- ಕುಟುಂಬದಲ್ಲಿ ಅನಾರೋಗ್ಯದ ನೆಪದಲ್ಲಿ ಐದಾರು ವರ್ಷಗಳಿಂದ ನಿರಂತರ ಸಾವುಗಳು ಸಂಭವಿಸಿದ್ದವು
-ಮೊದಲು ಸುಜಾತ ಅವರ ತಾಯಿ, ಆನಂತರ ಅವರ ಮೂವರು ಸೋದರಿಯರು ಮೃತಪಟ್ಟಿದ್ದರು-ಈ ಅಕಾಲಿಕ ಮೃತ್ಯು ತಂದ ನೋವಿನಿಂದ ಚೇತರಿಸಿಕೊಳ್ಳುವ ಮುನ್ನವೇ ಸುಜಾತ ಪತಿ ನಿಧನರಾದರು
-2 ವರ್ಷ ಹಿಂದೆ ಆಕೆ ಮೊಮ್ಮಗ (ರಮ್ಯಾಳ ಮಗ), 4 ದಿನದ ಹಿಂದಷ್ಟೇ ಮತ್ತೊಬ್ಬ (ರಮ್ಯಾಳ ಕಿರಿ ಮಗ) ಸಾವನ್ನಪ್ಪಿದ್ದರು-ಈ ಮೊಮ್ಮಕ್ಕಳ ಸಾವು ಸುಜಾತಾಳಿಗೆ ಆಘಾತ ಉಂಟು ಮಾಡಿತ್ತು. ಜೊತೆಗೆ ಮಗಳು ರಮ್ಯಾ ಕೂಡ ಜಿಗುಪ್ಸೆಗೊಂಡಿದ್ದಳು
---ಕನ್ನಡಪ್ರಭ ವಾರ್ತೆ ಬೆಂಗಳೂರುತಮ್ಮ ಕುಟುಂಬದಲ್ಲಿ ಸಾವಿನ ಸರಣಿಯಿಂದ ಜಿಗುಪ್ಸೆಗೊಂಡು ದೇವಾಲಯ ಪ್ರಾಂಗಣದಲ್ಲೇ ಮಗಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿ ಬಳಿಕ ಕತ್ತು ಕುಯ್ದುಕೊಂಡು ತಾಯಿಯೊಬ್ಬಳು ಆತ್ಮಹತ್ಯೆಗೆ ಮುಂದಾಗಿರುವ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಸುಕಿನಲ್ಲಿ ನಡೆದಿದೆ.
ಅಗ್ರಹಾರ ಲೇಔಟ್‌ನ ಸುಜಾತ (55) ಆತ್ಮಹತ್ಯೆ ಯತ್ನಿಸಿದ್ದು, ಆಕೆಯ ಪುತ್ರಿ ರಮ್ಯಾ (26) ಹಲ್ಲೆಗೊಳಗಾದ ದುರ್ದೈವಿ. ಅಗ್ರಹಾರ ಲೇಔಟ್‌ನ ಹರಿಹರೇಶ್ವರ ದೇವಾಲಯದಲ್ಲಿ ಬೆಳಗಿನ ಜಾವ 3.45ರ ಸುಮಾರಿಗೆ ಪೂಜೆ ನೆಪದಲ್ಲಿ ಕರೆ ತಂದು ಮಗಳ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಬಳಿಕ ಮನೆಗೆ ತೆರಳಿ ಸುಜಾತ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಹಲ್ಲೆಗೊಳಗಾದ ರಮ್ಯಾಳ ಚೀರಾಟ ಕೇಳಿ ರಕ್ಷಣೆಗೆ ಧಾವಿಸಿದ ಸ್ಥಳೀಯರು, ಆಕೆಯನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ.ಈ ಘಟನೆ ಬಗ್ಗೆ ಮಾಹಿತಿ ಪಡೆದು ರಮ್ಯಾ ಮನೆಗೆ ತೆರಳಿದಾಗ ರಕ್ತದ ಮಡುವಿನಲ್ಲಿ ಸುಜಾತ ಕಂಡು ಬಂದಿದ್ದಾರೆ. ತಕ್ಷಣವೇ ಆಕೆಯನ್ನು ಸಹ ಆಸ್ಪತ್ರೆಗೆ ದಾಖಲಿಸಲಾಗಿದೆ. ತಾಯಿ-ಮಗಳು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರಣಿ ಸಾವಿನಿಂದ ಕಂಗೆಟ್ಟ ತಾಯಿಅಗ್ರಹಾರ ಲೇಔಟ್‌ನ ರಾಮಚಂದ್ರಪ್ಪ ಅವರಿಗೆ ನಾಲ್ವರು ಮಕ್ಕಳ ಪೈಕಿ ಸುಜಾತ ಹಿರಿಯವಳಾಗಿದ್ದು, ಮದುವೆ ಬಳಿಕ ತನ್ನ ಕುಟುಂಬದ ಅಗ್ರಹಾರ ಲೇಔಟ್‌ನಲ್ಲಿ ಅವರು ನೆಲೆಸಿದ್ದರು. ಐದು ವರ್ಷಗಳ ಹಿಂದೆ ತಮ್ಮ ಪುತ್ರಿ ರಮ್ಯಳನ್ನು ಆನೇಕಲ್ ತಾಲೂಕಿನ ಸೋಮಶೇಖರ್ ಜತೆ ವಿವಾಹ ಮಾಡಿಸಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಸುಖಿ ಕುಟುಂಬದಲ್ಲಿ ವಿಧಿಯಾಟ ಶುರುವಾಯಿತು.
ಅನಾರೋಗ್ಯದ ನೆಪದಲ್ಲಿ ಕಳೆದ ಐದಾರು ವರ್ಷಗಳಿಂದ ನಿರಂತರ ಸಾವುಗಳು ಸಂಭವಿಸಿದ್ದವು. ಮೊದಲು ಸುಜಾತ ಅವರ ತಾಯಿ ಹಾಗೂ ಆನಂತರ ಅವರ ಮೂವರು ಸೋದರಿಯರು ಮೃತಪಟ್ಟರು. ಈ ಅಕಾಲಿಕ ಮೃತ್ಯು ತಂದ ನೋವಿನಿಂದ ಚೇತರಿಸಿಕೊಳ್ಳುವ ಮುನ್ನವೇ ಸುಜಾತ ಅವರ ಪತಿ ನಿಧನರಾದರು. ಎರಡು ವರ್ಷಗಳ ಹಿಂದೆ ಆಕೆಯ ಮೊಮ್ಮಗ (ರಮ್ಯಾಳ ಮಗ) ಸಾವನ್ನಪ್ಪಿದ. ನಾಲ್ಕು ದಿನಗಳ ಹಿಂದಷ್ಟೇ ಮತ್ತೊಬ್ಬ (ರಮ್ಯಾಳ ಕಿರಿಯ ಮಗ) ಸಹ ಕೊನೆಯುಸಿರೆಳೆದಿದ್ದ. ಈ ಮೊಮ್ಮಕ್ಕಳ ಸಾವು ಆಕೆಗೆ ಆಘಾತ ಉಂಟು ಮಾಡಿತ್ತು. ಅಲ್ಲದೆ ಕುಟುಂಬ ಸಾವಿನಿಂದ ಖಿನ್ನತೆಗೊಳಗಾಗಿ ರಾಮಚಂದ್ರಪ್ಪ ಭಿಕ್ಷುಕನಂತೆ ಬೀದಿಗೆ ಬಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ತಾಯಿಯಿಂದ ಮಚ್ಚಿನೇಟು?
ತನ್ನ ಮಕ್ಕಳ ಸಾವಿನ ಬಳಿಕ ತವರು ಮನೆಗೆ ರಮ್ಯಾ ಬಂದಿದ್ದಳು. ಕಾರ್ತಿಕ ಮಾಸದಲ್ಲಿ ಪ್ರತಿ ದಿನ ಮನೆ ಸಮೀಪದ ಹರಿಹರೇಶ್ವರ ದೇವಾಲಯಕ್ಕೆ ತಾಯಿ-ಮಗಳು ತೆರಳಿ ಪೂಜೆ ಸಲ್ಲಿಸುತ್ತಿದ್ದರು. ಅಂತೆಯೇ ಕಾರ್ತಿಕ ಮಾಸದ ಕೊನೆಯ ಅಮಾವಾಸ್ಯೆ ದಿನ ಹಿನ್ನೆಲೆಯಲ್ಲಿ ಬುಧವಾರ ನಸುಕಿನಲ್ಲಿ ದೇವಾಲಯಕ್ಕೆ ಬ್ಯಾಗ್‌ನಲ್ಲಿ ಮಚ್ಚು ತೆಗೆದುಕೊಂಡು ಇಬ್ಬರು ಹೋಗಿದ್ದರು. ಆಗ ಪ್ರಾಂಗಣದಲ್ಲಿ ದೇವರಿಗೆ ಅಡ್ಡ ಬಿದ್ದು ನಮಸ್ಕರಿಸುವಾಗ ಮಗಳ ಮೇಲೆ ಸುಜಾತ ಮಚ್ಚು ಬೀಸಿದ್ದಾರೆ. ಕೂಡಲೇ ಆಕೆ ಚೀರಿಕೊಂಡಾಗ ಭೀತಿಯಿಂದ ತಾಯಿ ಮನೆಗೆ ಮರಳಿದ್ದಾಳೆ. ದೇಗುಲದ ಬಳಿ ಕತ್ತು ಕುಯ್ದುಕೊಂಡು ಮನೆಗೆ ಧಾವಿಸಿದ ತಾಯಿ ಸ್ನಾನದ ಗೃಹ ಬಂದ್ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.--ನರ ಬಲಿ ಯತ್ನವೇ?
ತಮ್ಮ ಕುಟುಂಬದಲ್ಲಿ ಮೃತ್ಯು ಆರ್ಭಟದಿಂದ ಕಂಗಾಲಾಗಿದ್ದ ತಾಯಿ-ಮಗಳು, ದೇವರಿಗೆ ನರ ಬಲಿಕೊಡಲು ಮುಂದಾಗಿದ್ದರು ಎಂಬ ಮಾತುಗಳು ಕೇಳಿ ಬಂದಿವೆ. ಆದರೆ ಈ ಬಗ್ಗೆ ಪೊಲೀಸರು ಖಚಿತಪಡಿಸಿಲ್ಲ.ಹಲ್ಲೆಗೊಳಗಾಗಿರುವ ರಮ್ಯಾ ಹಾಗೂ ಆರೋಪಿ ಸುಜಾತ ಚಿಕಿತ್ಸೆ ಪಡೆಯುತ್ತಿದ್ದು, ಇಬ್ಬರು ಮಾತನಾಡುವ ಸ್ಥಿತಿಯಲ್ಲಿಲ್ಲ. ಆರೋಗ್ಯದಲ್ಲಿ ಚೇತರಿಕೆ ಬಳಿಕ ವಿಚಾರಣೆ ನಡೆಸಿದಾಗ ಸತ್ಯ ಗೊತ್ತಾಗಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
---ಪತಿ ಸಂಪರ್ಕ ಕಡಿತ
ಇನ್ನು ತಮ್ಮ ಸಂಬಂಧಿಕರಿಂದ ಸಹ ಸುಜಾತ ಹಾಗೂ ಆಕೆಯ ಮಗಳು ರಮ್ಯಾ ದೂರವಾಗಿದ್ದರು. ಘಟನೆ ಬಗ್ಗೆ ಮಾಹಿತಿ ನೀಡಲು ರಮ್ಯಾ ಪತಿ ಸೋಮಶೇಖರ್ ಯತ್ನಿಸಿದಾಗ ಮೊಬೈಲ್ ಸ್ವಿಚ್ಡ್ ಆಫ್ ಆಗಿತ್ತು ಎಂದು ಪೊಲೀಸರು ಹೇಳಿದ್ದಾರೆ.