ಬಾಯಲ್ಲಿ ಜಿಲೆಟಿನ್‌ ಬಾಂಬ್‌ ಸ್ಫೋಟಿಸಿ ಪ್ರಿಯತಮೆ ಹತ್ಯೆ

KannadaprabhaNewsNetwork |  
Published : Aug 26, 2025, 01:04 AM ISTUpdated : Aug 26, 2025, 05:56 AM IST
ಕೊಲೆ | Kannada Prabha

ಸಾರಾಂಶ

ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯ ಬಾಯಲ್ಲಿ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಆಕೆಯನ್ನು ಭೀಕರವಾಗಿ ಹತ್ಯೆಗೈದ ಆಘಾಥಕಾರಿ ಘಟನೆಯೊಂದು ಮೈಸೂರು ಬಳಿ ನಡೆದಿದೆ. ಮೊದಲಿಗೆ ಇದು ಮೊಬೈಲ್‌ ಸ್ಫೋಟದಿಂದ ಆದದ್ದು ಎಂದು ಕಥೆಕಟ್ಟಲು ಯತ್ನಿಸಿದ್ದ ಆರೋಪಿ ಅದರಲ್ಲಿ ವಿಫಲನಾಗಿ ಸಿಕ್ಕಿಬಿದ್ದಿದ್ದಾನೆ.

 ಮೈಸೂರು/ಕೆ.ಆರ್‌.ನಗರ :  ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯ ಬಾಯಲ್ಲಿ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಆಕೆಯನ್ನು ಭೀಕರವಾಗಿ ಹತ್ಯೆಗೈದ ಆಘಾಥಕಾರಿ ಘಟನೆಯೊಂದು ಮೈಸೂರು ಬಳಿ ನಡೆದಿದೆ. ಮೊದಲಿಗೆ ಇದು ಮೊಬೈಲ್‌ ಸ್ಫೋಟದಿಂದ ಆದದ್ದು ಎಂದು ಕಥೆಕಟ್ಟಲು ಯತ್ನಿಸಿದ್ದ ಆರೋಪಿ ಅದರಲ್ಲಿ ವಿಫಲನಾಗಿ ಸಿಕ್ಕಿಬಿದ್ದಿದ್ದಾನೆ.

ಮೈಸೂರು ಜಿಲ್ಲೆ ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಮದಲ್ಲಿರುವ ಲಾಡ್ಜ್‌ನಲ್ಲಿ ಗೆರಸನಹಳ್ಳಿ ಗ್ರಾಮದ ದರ್ಶಿತ (20) ಎಂಬಾಕೆಯನ್ನು ಪ್ರಿಯಕರ ಬಿಳಿಕೆರೆ ಗ್ರಾಮದ ಸಿದ್ಧರಾಜು (30) ಎಂಬಾತ ಈ ರೀತಿ ಭೀಕರವಾಗಿ ಹತ್ಯೆ ಮಾಡಿದ್ದಾನೆ.

ಗೆರಸನಹಳ್ಳಿ ಗ್ರಾಮದ ದರ್ಶಿತ, ಕೇರಳ ಮೂಲದ ವ್ಯಕ್ತಿಯನ್ನು ವಿವಾಹವಾಗಿದ್ದು, ಈಕೆಗೆ ಎರಡು ವರ್ಷದ ಮಗಳಿದ್ದಾಳೆ. ಆಕೆಯ ಗಂಡ ದುಬೈನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ, ಸಿದ್ಧರಾಜು ಜೊತೆಗೆ ಆಕೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ಈ ಮಧ್ಯೆ, ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಎಂಬುದಾಗಿ ಸಿದ್ದರಾಜು ಆಕೆಯನ್ನು ಕರೆ ತಂದಿದ್ದ. ಭೇರ್ಯ ಗ್ರಾಮದ ಲಾಡ್ಜ್‌ಗೆ ಕರೆದುಕೊಂಡು ಹೋಗಿದ್ದ. ಈ ಮಧ್ಯೆ, ಯಾವುದೋ ವಿಚಾರವಾಗಿ ಇವರಿಬ್ಬರ ನಡುವೆ ಜಗಳವಾಗಿದೆ. ಈ ವೇಳೆ, ಆಕೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇರಿಸಿ, ಸ್ಪೋಟಿಸಿ ಹತ್ಯೆಗೈದಿದ್ದಾನೆ. ಬಳಿಕ, ಮೊಬೈಲ್ ಬ್ಲಾಸ್ಟ್ ಅಂತ ಕೂಗಾಡಿದ್ದಾನೆ. ಆದರೆ, ಸ್ಥಳದಲ್ಲಿ ಯಾವುದೇ ಮೊಬೈಲ್ ಕಂಡು ಬರದ ಕಾರಣ ಲಾಡ್ಜ್‌ನವರಿಗೆ ಅನುಮಾನ ಬಂದಿದೆ.

ಮೊಬೈಲ್ ಎಲ್ಲಿ ಎಂದು ಕೇಳಿದಾಗ ಬಿಸಾಕಿದ್ದಾಗಿ ಸಿದ್ಧರಾಜು ಸುಳ್ಳು ಹೇಳಿದ್ದ. ನಂತರ, ಸ್ಥಳದಿಂದ ಪರಾರಿಯಾಗಲು ಯತ್ನಿಸಿದಾಗ ಲಾಡ್ಜ್ ಸಿಬ್ಬಂದಿ ಆತನನ್ನು ಹಿಡಿದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಬಂದು ಪರಿಶೀಲಿಸಿ, ಸಿದ್ದರಾಜುವಿನ ವಿಚಾರಣೆ ನಡೆಸಿದಾಗ ಆಕೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇರಿಸಿ ಸ್ಪೋಟಿಸಿದ ವಿಚಾರ ಬಾಯಿ ಬಿಟ್ಟಿದ್ದಾನೆ.

ಈ ಮಧ್ಯೆ, ದರ್ಶಿತಳ ಗಂಡನ ಮನೆಯಲ್ಲಿ 30 ಪವನ್ ಚಿನ್ನ ಮತ್ತು ನಾಲ್ಕು ಲಕ್ಷ ರೂಪಾಯಿ ಕಳುವಾಗಿದೆ. ಕಳ್ಳತನವಾದ ದಿನವೇ ದರ್ಶಿತ ಮನೆಗೆ ಬೀಗ ಹಾಕಿ, ಇಲ್ಲಿಗೆ ಬಂದಿದ್ದಳು. ಚಿನ್ನ ಮತ್ತು ಹಣ ಕಳ್ಳತನದ ಹಿಂದೆ ಇವರಿಬ್ಬರ ಕೈವಾಡ ಇರುವ ಶಂಕೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ದುಬೈನಲ್ಲಿರುವ ಕೇರಳ ಮೂಲದ ವ್ಯಕ್ತಿ ವಿವಾಹವಾಗಿದ್ದ ಗೆರಸನಹಳ್ಳಿ ಗ್ರಾಮದ ದರ್ಶಿತ ಎಂಬ ಯುವತಿ

ಈ ನಡುವೆ ದರ್ಶಿತಗೆ ಸಿದ್ದರಾಜು ಎಂಬಾತನ ಜತೆ ಸ್ನೇಹ ಬೆಳೆದು ಅದು ಅಕ್ರಮ ಸಂಬಂಧಕ್ಕೆ ತಿರುಗಿತ್ತು

ಎರಡು ದಿನದ ಹಿಂದೆ ಇಬ್ಬರು ಭೇರ್ಯ ಗ್ರಾಮದ ಲಾಡ್ಜ್‌ಗೆ ಆಗಮಿಸಿದ್ದ ವೇಳೆ ಅಲ್ಲಿ ಸ್ಫೋಟ ನಡೆದಿತ್ತು

ಈ ವೇಳೆ ಮೊಬೈಲ್‌ ಸ್ಫೋಟದಿಂದ ದರ್ಶಿತ ಸಾವು ಎಂದಿದ್ದ ಸಿದ್ದರಾಜು. ತನಿಖೆ ವೇಳೆ ಹತ್ಯೆ ಪ್ರಕರಣ ಪತ್ತೆ

PREV
Read more Articles on

Recommended Stories

ಮೆಟ್ರೋ ಕರ್ತವ್ಯ ವೇಳೆ ಮೃತಪಟ್ಟ ಸೆಕ್ಯೂರಿಟಿ ಗಾರ್ಡ್‌ಗೆ 5.8 ಲಕ್ಷ ಪರಿಹಾರ ನೀಡಿ: ಹೈಕೋರ್ಟ್ ನಿರ್ದೇಶನ
ಗಣೇಶೋತ್ಸವ ವೇಳೆ ಡಿಜೆ ಬಳಸಿದರೆ ಕ್ರಮ ಕೈಗೊಳ್ಳಿ: ಸೀಮಂತ್ ಕುಮಾರ್ ಸಿಂಗ್‌ ಆದೇಶ