ಬೆಂಗಳೂರು : ಕಳೆದ ಒಂದು ವರ್ಷದ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ, ಸುಳ್ಳು ಸುದ್ದಿ ಹಾಗೂ ಪ್ರಚೋದನಕಾರಿ ಬರಹ ಪ್ರಕಟಿಸಿದ ಸಂಬಂಧ 37 ಪ್ರಕರಣಗಳನ್ನು ದಾಖಲಿಸಿ 18 ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು, ನಗರದ ಎಲ್ಲಾ ಠಾಣೆಗಳಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣಾ ಘಟಕಗಳ (ಐಒಒಎ) ಸಭೆ ನಡೆಸಿ ಗುರುವಾರ ಮಾಹಿತಿ ಪಡೆದರು.
ಸಾಮಾಜಿಕ ಜಾಲತಾಣಗಳಲ್ಲಿ ಕೋಮು ದ್ವೇಷ, ಸುಳ್ಳು ಸುದ್ದಿ, ಅವಹೇಳನಕಾರಿ. ಪ್ರಚೋದನಾಕಾರಿ ಪೋಸ್ಟ್‌ಗಳನ್ನು ಬಿತ್ತರಿಸಿ ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುವ ವ್ಯಕ್ತಿಗಳ ಮೇಲೆ ನಿಗಾವಹಿಸಲಾಗಿದೆ. ಈ ರೀತಿ ಕಣ್ಗಾವಲು ವೇಳೆ ಕೆಲವು ಪ್ರಚೋದನಕಾರಿ ಪೋಸ್ಟ್‌ಗಳು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕಳೆದೊಂದು ವರ್ಷದಲ್ಲಿ ಒಟ್ಟು 37 ಪ್ರಕರಣಗಳನ್ನು ದಾಖಲಿಸಲಾಗಿದ್ದು, 18 ಆರೋಪಿಗಳನ್ನು ಬಂಧಿಸಲಾಗಿದೆ. ಅಲ್ಲದೆ ಈ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಾಮಾಜಿಕ ಮಾಧ್ಯಮಗಳಲ್ಲಿನ 41 ಖಾತೆಗಳು ಹಾಗೂ ಆರೋಪಿತರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ 19 ಪೋಸ್ಟ್‌ಗಳನ್ನು ತೆಗೆದು ಹಾಕಿಲಾಗಿದೆ. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಬೇಕು ಹಾಗೂ ಈ ರೀತಿಯ ಪೋಸ್ಟ್‌ಗಳಿಗೆ ಕಮೆಂಟ್ ಮಾಡುವುದಾಗಲಿ ಅಥವಾ ಆ ಮಾಹಿತಿಯನ್ನು ಹಂಚಿಕೊಳ್ಳುವ ಮುನ್ನ ಸತ್ಯಾಸತ್ಯತೆ ಪರಿಶೀಲಿಸಬೇಕು. ಇಲ್ಲದೆ ಹೋದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸಾರ್ವಜನಿಕರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.