ಕನ್ನಡಪ್ರಭ ವಾರ್ತೆ, ತುರುವೇಕೆರೆ ಪೋಲಿಸರ ವಶದಲ್ಲಿದ್ದ ವ್ಯಕ್ತಿ ಮೃತಪಟ್ಟಿರುವ ಹಿನ್ನೆಲೆ ವ್ಯಕ್ತಿಯ ಸಾವಿಗೆ ಕಾರಣವಾದ ಪೋಲಿಸ್ ಸಬ್ ಇನ್ಸ್ ಪೆಕ್ಟರ್ ಮತ್ತು ಸಿಬ್ಬಂದಿಯನ್ನು ಕೂಡಲೇ ಅಮಾನತು ಮಾಡಬೇಕೆಂದು ಬಿಜೆಪಿಯ ಮಾಜಿ ಶಾಸಕ ಮಸಾಲಾ ಜಯರಾಮ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ತಮ್ಮ ಫಾರಂ ಹೌಸ್ ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು ತಾಲೂಕಿನ ಕೆ.ಮಾವಿನಹಳ್ಳಿಯ ಹೊರಾಂಗಣದಲ್ಲಿ ಇಸ್ಪೀಟ್ ಆಟದಲ್ಲಿ ಕೆಲವರು ತೊಡಗಿದ್ದಾರೆ ಎಂಬ ದೂರಿನನ್ವಯ ಪೋಲಿಸರು ದಾಳಿ ಮಾಡಿದ್ದರು. ಆ ಸಂದರ್ಭದಲ್ಲಿ ಪೋಲಿಸರು ಮಾಡಿದ ದೌರ್ಜನ್ಯದಿಂದ ಕೆ.ಮಾವಿನಹಳ್ಳಿ ಗ್ರಾಮದ ಕುಮಾರಾಚಾರ್ ಮರಣ ಹೊಂದಿದ್ದರು ಎನ್ನಲಾಗಿದೆ. ಆದರೆ, ಪೋಲಿಸರು ಇದೊಂದು ಅಸ್ವಾಭಾವಿಕ ಸಾವೆಂದು ಪ್ರಕರಣ ದಾಖಲಿಸಿದ್ದಾರೆ. ಇದು ಖಂಡನೀಯ. ಪೋಲಿಸರು ಹಲ್ಲೆಗೆ ಒಳಗಾಗಿದ್ದವರಲ್ಲಿ ಕುಮಾರಾಚಾರ್ ಸಹ ಒಬ್ಬರು. ದ್ವಿಚಕ್ರ ವಾಹನದಲ್ಲಿ ಪೋಲಿಸರು ಆರೋಪಿಗಳನ್ನು ಕರೆ ತರುವ ವೇಳೆ ತೀವ್ರವಾಗಿ ಹಲ್ಲೆಗೊಳಗಾಗಿದ್ದ ಕುಮಾರಾಚಾರ್ ದಾರಿ ಮಧ್ಯೆಯೇ ಅಸುನೀಗಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ನೆಪ ಮಾತ್ರಕ್ಕೆ ಅವರಿಗೆ ಚಿಕಿತ್ಸೆ ಕೊಡಿಸುವ ನಾಟಕ ಮಾಡಿದ್ದಾರೆ. ಆದರೆ, ಆ ವೇಳೆಗಾಗಲೇ ಕುಮಾರಾ ಚಾರ್ ನಿಧನರಾಗಿದ್ದರು. ಸಬ್ ಇನ್ಸ್ ಪೆಕ್ಟರ್, ಸಹಾಯಕ ಸಬ್ ಇನ್ಸ್ ಪೆಕ್ಟರ್ ಮತ್ತು ಮೂವರು ಸಿಬ್ಬಂದಿ ಕಾರಣರಾಗಿದ್ದಾರೆ ಎಂದು ಮಸಾಲಾ ಜಯರಾಮ್ ಆರೋಪಿಸಿದರು. ಒತ್ತಾಯ: ವಿಶ್ವಕರ್ಮ ಸಮುದಾಯಕ್ಕೆ ಸೇರಿದ ಅಮಾಯಕ ಕುಮಾರಾಚಾರ್ ರವರ ಸಾವಿನಿಂದಾಗಿ ಅವರ ಕುಟುಂಬ ಬೀದಿಗೆ ಬಿದ್ದಿದೆ. ವಾರಸುದಾರರೇ ಇಲ್ಲದಾಗಿದ್ದಾರೆ. ಪತ್ನಿ, ಮಕ್ಕಳು ಅನಾಥರಾಗಿದ್ದಾರೆ. ಕುಮಾರಾಚಾರ್ ರವರ ಸಾವಿಗೆ ಕಾರಣರಾಗಿರುವ ಪೋಲಿಸರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಅವರೆಲ್ಲರನ್ನೂ ಬಂಧಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆ: ಕುಮಾರಾಚಾರ್ ಸಾವಿಗೆ ಕಾರಣರಾಗಿರುವ ಎಲ್ಲಾ ಪೋಲಿಸ್ ಅಧಿಕಾರಿ, ಸಿಬ್ಬಂದಿ ಅಮಾನತು ಮಾಡದಿದ್ದಲ್ಲಿ ಸೋಮವಾರ ಕುಮಾರಾಚಾರ್ ರವರ ಕುಟುಂಬ ಮತ್ತು ಬಿಜೆಪಿಯ ಜಿಲ್ಲಾ ಮುಖಂಡರು ಮತ್ತು ತಾಲೂಕಿನ ಬಿಜೆಪಿ ಕಾರ್ಯಕರ್ತರೊಂದಿಗೆ ಸರ್ಕಲ್ ಇನ್ಸ್ ಪೆಕ್ಟರ್ ಕಛೇರಿಯ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿಯೂ ಎಚ್ಚರಿಕೆ ನೀಡಿದರು. ಪರಿಹಾರ: ಪೋಲಿಸರ ದೌರ್ಜನ್ಯದಿಂದ ಮೃತಪಟ್ಟಿರುವ ಕುಮಾರಾಚಾರ್ ರವರ ಕುಟುಂಬಕ್ಕೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು. ಸಾವಿಗೆ ಕಾರಣರಾಗಿರುವವರ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಸೂಕ್ತ ಪರಿಹಾರವನ್ನೂ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಕೊಂಡಜ್ಜಿ ವಿಶ್ವನಾಥ್, ವಿ.ಬಿ.ಸುರೇಶ್, ಹರಿಕಾನಹಳ್ಳಿ ಸಿದ್ದಪ್ಪಾಜಿ, ಚಿದಾನಂದ್, ಕುಮಾರಾಚಾರ್ ರವರ ಕುಟುಂಬದ ಸದಸ್ಯರು ಹಾಜರಿದ್ದರು. ಫೋಟೊ..... ೧ ಟಿವಿಕೆ ೩ - ತುರುವೇಕೆರೆಯಲ್ಲಿ ಮಾಜಿ ಶಾಸಕ ಮಸಾಲಾ ಜಯರಾಮ್ ಪತ್ರಿಕಾಗೋಷ್ಠಿ ನಡೆಸಿದರು.