೊಸ ಬಸ್‌ಗಳನ್ನು ನೀಡಿ, ಹಳೆಯ ಬಸ್‌ಗಳನ್ನು ವಾಪಸ್ ಪಡೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ಉಚಿತ ಚಿಕಿತ್ಸೆಗೆ ಕ್ರಮ:

ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಗಾಯಾಳುಗಳ ಆರೋಗ್ಯ ವಿಚಾರಿಸಿ ಮಾತನಾಡಿ, ಸರ್ಕಾರದಿಂದ ಉಚಿತ ಚಿಕಿತ್ಸೆ ಕೊಡಿಸಲು ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾ ಸಾರಿಗೆ ಅಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳ ಮೂಲಕ ಸೂಚಿಸಲಾಗಿದೆ. ಗಾಯಾಳುಗಳಿಗೆ ಸೂಕ್ತ ಪರಿಹಾರವನ್ನು ಸರ್ಕಾರ ಅಥವಾ ಸಾರಿಗೆ ಇಲಾಖೆಯಿಂದ ಕೊಡಿಸಲು ಕ್ರಮ ವಹಿಸಲಾಗುವುದು ಎಂದರು.

ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಮಾತನಾಡಿ, ಬಸ್‌ನಲ್ಲಿ ಸುಮಾರು 52 ಮಂದಿ ಪ್ರಯಾಣಿಸುತ್ತಿದ್ದರು. ಈ ಪೈಕಿ ಸುಮಾರು 35 ಮಂದಿ ಗಾಯಗಳಾಗಿದೆ. ಇದರಲ್ಲಿ 10ಕ್ಕೂ ಹೆಚ್ಚು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಸೇರಿ 16 ಮಂದಿಗೆ ಗಂಭೀರವಾದ ಗಾಯಗಳಾಗಿದೆ. ಎಲ್ಲರಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದರು.

ಜಿಲ್ಲಾ ಸಾರಿಗೆ ನಿಯಂತ್ರಣಾಧಿಕಾರಿ ನಾಗರಾಜು, ಕೆ.ಆರ್.ಪೇಟೆ ಡಿಪೋ ಮ್ಯಾನೇಜರ್ ರವಿ, ಕಸಬಾ ರಾಜಸ್ವ ನಿರೀಕ್ಷಕ ಜ್ಞಾನೇಶ್, ಗ್ರಾಮ ಆಡಳಿತ ಅಧಿಕಾರಿ ಜಗದೀಶ್, ಶಾಸಕರ ಆಪ್ತ ಸಹಾಯಕ ಅರಳಕುಪ್ಪೆ ಪ್ರತಾಪ್, ತಾಲೂಕು ಕರವೇ ಸ್ವಾಭಮಾನಿ ಸೇನೆ ತಾಲೂಕು ಅಧ್ಯಕ್ಷ ಸಮೀರ್, ಉಪಾಧ್ಯಕ್ಷ ಅಮ್ಜದ್ ಪಾಷಾ ಸೇರಿದಂತೆ ಹಲವರು ಗಾಯಾಳುಗಳ ಆರೋಗ್ಯ ವಿಚಾರಿಸಿದರು.

ಅಪಘಾತದಿಂದ ಗಾಯಗೊಂಡಿರುವ ವಿದ್ಯಾರ್ಥಿಗಳ ಕೈಕಾಲಿಗೆ ಹೆಚ್ಚು ಪೆಟ್ಟಗಾಗಿದೆ. ಕೈಕಾಲಿಗೆ ತೊಂದರೆಯಾಗಿ ವಿಕಲಚೇತನರಾದರೆ ಅಂತಹ ವಿದ್ಯಾರ್ಥಿಗಳಿಗೆ ಸರ್ಕಾರಿ ಉದ್ಯೋಗ ಕಲ್ಪಿಸಬೇಕು ಎಂದು ಕರವೇ ಸ್ವಾಭಿಮಾನಿ ಸೇನೆ ತಾಲೂಕು ಅಧ್ಯಕ್ಷ ಸಮೀರ್ ಆಗ್ರಹಿಸಿದರು.

ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆ ವೃತ್ತ ನಿರೀಕ್ಷಕ ಆನಂದೇಗೌಡ ಮುಂದಿನ ತನಿಖೆ ಕೈಗೊಂಡಿದ್ದಾರೆ.

PREV

Recommended Stories

ಮಹಿಳೆಯರ ಮೇಲೆ ಮಚ್ಚು ಬೀಸಿದ ದುಷ್ಕರ್ಮಿಗಳು
ನಾಯಿ ರಕ್ಷಣೆಗೆ ರಸ್ತೆ ಬದಿ ನಿಂತಿದ್ದ ಯುವತಿ ಮೈಮುಟ್ಟಿ ಇಂಜಿನಿಯರ್‌ ದುರ್ವರ್ತನೆ : ಬಂಧನ