ಬಿಬಿಎಂಪಿ ಕಸದ ಲಾರಿಯಲ್ಲಿ ಮಹಿಳೆ ಮೃತದೇಹ ಪತ್ತೆ ಕೇಸ್‌ : ಕುಡಿದು ಮಾಡುತ್ತಿದ್ದ ಗಲಾಟೆಯಿಂದ ಹತ್ಯೆ

KannadaprabhaNewsNetwork | Published : Jul 1, 2025 1:47 AMUpdated   : Jul 01 2025, 09:15 AM IST
garbage

ಸಾರಾಂಶ

ಬಿಬಿಎಂಪಿ ಕಸದ ಲಾರಿಯಲ್ಲಿ ಶವವಾಗಿ ಸಿಕ್ಕ ಪುಷ್ಪಾ ಅಲಿಯಾಸ್ ಆಶಾ ಮತ್ತು ಕೊಲೆ ಆರೋಪಿ ಶಂಸುದ್ದೀನ್‌ ನಡುವೆ ಶನಿವಾರ ಜೋರು ಗಲಾಟೆಯಾಗಿ ಪರಸ್ಪರ ಕೈಕೈ ಮಿಲಾಯಿಸಿದ್ದರು.

 ಬೆಂಗಳೂರು :  ಬಿಬಿಎಂಪಿ ಕಸದ ಲಾರಿಯಲ್ಲಿ ಶವವಾಗಿ ಸಿಕ್ಕ ಪುಷ್ಪಾ ಅಲಿಯಾಸ್ ಆಶಾ ಮತ್ತು ಕೊಲೆ ಆರೋಪಿ ಶಂಸುದ್ದೀನ್‌ ನಡುವೆ ಶನಿವಾರ ಜೋರು ಗಲಾಟೆಯಾಗಿ ಪರಸ್ಪರ ಕೈಕೈ ಮಿಲಾಯಿಸಿದ್ದು, ಜಗಳ ವಿಕೋಪಕ್ಕೆ ತಿರುಗಿದಾಗ ಪುಷ್ಪಾಳನ್ನು ಹೊಡೆದು ಕೆಳಗೆ ಬೀಳಿಸಿದ ಶಂಸುದ್ದೀನ್‌, ಆಕೆಯ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಮೂಟೆಕಟ್ಟಿ ದ್ವಿಚಕ್ರ ವಾಹನದಲ್ಲಿ ತಂದು ಬಿಬಿಎಂಪಿ ಕಸ ವಿಲೇವಾರಿ ಲಾರಿಯೊಳಗೆ ಎಸೆದು ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿರುವ ಬಂಧಿತ ಶಂಸುದ್ದೀನ್‌ ಅಸ್ಸಾಂ ಮೂಲದವನಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಸ್ವಚ್ಛತಾ ವಿಭಾಗದಲ್ಲಿ ಆತ ಕೆಲಸ ಮಾಡುವಾಗ ಪುಷ್ಪಾ ಪರಿಚಯವಾಗಿತ್ತು. ಆಕೆ ಸಹ ಹೌಸ್‌ ಕಿಂಪಿಂಗ್ ಕೆಲಸ ಮಾಡುತ್ತಿದ್ದಳು. ಪತಿ ನಿಧನರಾದ ಬಳಿಕ ಸೋದರ ಸಂಬಂಧಿ ಮಗಳ ಜತೆ ಪುಷ್ಪಾ ವಾಸವಾಗಿದ್ದಳು. ತನ್ನ ಹೆಸರನ್ನು ಆಶಾ ಎಂದು ಹೇಳಿಕೊಳ್ಳುತ್ತಿದ್ದಳು. ಆದರೆ ದಾಖಲೆಗಳಲ್ಲಿ ಪುಷ್ಪಾ ಎಂದಿದೆ. ಈ ಇಬ್ಬರೂ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಮೂಡಿದ ಸ್ನೇಹ ಕಾಲ ಕ್ರಮೇಣ ಪ್ರೀತಿಗೆ ತಿರುಗಿದ್ದು, ಕಳೆದ ನಾಲ್ಕೈದು ತಿಂಗಳಿಂದ ಲಿವಿಂಗ್ ಟುಗೆದರ್‌ನಲ್ಲಿದ್ದರು. ವಿಚಾರಣೆ ವೇಳೆ ತಾನೇ ಪುಷ್ಪಾಳ ಕೊಲೆ ಮಾಡಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಂಪತಿ ಎಂದು ಬಾಡಿಗೆ ಮನೆ ವಾಸ:

ಶಂಸುದ್ದೀನ್‌ ವಿವಾಹಿತನಾಗಿದ್ದು, ಪತ್ನಿ ಮತ್ತು ಮಕ್ಕಳು ಅಸ್ಸಾಂನಲ್ಲಿ ನೆಲೆಸಿದ್ದಾರೆ. ಇಲ್ಲಿ ಶಂಸುದ್ದೀನ್‌ ಮತ್ತು ಪುಷ್ಪಾ ಗಂಡ-ಹೆಂಡತಿ ಎಂದು ಹೇಳಿಕೊಂಡು ಹುಳಿಮಾವು ಸಮೀಪದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ವಿಪರೀತ ಮದ್ಯ ವ್ಯಸನಿಯಾದ ಶಂಸುದ್ದೀನ್‌, ಪ್ರತಿದಿನ ಮನೆಗೆ ಕುಡಿದು ಹೋಗಿ ಗಲಾಟೆ ಮಾಡುತ್ತಿದ್ದ. ಈ ವರ್ತನೆಗೆ ಪುಷ್ಪಾ ಆಕ್ಷೇಪ ವ್ಯಕ್ತಪಡಿಸಿದ್ದಳು. ಇದೇ ವಿಚಾರಕ್ಕೆ ಇಬ್ಬರು ನಡುವೆ ಆಗಾಗ ಜಗಳವಾಗುತ್ತಿತ್ತು. ಅಂತೆಯೇ ಶನಿವಾರ (ಜೂ.28) ರಾತ್ರಿ ಸಹ ಮದ್ಯ ಸೇವಿಸಿ ಶಂಸುದ್ದೀನ್‌ ಮನೆಗೆ ಬಂದಿದ್ದು, ಪುಷ್ಪಾ ಜತೆ ಜಗಳವಾಗಿದೆ. ಕೊನೆಗೆ ಇಬ್ಬರು ಕೈ-ಕೈ ಮೀಲಾಯಿಸಿದ್ದು, ಆಕೆಯನ್ನು ಹೊಡೆದು ಕತ್ತು ಹಿಸುಕಿ ಕೊಲೆ ಮಾಡಿದ್ದ.

ಕಸದ ಲಾರಿಗೆ ತಂದು ಎಸೆದ:

ಈ ಹತ್ಯೆ ಬಳಿಕ ಆತಂಕಗೊಂಡಿದ್ದ ಶಂಸುದ್ದೀನ್‌, ಮೃತದೇಹವನ್ನು ಬಿಸಾಡಿದರೆ ತಾನು ಪಾರಾಗಬಹುದು ಎಂದು ಭಾವಿಸಿದ್ದ. ಅಲ್ಲದೆ ಆತ ಇಟ್ಟಮಡು ಹಾಗೂ ಸಿ.ಕೆ.ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ ಓಡಾಡಿದ್ದರಿಂದ ಅಲ್ಲಿ ಬಿಬಿಎಂಪಿ ಕಸದ ಲಾರಿಗಳು ನಿಲ್ಲುವುದು ಗೊತ್ತಿತ್ತು. ಹೀಗಾಗಿ ಹುಳಿಮಾವಿನಿಂದ ಬೈಕ್‌ನಲ್ಲಿ ಮೃತದೇಹ ತುಂಬಿದ್ದ ಚೀಲವನ್ನು ತಂದು ಸಿ.ಕೆ.ಅಚ್ಚುಕಟ್ಟು ಸಮೀಪದ ಸ್ಕೇಟಿಂಗ್‌ ಮೈದಾನದ ಬಳಿ ನಿಲುಗಡೆ ಮಾಡಿದ್ದ ಕಸದ ಲಾರಿಗೆ ಎಸೆದು ಪರಾರಿಯಾಗಿದ್ದ.

ಸಿಸಿಟಿವಿ ಸುಳಿವು: ಕೂಡಲೇ ಬಂಧನ

ಭಾನುವಾರ ಮುಂಜಾನೆ ಸುಮಾರು 1.30ಕ್ಕೆ ಕಸ ಎಸೆಯಲು ಬಂದಿದ್ದ ವ್ಯಕ್ತಿಯೊಬ್ಬರು ಲಾರಿಯಲ್ಲಿ ತಲೆಕೂದಲು ಕಾಣಿಸುವ ಮೂಟೆ ಗಮನಿಸಿದ್ದು, ಅನುಮಾನಗೊಂಡು ಆ ಮೂಟೆ ತೆರೆದು ನೋಡಿದಾಗ ಮಹಿಳೆಯ ಮೃತದೇಹ ಪತ್ತೆಯಾಗಿತ್ತು. ಬಳಿಕ ಆ ವ್ಯಕ್ತಿ ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ದೌಡಾಯಿಸಿದ್ದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ಘಟನಾ ಸ್ಥಳದ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ವೇಳೆ ವ್ಯಕ್ತಿಯೊಬ್ಬ ಮೂಟೆ ತಂದು ಬಿಬಿಎಂಪಿ ಕಸದ ಲಾರಿಗೆ ಎಸೆಯುವ ದೃಶ್ಯ ಪತ್ತೆಯಾಗಿತ್ತು. ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಸಿ.ಕೆ.ಅಚ್ಚುಕಟ್ಟು ಪೊಲೀಸ್‌ ಠಾಣೆಯ ಇನ್‌ಸ್ಪೇಕ್ಟರ್‌ ಗಿರೀಶ್ ನಾಯ್ಕ್‌ ಸಾರಥ್ಯದ ಸಬ್‌ ಇನ್ಸ್‌ಪೆಕ್ಟರ್‌ ಲೋಕೇಶ್ ತಂಡವು ತಾಂತ್ರಿಕ ಮಾಹಿತಿ ಆಧರಿಸಿ ಕೆಲವೇ ತಾಸುಗಳಲ್ಲಿ ಆರೋಪಿ ಶಂಸುದ್ದೀನ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

PREV
Read more Articles on