ಲಾರಿ, ಖಾಸಗಿ ಬಸ್‌ ಮುಖಾಮುಖಿ ಡಿಕ್ಕಿ : ಚಾಲಕ, ಕ್ಲಿನರ್‌ ಸ್ಥಳದಲ್ಲೇ ಸಾವು

KannadaprabhaNewsNetwork |  
Published : Oct 11, 2025, 12:02 AM IST
51 | Kannada Prabha

ಸಾರಾಂಶ

ಸಿಮೆಂಟ್ ತುಂಬಿದ್ದ ಲಾರಿ ಮತ್ತು ಖಾಸಗಿ ಬಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಬಸ್ ಚಾಲಕ, ಕ್ಲಿನರ್ ಸ್ಥಳದಲ್ಲೇ ಮೃತಪಟ್ಟಿದ್ದು, ಬಸ್‌ ನಲ್ಲಿದ್ದ 13ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯ ಜಡಗನಕೊಪ್ಪಲು ಬಳಿ ಶುಕ್ರವಾರ ಮುಂಜಾನೆ ನಡೆದಿದೆ.

 ಹುಣಸೂರು :  ಸಿಮೆಂಟ್ ತುಂಬಿದ್ದ ಲಾರಿ ಮತ್ತು ಖಾಸಗಿ ಬಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಬಸ್ ಚಾಲಕ, ಕ್ಲಿನರ್ ಸ್ಥಳದಲ್ಲೇ ಮೃತಪಟ್ಟಿದ್ದು, ಬಸ್‌ ನಲ್ಲಿದ್ದ 13ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ಹುಣಸೂರು-ಮೈಸೂರು ಹೆದ್ದಾರಿಯ ಜಡಗನಕೊಪ್ಪಲು ಬಳಿ ಶುಕ್ರವಾರ ಮುಂಜಾನೆ ನಡೆದಿದೆ.

ಕೇರಳದ ವಯನಾಡು ಜಿಲ್ಲೆಯ ಮಾನಂದವಾಡಿ ತಾಲೂಕು ಪಾಲಮೊಕ್ಕಂನ ಶಂಷುದ್ದೀನ್ (38), ಕ್ಯಾಲಿಕ್ಯಾಟ್ ಜಿಲ್ಲೆಯ ಕಾರನಕೂರು ಗ್ರಾಮದ ಕ್ಲಿನರ್ ಪ್ರಿಯೇಶ್ (49) ಮೃತಪಟ್ಟವರು. ಬಸ್‌ ನಲ್ಲಿದ್ದ 13ಕ್ಕೂ ಹೆಚ್ಚು ಮಂದಿಗೆ ಗಾಯವಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದರೆ. ಲಾರಿ ಚಾಲಕನಿಗೆ ಕಾಲು ಮುರಿದಿದೆ.

ಕೇರಳದ ಕೋಜಿಕೋಡ್‌ ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಕೋಚ್ ಬಸ್ ಹಾಗೂ ಬೆಂಗಳೂರಿನಿಂದ ಹುಣಸೂರಿಗೆ ಎಸಿಸಿ ಸಿಮೆಂಟ್ ತುಂಬಿಕೊಂಡು ಬರುತ್ತಿದ್ದ 16 ಚಕ್ರದ ಲಾರಿ ರಾಷ್ಟ್ರೀಯ ಹೆದ್ದಾರಿಯ ತಾಲೂಕಿನ ಜಡಗನಕೊಪ್ಪಲು ಗೇಟ್ ಬಳಿ ಶುಕ್ರವಾರ ಮುಂಜಾನೆ ಸುಮಾರು 3.30ರ ವೇಳೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಬಸ್ ಚಾಲಕ, ಕ್ಲಿನರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಲಾರಿ ಹೆದ್ದಾರಿಗೆ ಮಗುಚಿ ಬಿದ್ದು ಸಿಮೆಂಟ್‌ ಮೂಟೆಗಳು ಚೆಲ್ಲಾಪಿಲ್ಲಿಯಾಗಿತ್ತು. ಹಿಂದೆ ಬರುತ್ತಿದ್ದ ವಾಹನಗಳವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದು ಗಾಯಾಳುಗಳನ್ನು ಖಾಸಗಿ ವಾಹನಗಳ ಮೂಲಕ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗುರುವಾರ ರಾತ್ರಿಯಿಂದ ಬೆಳಗಿನವರೆಗೆ ಸತತ ಮಳೆ ಸುರಿದ ಪರಿಣಾಮ ರಸ್ತೆ ಬದಿ ಮರ ಹೆದ್ದಾರಿಗೆ ಉರುಳಿತ್ತು. ಬಸ್ ಮರಕ್ಕೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬಲಕ್ಕೆ ತಿರುಗಿ ಲಾರಿಗೆ ಡಿಕ್ಕಿ ಹೊಡೆದಿರಬಹುದೆಂದು ಶಂಕಿಸಲಾಗಿದೆ. ಹೆದ್ದಾರಿಗೆ ಅಡ್ಡಲಾಗಿ ಮಗುಚಿಕೊಂಡಿದ್ದ ಲಾರಿ ಹಾಗೂ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾದ ಬಸ್ ಹೆದ್ದಾರಿಯಲ್ಲೇ ಇದ್ದರಿಂದ ಹುಣಸೂರು-ಮೈಸೂರು ನಡುವೆ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು, ಎರಡೂ ಕಡೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಪಘಾತವಾದ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಜಮಾಯಿಸಿದ್ದ ಜನರು ಬಹುತೇಕ ಸಿಮೆಂಟ್ ಮೂಟೆಗಳನ್ನು ಹೊತ್ತೊಯ್ದಿದ್ದಾರೆ ಎನ್ನಲಾಗಿದೆ.

ಎಎಸ್‌ಪಿ ನಾಗೇಶ್, ಇನ್ಸ್‌ಫೆಕ್ಟರ್ ಮುನಿಯಪ್ಪ, ಬಿಳಿಕೆರೆ ಎಸ್.ಐ. ಲಕ್ಷ್ಮಿ ಹಾಗೂ ಪೊಲೀಸರು ಸ್ಥಳಕ್ಕೆ ಕ್ರೇನ್ ಹಾಗೂ ಜೆಸಿಬಿ ತರಿಸಿ ಬೆಳಗ್ಗೆ 9ರ ವೇಳೆಗೆ ಕ್ರೇನ್‌ ನಿಂದ ಎರಡು ವಾಹನಗಳನ್ನು ಪಕ್ಕಕ್ಕೆ ಸರಿಸಿದ ನಂತರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸ್ಥಳದಲ್ಲಿ ಜಮಾಯಿಸಿದ್ದ ನೂರಾರು ಮಂದಿ ಜನರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡಿದರು. ಬಿಳಿಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಬೇಲ್‌ಗಾಗಿ ಮತ್ತೆ ಹೈಕೋರ್ಟ್‌ಗೆ ಬೈರತಿ
ಕರ್ತವ್ಯ ಲೋಪ, ಭ್ರಷ್ಟಾಚಾರದ ಆರೋಪ; ವಿಚಾರಣೆಗೆ ಅಧಿಕಾರಿಗಳ ನೇಮಕ