ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆ-1963 ರ ಸೆಕ್ಷನ್ 86 ಮತ್ತು 87ರ ಅಡಿ ಗಂಧದ ಮರ ಕಡಿದರೆ ಕನಿಷ್ಠ ₹50 000 ದಂಡ

KannadaprabhaNewsNetwork |  
Published : Jul 18, 2024, 01:32 AM ISTUpdated : Jul 18, 2024, 05:02 AM IST
sandalwood tree

ಸಾರಾಂಶ

ಗಂಧದ ಮರ ಕಳವು ಆರೋಪ ಹಾಗೂ ಅಕ್ರಮವಾಗಿ ಸಂಗ್ರಹಿಸಿದ ಅಪರಾಧ ಮೊದಲ ಬಾರಿ ಸಾಬೀತಾದಲ್ಲಿ ಕೃತ್ಯ ಎಸಗಿದವರಿಗೆ 5 ವರ್ಷಕ್ಕಿಂತ ಕಡಿಮೆ ಶಿಕ್ಷೆ ಮತ್ತು 50 ಸಾವಿರಕ್ಕಿಂತಲೂ ಕಡಿಮೆ ದಂಡ ವಿಧಿಸುವಂತಿಲ್ಲ ಎಂದು ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆ-1963ರ ಸೆಕ್ಷನ್ 86 ಮತ್ತು 87ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

  ಬೆಂಗಳೂರು:  ಬಡವ ಮತ್ತು ಬಡಗಿ ಎಂಬ ಕಾರಣ ಪರಿಗಣಿಸಿ ಗಂಧದ ಮರ ಕಡಿದು ಕಳವಿಗೆ ಯತ್ನಿಸಿದ ಪ್ರಕರಣದಲ್ಲಿ ಆರೋಪಿಗೆ 10 ಸಾವಿರ ರು. ದಂಡ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಒಪ್ಪದ ಹೈಕೋರ್ಟ್‌, ದಂಡದ ಮೊತ್ತವನ್ನು ಒಂದು ಲಕ್ಷಕ್ಕೆ ಹೆಚ್ಚಿಸಿರುವ ಜೊತೆಗೆ ಐದು ವರ್ಷ ಜೈಲು ಶಿಕ್ಷೆಯನ್ನು ಕಾಯಂಗೊಳಿಸಿದೆ.

ಪ್ರಕರಣದ ಆರೋಪಿ ಮಂಡ್ಯ ಜಿಲ್ಲೆಯ ಬಲ್ಲೇನಹಳ್ಳಿ ಗ್ರಾಮದ ನಿವಾಸಿ ದೇವರಾಜಾಚಾರಿ ಎಂಬುವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯ, 10 ಸಾವಿರ ರು. ದಂಡ ವಿಧಿಸಿರುವುದನ್ನು ಆಕ್ಷೇಪಿಸಿ ರಾಜ್ಯ ಸರ್ಕಾರ (ಅಶೋಕಪುರ ಠಾಣಾ ಪೊಲೀಸರು) ಹೈಕೋರ್ಟ್‌ಗೆ ಕ್ರಿಮಿನಲ್‌ ಮೇಲ್ಮನವಿ ಸಲ್ಲಿಸಿದ್ದರು.

ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್‌ ಅವರ ನ್ಯಾಯಪೀಠ, ಗಂಧದ ಮರ ಕಳವು ಆರೋಪ ಹಾಗೂ ಅಕ್ರಮವಾಗಿ ಸಂಗ್ರಹಿಸಿದ ಅಪರಾಧ ಮೊದಲ ಬಾರಿ ಸಾಬೀತಾದಲ್ಲಿ ಕೃತ್ಯ ಎಸಗಿದವರಿಗೆ 5 ವರ್ಷಕ್ಕಿಂತ ಕಡಿಮೆ ಶಿಕ್ಷೆ ಮತ್ತು 50 ಸಾವಿರಕ್ಕಿಂತಲೂ ಕಡಿಮೆ ದಂಡ ವಿಧಿಸುವಂತಿಲ್ಲ ಎಂದು ಕರ್ನಾಟಕ ಅರಣ್ಯ ಸಂರಕ್ಷಣಾ ಕಾಯ್ದೆ-1963ರ ಸೆಕ್ಷನ್ 86 ಮತ್ತು 87ರಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ವಿಚಾರಣಾ ನ್ಯಾಯಾಲಯ ಆರೋಪಿಗೆ ಸೆಕ್ಷನ್ 86 (ಗಂಧದ ಮರ ಕತ್ತರಿಸಿದ) ಅಡಿಯಲ್ಲಿ 5 ವರ್ಷ ಶಿಕ್ಷೆ ಹಾಗೂ ಕೇವಲ 10 ಸಾವಿರ ರು. ದಂಡ ವಿಧಿಸಿದೆ. ಸೆಕ್ಷನ್ 87 (ಗಂಧದ ಮರ ಸಂಗ್ರಹಣೆ ಯತ್ನ) ಅಡಿಯಲ್ಲಿ ಐದು ವರ್ಷ ಜೈಲು ವಿಧಿಸಿದ್ದರೂ ಯಾವುದೇ ದಂಡ ವಿಧಿಸಿಲ್ಲ ಎಂದು ಅಭಿಪ್ರಾಯಪಟ್ಟಿತು.

ಅಲ್ಲದೆ, ಸೆಕ್ಷನ್‌ ಮತ್ತು 86 ಮತ್ತು 87 ಅಡಿಯಲ್ಲಿ 50 ಸಾವಿರ ರು. ದಂಡ ವಿಧಿಸುವುದನ್ನು ಕಡ್ಡಾಯಗೊಳಿಸಿರುವಾಗ, ಅದಕ್ಕಿಂತ ಕಡಿಮೆ ಪ್ರಮಾಣ ದಂಡ ವಿಧಿಸಲು ನ್ಯಾಯಾಲಯಕ್ಕೆ ಅವಕಾಶವಿರುವುದಿಲ್ಲ. ಇದರಿಂದ ಕಡಿಮೆ ದಂಡ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಕ್ರಮ ಒಪ್ಪಲಾಗದು ಎಂದು ತಿಳಿಸಿದ ಹೈಕೋರ್ಟ್‌, ದೇವರಾಜಾಚಾರಿಗೆ ಸೆಕ್ಷನ್‌ 86 ಹಾಗೂ 87 ಅಡಿಯಲ್ಲಿ ತಲಾ 50 ಸಾವಿರ ರು. ದಂಡಕ್ಕೆ ಏರಿಸಿ (ಒಟ್ಟು ಒಂದು ಲಕ್ಷ) ಆದೇಶಿಸಿತು.

ಜೊತೆಗೆ, ಈ ಎರಡೂ ಸೆಕ್ಷನ್‌ ಅಡಿ 5 ವರ್ಷ ಜೈಲು ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿಹಿಡಿದು ಸರ್ಕಾರದ ಮೇಲ್ಮನವಿಯನ್ನು ಪುರಸ್ಕರಿಸಿದೆ. ಇದೇ ವೇಳೆ ತನಗೆ ಶಿಕ್ಷೆ ಹಾಗೂ ದಂಡ ವಿಧಿಸಿರುವ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಆರೋಪಿ ದೇವರಾಜಾಚಾರಿ ಸಲ್ಲಿಸಿದ್ದ ಕ್ರಿಮಿನಲ್‌ ಮೇಲ್ಮನವಿಯನ್ನು ಹೈಕೋರ್ಟ್‌ ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ವಿವರ: 2006ರ ಮೇ 28ರಂದು ರಾತ್ರಿ ಮೈಸೂರಿನ ರೈಲ್ವೆ ಆಸ್ಪತ್ರೆ ಆವರಣದಲ್ಲಿದ್ದ ಶ್ರೀಗಂಧ ಮರವೊಂದನ್ನು ಕಡಿದುಕೊಂಡು ಓಡಿ ಹೋಗುತ್ತಿದ್ದ ವೇಳೆ ದೇವರಾಜಾಚಾರಿ ಗಸ್ತು ಕರ್ತವ್ಯದಲ್ಲಿದ್ದ ರೈಲ್ವೆ ರಕ್ಷಣಾ ಪಡೆಯ ಪೇದೆಗೆ ಸಿಕ್ಕಿಬಿದ್ದಿದ್ದ. ಮೈಸೂರಿನ ಆಶೋಕಪುರಂ ಠಾಣೆಯಲ್ಲಿ ದೂರು ದಾಖಲಿಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಆರೋಪಿಗೆ ಕರ್ನಾಟಕ ಅರಣ್ಯ ಕಾಯ್ದೆ-1963ರ ಸೆಕ್ಷನ್‌ 86 ಅಡಿಯಲ್ಲಿ ಐದು ವರ್ಷ ಸಾಧಾರಣ ಸಜೆ, 10 ಸಾವಿರ ರು. ದಂಡ ಮತ್ತು ಸೆಕ್ಷನ್‌ 87ರ ಅಡಿಯಲ್ಲಿ ಐದು ವರ್ಷ ಸಾಧಾರಣ ಸಜೆ ವಿಧಿಸಿತ್ತು.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಪತ್ನಿ ಆತ್ಮ*ತ್ಯೆ ನಿಂದನೆಗೆ ನೊಂದು ಪತಿಯೂ ನೇ*ಗೆ
ನಡುರಸ್ತೆಯಲ್ಲಿ ಹಣ ಕೊಡದವರ ಬಟ್ಟೆ ಬಿಚ್ಚುವ ಮಂಗಳಮುಖಿಯರು