ಮಗು ಸಾವಿನ ಶಾಕ್‌ನಿಂದ ತಾಯಿಯೂ ಆತ್ಮ*ತ್ಯೆ

Published : Apr 03, 2026, 06:26 AM IST
bengaluru mother suicide child death accident mental health family tragedy

ಸಾರಾಂಶ

ಮನೆಯಲ್ಲಿ ಆಟವಾಡುತ್ತ 11 ತಿಂಗಳ ಹಸುಗೂಸು ಬಕೆಟ್‌ ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಪ್ರೀತಿಯ ಕಂದನ ಸಾವಿನಿಂದ ಆಘಾತಗೊಂಡು ತಾಯಿಗೆ ಆತ್ಮಹತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ನಗರದಲ್ಲಿ ನಡೆದಿದೆ.

 ಬೆಂಗಳೂರು :  ಮನೆಯಲ್ಲಿ ಆಟವಾಡುತ್ತ 11 ತಿಂಗಳ ಹಸುಗೂಸು ಬಕೆಟ್‌ ನೀರಿನಲ್ಲಿ ಮುಳುಗಿ ಮೃತಪಟ್ಟರೆ, ಪ್ರೀತಿಯ ಕಂದನ ಸಾವಿನಿಂದ ಆಘಾತಗೊಂಡು ತಾಯಿಗೆ ಆತ್ಮ*ತ್ಯೆಗೆ ಶರಣಾಗಿರುವ ಮನಕಲಕುವ ಘಟನೆ ನಗರದಲ್ಲಿ ನಡೆದಿದೆ.

ನಾಗರಬಾವಿ ಸಮೀಪದ ಬೈರವೇಶ್ವರ ನಗರದ ಪ್ರತಿಭಾ (29) ಹಾಗೂ ಅವರ 11 ತಿಂಗಳ ಮಗ ಅಗಸ್ತ್ಯ ಮೃತಪಟ್ಟ ದುರ್ದೈವಿಗಳು.

ಮನೆಯಲ್ಲಿ ಬುಧವಾರ ಮಧ್ಯಾಹ್ನ ಮಗುವನ್ನು ಬಿಟ್ಟು ತಾರಿಸಿಗೆ ಬಟ್ಟೆ ಒಣ ಹಾಕಲು ತಾಯಿ ಹೋದಾಗ ಸ್ನಾನದ ಮನೆಯಲ್ಲಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದು ಮಗು ಮೃತಪಟ್ಟಿದೆ. ಈ ಸಾವಿನಿಂದ ಆಘಾತಗೊಂಡ ತಾಯಿ, ಚಾಕುವಿನಿಂದ ಕೈ ಕುಯ್ದುಕೊಂಡು ಹಾಗೂ ಅತಿಯಾಗಿ ಜ್ವರದ ಮಾತ್ರೆಗಳನ್ನು ಸೇವಿಸಿದ್ದಲ್ಲದೆ ನೇಣು ಬಿಗಿದು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಕೆಲಸ ಮುಗಿಸಿ ಸಂಜೆ ಮೃತರ ಪತಿ ಮಹಾಂತೇಶ್ ವಾಲಿ ಮರಳಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ.

ನಾಲ್ಕು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲೆಯ ಮಹಾಂತೇಶ್ ಹಾಗೂ ಪ್ರತಿಭಾ ವಿವಾಹವಾಗಿದ್ದು, ಈ ದಂಪತಿಗೆ 11 ತಿಂಗಳ ಗಂಡು ಮಗುವಿತ್ತು. ಮದುವೆ ಬಳಿಕ ಬೈರವೇಶ್ವರ ನಗರದಲ್ಲಿ ಮಹಾಂತೇಶ್ ಕುಟುಂಬ ನೆಲೆಸಿತ್ತು. ಪೀಣ್ಯದ ಖಾಸಗಿ ಕಂಪನಿಯಲ್ಲಿ ಮಹಾಂತೇಶ್ ಹಾಗೂ ಸಿಲ್ಕ್ ಬೋರ್ಡ್‌ ಬಳಿಯ ಸಾಫ್ಟ್‌ವೇರ್ ಕಂಪನಿಯಲ್ಲಿ ಅವರ ಪತ್ನಿ ನೌಕರಿಯಲ್ಲಿದ್ದರು. ಮಗು ಪಾಲನೆ ಸಲುವಾಗಿ ಪ್ರತಿಭಾ ಮನೆಯಿಂದಲೇ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಾನು ಬೆಳಗ್ಗೆ 9 ಗಂಟೆಯಲ್ಲಿ ಕೆಲಸಕ್ಕೆ ತೆರಳಿದ ಬಳಿಕ ಮನೆಯಲ್ಲಿ ಪತ್ನಿ ಹಾಗೂ ಮಗು ಇದ್ದರು. ಎಂದಿನಂತೆ ಕೆಲಸ ಮುಗಿಸಿ ಸಂಜೆ 6.30ರ ವೇಳೆ ಮನೆಗೆ ಮರಳಿದೆ. ಆಗ ಮನೆ ಬಾಗಿಲು ಬಡಿದರೂ ಪತ್ನಿ ತೆರೆಯಲಿಲ್ಲ. ಆಗ ಆಕೆಯ ಮೊಬೈಲ್‌ಗೆ ಕರೆ ಮಾಡಿದರೆ ಸಹ ಪ್ರತಿಕ್ರಿಯಿಸಲಿಲ್ಲ. ಇದರಿಂದ ಆತಂಕವಾಯಿತು ಎಂದು ವಾಲಿ ದೂರಿನಲ್ಲಿ ಹೇಳಿದ್ದಾರೆ.

ಆಗ ಮನೆಯ ಕಿಟಕಿಯಿಂದ ಕೈ ತೂರಿಸಿ ಒಳಗಡೆ ಭಾಗದಲ್ಲಿದ್ದ ಕೀಯನ್ನು ತೆಗೆದುಕೊಂಡು ಬಾಗಿಲು ತೆರೆದು ಪ್ರವೇಶಿಸಿದೆ. ಆ ವೇಳೆ ಕೂಗಿದರೂ ಪತ್ನಿ ಹಾಗೂ ಮಗು ಸದ್ದು ಇರಲಿಲ್ಲ. ಕೋಣೆಗೆ ತೆರಳಿ ನೋಡಿದಾಗ ಜೋಕಾಲಿಯ ಹುಕ್‌ಗೆ ಸೀರೆ ಬಿಗಿದು ನೇಣು ಬಿಗಿದ ಸ್ಥಿತಿಯಲ್ಲಿ ಪ್ರತಿಭಾ ಪತ್ತೆಯಾದರು. ಅಲ್ಲದೆ ಎಡಗೈನ ಮುಂಗೈಯನ್ನು ಚಾಕುವಿನಿಂದ ಅವರು ಕುಯ್ದುಕೊಂಡಿದ್ದರು. ಮಂಚದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಗು ಕಂಡು ಆಘಾತವಾಯಿತು ಎಂದು ನೊಂದು ನುಡಿದಿದ್ದಾರೆ.

ಘಟನೆ ಹೇಗಾಯ್ತು?

ಮನೆಯಲ್ಲಿ ಮಗು ಆಡಲು ಬಿಟ್ಟು ತಾರಸಿಗೆ ಬಟ್ಟೆ ಒಣ ಹಾಕಲು ಪ್ರತಿಭಾ ತೆರಳಿದ್ದರು. ಆಗ ಆಟವಾಡುತ್ತ ಮಗು ಸ್ನಾನದ ಮನೆಗೆ ಹೋಗಿ ನೀರು ತುಂಬಿದ್ದ ಬಕೆಟ್‌ಗೆ ಬಿದ್ದಿದೆ. ಕೆಲ ಹೊತ್ತಿನ ಬಳಿಕ ಮರಳಿದ ಪ್ರತಿಭಾ, ಮಗು ಕಾಣದೆ ಕಂಗಾಲಾಗಿ ಹುಡುಕಾಡಿದ್ದಾಳೆ. ಆಗ ಸ್ನಾನದ ಮನೆಯಲ್ಲಿ ಉಸಿರುಗಟ್ಟಿ ಮಗು ಕಂಡು ಆಕೆಗೆ ಆಘಾತವಾಗಿದೆ. ಈ ವಿಷಯ ಯಾರಿಗೂ ಹೇಳದೆ ಆ ನೋವಿನಲ್ಲೇ ಆಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಮೂಲಗಳು ಹೇಳಿವೆ.

ಸಾವಿನ ಬಗ್ಗೆ ಡೆತ್‌ನೋಟ್‌

ಹಾಸಿಗೆಯ ಪಕ್ಕದಲ್ಲಿ ನನ್ನ ಪತ್ನಿ ಪ್ರತಿಭಾರವರು ಇಂಗ್ಲಿಷ್ ನಲ್ಲಿ ಬರೆದಿರುವ ಪತ್ರ ಸಿಕ್ಕಿತ್ತು. ಆ ಪತ್ರದಲ್ಲಿ ಸಾವಿನ ಕಾರಣ ವಿವರಿಸಿದರು. ನನ್ನ ಮಗ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದು ಅವನನ್ನು ಉಳಿಸಿಕೊಳ್ಳಲು ಆಗಲಿಲ್ಲ. ನನ್ನನ್ನು ಕ್ಷಮಿಸಿ ಎಂದು ಬರೆದಿರುತ್ತಾರೆ ಹಾಗೂ ಮೃತ ದೇಹದ ಪಕ್ಕದಲ್ಲಿ ಡೋಲೋ 15 ಮಾತ್ರೆಗಳ ಖಾಲಿ ಸ್ಟ್ರಿಪ್‌ ಪತ್ತೆಯಾಯಿತು. ಮಗನ ಸಾವಿನಿಂದ ಬೇಸರಗೊಂಡು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮಹಾಂತೇಶ್ ತಿಳಿಸಿದ್ದಾರೆ. 

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ಐಪಿಎಲ್‌ ಆಟದ ವೇಳೆ ಮೊಬೈಲ್ ಕಳ್ಳಾಟಕ್ಕೆ ವಿಮಾನದಲ್ಲಿ ಬಂದ್ರು
ಎತ್ತಿನಗಾಡಿಗೆ ಆಟೋ ಡಿಕ್ಕಿ: ಬೆಂಗಳೂರು ಮೂಲಕ ವ್ಯಕ್ತಿ ಸ್ಥಳದಲ್ಲೇ ಸಾವು