ಟವಲಿಂದ ಕುತ್ತಿಗೆ ಬಿಗಿದು ಮಂಗಳಮುಖಿಯ ಹತ್ಯೆ

KannadaprabhaNewsNetwork |  
Published : May 11, 2024, 01:30 AM ISTUpdated : May 11, 2024, 05:13 AM IST
Murder

ಸಾರಾಂಶ

ಇತ್ತೀಚೆಗೆ ಮನೆಯೊಂದರಲ್ಲಿ ತೃತೀಯ ಲಿಂಗಿ ಕೊಲೆ ಪ್ರಕರಣ ಸಂಬಂಧ ಮಹಿಳೆಯೊಬ್ಬರನ್ನು ಜೀವನಭೀಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

 ಬೆಂಗಳೂರು :  ಇತ್ತೀಚೆಗೆ ಮನೆಯೊಂದರಲ್ಲಿ ತೃತೀಯ ಲಿಂಗಿ ಕೊಲೆ ಪ್ರಕರಣ ಸಂಬಂಧ ಮಹಿಳೆಯೊಬ್ಬರನ್ನು ಜೀವನಭೀಮಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮುರುಗೇಶ್‌ಪಾಳ್ಯದ ಶ್ರೀರಾಮನಗರದ ಪ್ರೇಮಾ(51) ಬಂಧಿತ ಆರೋಪಿ. ಮೇ 3ರಂದು ಮಂಜ ನಾಯ್ಕ್‌(42) ಅಲಿಯಾಸ್‌ ಮಂಜಿ ಬಾಯ್‌ ಹೆಸರಿನ ತೃತೀಯ ಲಿಂಗಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕೃತ್ಯ ಎಸೆಗಿದ್ದ ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

ಆರೋಪಿ ಪ್ರೇಮಾಳ ಪತಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ 20 ವರ್ಷಗಳಿಂದ ಆಕೆ ತೃತೀಯ ಲಿಂಗಿ ಮಂಜಿ ಬಾಯ್‌ ಜತೆಗೆ ವಾಸಿಸುತ್ತಿದ್ದಳು. ಪ್ರೇಮಾ ಹೌಸ್‌ ಕೀಪಿಂಗ್‌ ಕೆಲಸ ಮಾಡಿದರೆ, ಮಂಜಿ ಬಾಯ್‌ ಖಾಸಗಿ ಕಂಪನಿಯ ಕ್ಯಾಂಟಿನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಏ.26ರಂದು ಮನೆಯಲ್ಲಿ ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಮಂಜಿ ಬಾಯ್‌ ಚಾಕುವಿನಿಂದ ಚುಚ್ಚಲು ಮುಂದಾಗಿದ್ದಾರೆ. ಈ ವೇಳೆ ಪ್ರೇಮಾ ಟವಲ್‌ ತೆಗೆದು ಮಂಜಿ ಬಾಯ್‌ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆಗೈದು ಪರಾರಿಯಾಗಿದ್ದಾಳೆ.ಮರಣೋತ್ತರ ಪರೀಕ್ಷೆಯಲ್ಲಿ ಕೊಲೆ ರಹಸ್ಯ ಬೆಳಕಿಗೆ:

ಮೇ 3ರಂದು ಮನೆಯಿಂದ ದುರ್ನಾತ ಬರುತ್ತಿದ್ದ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಮನೆಯವರು ಬಾಗಿಲು ಒಡೆದು ನೋಡಿದಾಗ ಕೊಳತೆ ಸ್ಥಿತಿಯಲ್ಲಿ ಮಂಜಿ ಬಾಯ್‌ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದ ಜೀವನಬಿಮಾನಗರ ಠಾಣೆ ಪೊಲೀಸರು ತನಿಖೆಗೆ ಇಳಿದಿದ್ದರು. ಈ ನಡುವೆ ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಮಂಜಿ ಬಾಯ್‌ ಕೊಲೆ ಮಾಡಿರುವುದು ಬಯಲಾಗಿತ್ತು.ಕೊಲೆಗೈದು ತವರು ಮನೆಗೆ ಪಲಾಯನ:

ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು, ಮಂಜಿ ಬಾಯ್ ಜತೆಗೆ ವಾಸಿಸುತ್ತಿದ್ದ ಪ್ರೇಮಾ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕೊಲೆ ಬಳಿಕ ಆಕೆಯ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ್ಣದ ಅಯ್ಯರಹಳ್ಳಿಯ ತಾಯಿಯ ಮನೆಯಲ್ಲಿ ತಲೆಮರೆಸಿಕೊಂಡಿರುವ ಬಗ್ಗೆ ಸಿಕ್ಕ ಸುಳಿವಿನ ಮೇರೆಗೆ ಅಲ್ಲಿಗೆ ತೆರಳಿ ಆಕೆಯನ್ನು ಬಂಧಿಸಲಾಗಿದೆ. ಬಳಿಕ ಠಾಣೆಗೆ ಕರೆತಂದು ವಿಚಾರಣೆ ಮಾಡಿದಾಗ ತಾನೇ ಕೊಲೆ ಮಾಡಿದ್ದಾಗಿ ಆಕೆ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

Recommended Stories

₹150 ಕೋಟಿ ದೋಚಿದ್ದ ಸೈಬರ್‌ ವಂಚಕ ದಾವಣಗೆರೆಯಲ್ಲಿ ಸೆರೆ
ನಿರ್ಮಾಣ ಹಂತದ ಕಟ್ಟಡದ 13ನೇ ಮಹಡಿಯಿಂದ ಬಿದ್ದು ಇಬ್ಬರ ಸಾವು