ಬೆಂಗಳೂರು ದಕ್ಷಿಣ : ಮೂರು ಮಕ್ಕಳ ತಾಯಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಪರಾರಿಯಾದ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಈ ಬಗ್ಗೆ ಪ್ರಕರಣ ದಾಖಲಾದ ನಂತರ ಪೊಲೀಸ್ ಠಾಣೆಗೆ ಪ್ರಿಯಕರನ ಜತೆ ಬಂದ ಮಹಿಳೆ ಲೀಲಾವತಿ ನನಗೆ ಗಂಡ, ಮಕ್ಕಳು ಬೇಡ. ಪ್ರಿಯಕರನೇ ಬೇಕು ಎಂದು ಅವನೊಂದಿಗೆ ಹೊರಟುಹೋದ ಅಚ್ಚರಿಯ ಘಟನೆಯೂ ಬಂದಿದೆ. 11 ವರ್ಷಗಳ ಹಿಂದೆ ಮಂಜುನಾಥ್ ಎಂಬುವರೊಂದಿಗೆ ಪ್ರೀತಿಸಿ ಮದುವೆಯಾಗಿದ್ದ ಆಕೆ ಬನ್ನೇರುಘಟ್ಟ ಮುಖ್ಯ ರಸ್ತೆಯ ಬಸವನಪುರದಲ್ಲಿ ವಾಸವಿದ್ದರು. ದಂಪತಿಗೆ 11 ಮತ್ತು 6 ವರ್ಷದ ಇಬ್ಬರು ಗಂಡು ಹಾಗೂ 8 ವರ್ಷದ ಮಗಳು ಇದ್ದಾರೆ.
ವೃತ್ತಿಯಲ್ಲಿ ಕಾರು ಚಾಲಕನಾಗಿರುವ ಪತಿ ಮಂಜುನಾಥ್ ಪತ್ನಿಗಾಗಿ ಹಾಗೂ ಮಕ್ಕಳು ತಾಯಿಗಾಗಿ ಕಣ್ಣೀರು ಹಾಕಿದ ಘಟನೆಯೂ ನಡೆದಿದೆ.ಪತಿ ಮಂಜುನಾಥ್ ಗೆ ಪತ್ನಿ ಮತ್ತೊಬ್ಬನ ಜೊತೆ ಇರುವ ಪೋಟೋ ಸಿಕ್ಕಿತ್ತು. ಬಳಿಕ ಆಕೆಯ ನಡವಳಿಕೆಯಿಂದ ಮತ್ತಷ್ಟು ಅನುಮಾನಗೊಂಡಿದ್ದ ಆತ ಆಗಸ್ಟ್ 31ರ ಭಾನುವಾರ ರಾತ್ರಿ ಡ್ರೈವಿಂಗ್ ಕೆಲಸದ ಮೇಲೆ ಹೊರಹೋಗುವ ನಾಟಕವಾಡಿ ಮನೆಯ ಸಮೀಪ ಕಾರಿನಲ್ಲೆ ಉಳಿದಿದ್ದ.
ಪತ್ನಿ ಲೀಲಾವತಿ ಕರೆ ಮಾಡಿ ಎಲ್ಲಿದ್ದೀಯ ಅಂತ ಗಂಡನನ್ನು ವಿಚಾರಿಸಿದಾಗ ಎಚ್.ಎ.ಎಲ್. ಬಳಿ ಬಾಡಿಗೆಗೆ ಹೋಗಿದ್ದೇನೆ ಎಂದು ಸುಳ್ಳು ಹೇಳಿದ್ದ. ಪತಿ ಬರುವುದು ತಡವಾಗುತ್ತದೆ ಎಂದು ಭಾವಿಸಿದ ಆಕೆ ಪ್ರಿಯಕರ ಸಂತೋಷ್ ನನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಆದರೆ ದಿಢೀರ್ ಮನೆಗೆ ಬಂದ ಮಂಜುನಾಥ್ ಪತ್ನಿಯ ಚೆಲ್ಲಾಟ ಕಂಡು ಸಿಟ್ಟಿಗೆದ್ದ. ಮೂವರ ನಡುವೆ ಮನೆಯಲ್ಲಿಯೇ ಗಲಾಟೆ ನಡೆದಿದೆ. ಈ ವೇಳೆ ಲೀಲಾವತಿ ಕಟ್ಟಿದ್ದ ತಾಳಿಯನ್ನು ಕಿತ್ತು ಪತಿ ಮಂಜುನಾಥ್ ಕೈಗೆ ಕೊಟ್ಟು ಸಂತೋಷ್ ಜೊತೆ ಹೊರಟು ಹೋಗಿದ್ದಾಳೆ.
ಈ ಕುರಿತು ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಪ್ರಿಯಕರನ ಸಂಗಡ ನೇರವಾಗಿ ಠಾಣೆಗೆ ಆಗಮಿಸಿದ ಲೀಲಾವತಿ ನನಗೆ ಗಂಡ, ಮಕ್ಕಳು ಬೇಡ ಎಂದು ಪ್ರಿಯಕರ ಸಂತೋಷನೊಂದಿಗೆ ತೆರಳಿದ್ದಾಳೆ.
ಪೊಲೀಸರು ಕುಟುಂಬ ನ್ಯಾಯಾಲಯದಲ್ಲಿ ವ್ಯಾಜ್ಯ ಬಗೆಹರಿಸುಕೊಳ್ಳುವಂತೆ ಈ ಪ್ರಕರಣವನ್ನು ಇತ್ಯರ್ಥಗೊಳಿಸಿದ್ದಾರೆ.