ಬೆಂಗಳೂರಲ್ಲೊಂದು ಮಹಾ ಸೈಬರ್‌ ಸುಲಿಗೆ : ರಾಜ್ಯದ ದೊಡ್ಡ ಡಿಜಿಟಲ್‌ ಅರೆಸ್ಟ್‌

Published : May 25, 2026, 09:12 AM IST
Karnataka Biggest Digital Arrest

ಸಾರಾಂಶ

ಸಿಬಿಐ, ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳ ಸೋಗಿನಲ್ಲಿ ವೃದ್ಧೆಯೊಬ್ಬರನ್ನು ಡಿಜಿಟಲ್‌ ಅರೆಸ್ಟ್ ಮಾಡಿದ್ದ ಸೈಬರ್ ವಂಚಕರು, ಬರೋಬ್ಬರಿ 24 ಕೋಟಿ ರು. ಹಣ ವರ್ಗಾವಣೆ ಮಾಡಿಸಿಕೊಂಡ ಘಟನೆ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ.

  ಬೆಂಗಳೂರು :  ಸಿಬಿಐ, ಜಾರಿ ನಿರ್ದೇಶನಾಲಯ(ಇ.ಡಿ.) ಅಧಿಕಾರಿಗಳ ಸೋಗಿನಲ್ಲಿ ವೃದ್ಧೆಯೊಬ್ಬರನ್ನು ಡಿಜಿಟಲ್‌ ಅರೆಸ್ಟ್ ಮಾಡಿದ್ದ ಸೈಬರ್ ವಂಚಕರು, ಬರೋಬ್ಬರಿ 24 ಕೋಟಿ ರು. ಹಣ ವರ್ಗಾವಣೆ ಮಾಡಿಸಿಕೊಂಡ ಘಟನೆ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ರಾಜ್ಯದಲ್ಲೇ ಅತಿ ದೊಡ್ಡ ಈ ಸೈಬರ್‌ ವಂಚನೆ(ವೈಯಕ್ತಿಕ) ಪ್ರಕರಣ ಇದಾಗಿದ್ದು, ಪೊಲೀಸರು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಸಂಬಂಧ ಹೊರ ರಾಜ್ಯದ ಆರು ಮಂದಿಯನ್ನು ಸೈಬರ್ ಕಮಾಂಡ್ ಸೆಂಟರ್‌ ಹಾಗೂ ಸಿಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. ತಮಿಳುನಾಡು ಮೂಲದ ಎನ್‌.ಶಿವಜ್ಞಾನಂ, ಮುಂಬೈನ ಅಕ್ಕಚ್‌ ಮಲ್ಲಿಕ್‌, ಅಹಮದಾಬಾದ್ ಮೂಲದ ಪಲಕ್‌ ಭಾಯಿ ಪಟೇಲ್, ಅಮಿತ್ ನರೇಂದ್ರ ಪಟೇಲ್, ದೆಹಲಿಯ ಓಂ ಪ್ರಕಾಶ್ ರಜಪೂತ್ ಮತ್ತು ಬಿಹಾರದ ಗೌರವ್ ಕುಮಾರ್ ಬಂಧಿತರು. ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ 6 ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ.

₹5.45 ಕೋಟಿ ಉಳಿಸಿದ ಪೊಲೀಸರು:

ಆರೋಪಿಗಳು ಶಿವಾಜಿನಗರ ನಿವಾಸಿ ಲಕ್ಷ್ಮೀ ರಾಮಮೂರ್ತಿ (74) ಎಂಬುವವರಿಗೆ ಫೆ.10 ರಿಂದ ಏ.24 ರವರೆಗೆ ಡಿಜಿಟಲ್‌ ಅರೆಸ್ಟ್‌ ಮಾಡಿ 24 ಕೋಟಿ ರು. ಸುಲಿಗೆ ಮಾಡಿದ್ದಾರೆ. ಸದ್ಯ ಬಂಧಿತ ಆರೋಪಿಗಳ ಖಾತೆಯಲ್ಲಿದ್ದ 4 ಕೋಟಿ ರು. ಫ್ರೀಜ್ ಮಾಡಿದ್ದು, ಕೋರ್ಟ್‌ ಆದೇಶ ಮೇರೆಗೆ 1.45 ಕೋಟಿ ಋೂ. ವಾಪಸ್ ಪಡೆಯಲಾಗಿದೆ. ಉಳಿದ ಹಣ ದೇಶ-ವಿದೇಶದ ಬೇರೆ ಬೇರೆ ಖಾತೆಗಳಿಗೆ ವರ್ಗಾವಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣದ ವಿವರ:

ಫೆ.10ರಂದು ವೃದ್ಧೆಗೆ ಸಿಬಿಐ ಮತ್ತು ಇ.ಡಿ. ಸೋಗಿನಲ್ಲಿ ಕರೆ ಮಾಡಿದ್ದ ವಂಚಕರು ನಿಮ್ಮ ಬ್ಯಾಂಕ್ ಖಾತೆಯನ್ನು ಮನಿ ಲ್ಯಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ಪ್ರಕರಣದಲ್ಲಿ ಬಳಸಲಾಗಿದೆ. ಉಗ್ರಗಾಮಿ ಚಟುವಟಿಕೆಗಳಿಗೆ ನಿಮ್ಮ ಹಣ ಬಳಸಲಾಗಿದೆ ಎಂದು ಹೇಳಿ ಬೆದರಿಸಿದ್ದಾರೆ. ನಂತರ ತಿಂಗಳುಗಟ್ಟಲೆ ಮಾನಸಿಕ ಒತ್ತಡ ಹಾಕಿರುವ ಸೈಬರ್ ವಂಚಕರು 10 ನಕಲಿ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 26 ಬಾರಿ ಆರ್‌ಟಿಜಿಎಸ್ ಮೂಲಕ 24 ಕೋಟಿ ರು. ವರ್ಗಾಯಿಸಿಕೊಂಡಿದ್ದಾರೆ.

ಒಂಟಿಯಾಗಿ ನೆಲೆಸಿದ್ದರು:

ವಂಚನೆಗೊಳಗಾದ ವೃದ್ಧೆ ಲಕ್ಷ್ಮೀ ರಾಮಮೂರ್ತಿ ಅಬುಧಾಬಿಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿ ನಿವೃತ್ತಿಯಾಗಿ ಬೆಂಗಳೂರಿಗೆ ಬಂದು ಶಿವಾಜಿನಗರದ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಒಂಟಿಯಾಗಿ ವಾಸವಾಗಿದ್ದಾರೆ. ಏರ್‌ಲೈನ್ಸ್‌ನಲ್ಲಿ ಲೆಕ್ಕ ಪರಿಶೋಧಕರಾಗಿದ್ದ ಪತಿ ನಿಧನರಾಗಿದ್ದಾರೆ. ಪತಿ-ಪತ್ನಿ ನಿವೃತ್ತಿ ಆದ ನಂತರ ಬಂದ ಹಣ ಹಾಗೂ ಬೆಂಗಳೂರು ಹಾಗೂ ಮುಂಬೈನಲ್ಲಿ ಇದ್ದ ಆಸ್ತಿಗಳನ್ನು ಮಾರಾಟ ಮಾಡಿದ್ದ ಹಣ ಅವರ ಖಾತೆಯಲ್ಲಿತ್ತು. ಇವರ ಇಬ್ಬರು ಗಂಡು ಮಕ್ಕಳು ಅಮೆರಿಕದಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾಗಿದ್ದು, ಅಲ್ಲಿನ ಗ್ರೀನ್‌ ಕಾರ್ಡ್‌ ಹೊಂದಿದ್ದಾರೆ. ಹೀಗಾಗಿ ಲಕ್ಷ್ಮೀ ರಾಮಮೂರ್ತಿ ಅವರು ಅಮೆರಿಕದಲ್ಲಿರುವ ಇಬ್ಬರು ಮಕ್ಕಳ ಜತೆ ನೆಲೆಸಲು ಸಿದ್ಧತೆ ನಡೆಸುತ್ತಿದ್ದರು ಎನ್ನಲಾಗಿದೆ.

ಅವರ ಬಳಿ ದೊಡ್ಡ ಪ್ರಮಾಣದ ಹಣ ಇರುವ ಮಾಹಿತಿ ಸಂಗ್ರಹಿಸಿದ್ದ ಸೈಬರ್ ವಂಚಕರು, ಸಿಬಿಐ ಮತ್ತು ಇ.ಡಿ. ಅಧಿಕಾರಿಗಳ ಸೋಗಿನಲ್ಲಿ ವಿಡಿಯೋ ಕರೆ ಮಾಡಿ ಬೆದರಿಸಿದ್ದಾರೆ.

ಸಯಮ ಪ್ರಜ್ಞೆ ಮೆರೆದ ಬ್ಯಾಂಕ್‌ನವರು:

‘ನಿಮ್ಮನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಯಾರ ಜತೆಯೂ ಮಾತನಾಡಬಾರದು. ಖಾತೆಯಲ್ಲಿರುವ ಹಣವನ್ನು ಪರಿಶೀಲನೆಗಾಗಿ ಸರ್ಕಾರದ ಖಾತೆಗೆ ವರ್ಗಾವಣೆ ಮಾಡಬೇಕು’ ಎಂದು ಆರೋಪಿಗಳು ಬೆದರಿಸಿದ್ದಾರೆ. ಹೀಗೆ ಬೆದರಿಕೆ ಹಾಕಿ ಎರಡೂವರೆ ತಿಂಗಳವರೆಗೆ ವೃದ್ಧೆಯ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 24 ಕೋಟಿ ರು. ವರ್ಗಾವಣೆ ಮಾಡಿಕೊಂಡಿದ್ದಾರೆ. ನಂತರ ಮತ್ತಷ್ಟು ಹಣಕ್ಕಾಗಿ ಒತ್ತಡ ಹೇರಿದ ವಂಚಕರು, ಚಿನ್ನಾಭರಣ ಅಡಮಾನ ಇಡುವಂತೆ ಸೂಚಿಸಿದ್ದಾರೆ.

ವಂಚಕರ ಸೂಚಿಸಿದಂತೆ ಮನೆಯಲ್ಲಿದ್ದ 1.3 ಕೆ.ಜಿ. ಚಿನ್ನ ಅಡಮಾನವಿಡಲು ನಗರದ ಕಂಟೋನ್ಮೆಂಟ್‌ನಲ್ಲಿರುವ ಖಾಸಗಿ ಬ್ಯಾಂಕ್ ಶಾಖೆಗೆ ವೃದ್ಧೆ ತೆರಳಿದ್ದಾರೆ. ಆದರೆ, ಬ್ಯಾಂಕ್‌ನವರು ಅವರ ಖಾತೆಯಲ್ಲಿ ಕೋಟ್ಯಂತರ ಹಣ ವರ್ಗಾವಣೆಯಾಗಿರುವುದನ್ನು ಹಾಗೂ ದೊಡ್ಡ ಪ್ರಮಾಣದಲ್ಲಿ ಚಿನ್ನಾಭರಣ ತಂದಿರುವುದನ್ನು ಗಮನಿಸಿ ತಕ್ಷಣ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಕೂಡಲೇ ಬ್ಯಾಂಕ್‌ಗೆ ಬಂದ ಅಧಿಕಾರಿಗಳು, ವೃದ್ಧೆಯನ್ನು ಪ್ರಶ್ನಿಸಿದ್ದಾರೆ. ಆರಂಭದಲ್ಲಿ ಆಕೆ ಮಾಹಿತಿ ನೀಡಲು ನಿರಾಕರಿಸಿದರು. ಬಳಿಕ ಆಕೆ ಮನವೊಲಿಸಿ ವಿಚಾರಿಸಿದಾಗ ಘಟನೆ ವಿವರಿಸಿದ್ದಾರೆ. ಕೂಡಲೇ ಆಕೆಯಿಂದ ದೂರು ಪಡೆದು ಎಫ್‌ಐಆರ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿ, ಎನ್‌ಸಿಆರ್‌ಪಿ ಪೋರ್ಟಲ್‌ ಸಹಾಯದಿಂದ ನಕಲಿ ಖಾತೆಗಳನ್ನು ಜಪ್ತಿ ಮಾಡಲಾಗಿದೆ. ಬಳಿಕ ಟವರ್ ಲೊಕೇಷನ್‌ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸುವಲ್ಲಿ ಸೈಬರ್ ಕಮಾಂಡ್ ಸೆಂಟರ್‌ ಮತ್ತು ಸಿಸಿಬಿ ತಂಡ ಯಶಸ್ವಿಯಾಗಿದೆ.

ಸೈಬರ್ ಕಮಾಂಡ್‌ ಸೆಂಟರ್‌ನ ಡಿಜಿಪಿ ಪ್ರಣವ್‌ ಮೊಹಂತಿ ಮಾರ್ಗದರ್ಶನದಲ್ಲಿ ಡಿಐಜಿಪಿ ಎಚ್‌.ಡಿ.ಆನಂದ್ ಕುಮಾರ್‌ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.

ಹಿಂದೆ 19 ಕೋಟಿ ರು. ವಂಚನೆ ಪ್ರಕರಣ

ಈ ಹಿಂದೆ ನಗರದ ಉದ್ಯಮಿಯೊಬ್ಬರಿಗೆ ಅಧಿಕ ಲಾಭಾಂಶ ನೀಡುವುದಾಗಿ ಹೇಳಿ ಹೂಡಿಕೆ ನೆಪದಲ್ಲಿ 19 ಕೋಟಿ ರು. ವರ್ಗಾವಣೆ ಮಾಡಿಕೊಂಡು ವಂಚಿಸಲಾಗಿತ್ತು. ಇದೀಗ ವೃದ್ಧೆಯೊಬ್ಬರಿಗೆ ಬರೋಬ್ಬರಿ 24 ಕೋಟಿ ರು. ವಂಚಿಸಿರುವುದು ರಾಜ್ಯದಲ್ಲೇ ನಡೆದಿರುವ ದೊಡ್ಡ ಮೊತ್ತದ ಸೈಬರ್‌ ವಂಚನೆ ಪ್ರಕರಣ ಆಗಿದೆ.

ಸೈಬರ್‌ ಪ್ರಕರಣಗಳು ಹೆಚ್ಚಾಗಿದ ಹಿನ್ನೆಲೆಯಲ್ಲಿ ಇತ್ತೀಚೆಗೆ ನಗರದ ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿ ದೊಡ್ಡ ಮೊತ್ತದ ಹಣ ವರ್ಗಾವಣೆ ಮತ್ತು ಚಿನ್ನಾಭರಣಗಳ ವಹಿವಾಟು ನಡೆದ್ದಾಗ ಮಾಹಿತಿ ನೀಡುವಂತೆ ಸೂಚಿಸಲಾಗಿತ್ತು. ಅದರಂತೆ ಬ್ಯಾಂಕ್‌ನವರು ನಮಗೆ ಮಾಹಿತಿ ನೀಡಿದ್ದು, ಕಾರ್ಯಾಚರಣೆ ನಡೆಸಲು ಸಹಕಾರಿಯಾಯಿತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸತತ ಸುಲಿಗೆ

- ನಿವೃತ್ತಿಯಿಂದ ಬಂದ ಹಣ, ಆಸ್ತಿ ಮಾರಾಟದಿಂದ ಸಿಕ್ಕ ಹಣವನ್ನು ಖಾತೆಯಲ್ಲಿಟ್ಟಿದ್ದ ವೃದ್ಧೆ

- ಫೆ.10ರಂದು ಕರೆ ಮಾಡಿದ್ದ ವಂಚಕರು. ಅಂದಿನಿಂದ ಈವರೆಗೆ 24 ಕೋಟಿ ರು. ಲೂಟಿ

- ಮನೆಯಲ್ಲಿರುವ ಚಿನ್ನಾಭರಣ ಅಡಮಾನವಿಟ್ಟು ಹಣ ನೀಡುವಂತೆ ಒಂಟಿ ವೃದ್ಧೆಗೆ ಕಿರುಕುಳ

- 1.3 ಕೆ.ಜಿ. ಚಿನ್ನದೊಂದಿಗೆ ಬಂದ ವೃದ್ಧೆ ಮೇಲೆ ಬ್ಯಾಂಕ್‌ನವರಿಗೆ ಶಂಕೆ. ಪೊಲೀಸರಿಗೆ ಮಾಹಿತಿ

- ಪೊಲೀಸರ ವಿಚಾರಣೆ ವೇಳೆ ರಾಜ್ಯದ ಅತಿದೊಡ್ಡ ಡಿಜಿಟಲ್‌ ವಂಚನೆಯಾಗಿರುವುದು ಬೆಳಕಿಗೆ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಕ್ಯಾಂಟರ್‌ಗೆ ಆಪೆ ಆಟೋ ಡಿಕ್ಕಿ: ಸಾಫ್ಟ್ ವೇರ್ ಕಂಪನಿ ಉದ್ಯೋಗಿ ಸಾವು
ಕಸಾಯಿ ಖಾನೆಗೆ ಸಾಗಿಸುತ್ತಿದ್ದ ಗೋವುಗಳ ರಕ್ಷಣೆ: ಇಬ್ಬರ ಬಂಧನ