ಮದ್ಯದ ಅಮಲಲ್ಲಿ ನಿಂದಿಸುತ್ತಿದ್ದ ಗೆಳೆಯನ ಕೊಂದ ಸ್ನೇಹಿತರು!

KannadaprabhaNewsNetwork |  
Published : Apr 20, 2024, 01:34 AM ISTUpdated : Apr 20, 2024, 05:58 AM IST
murder 000.jpg

ಸಾರಾಂಶ

ಮದ್ಯದ ಅಮಲಿನಲ್ಲಿ ಸ್ನೇಹಿತರನ್ನು ಹಂಗಿಸುತ್ತಿದ್ದವನನ್ನು ಗೆಳೆಯರೇ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ.

 ಬೆಂಗಳೂರು :  ಮದ್ಯದ ಅಮಲಿನಲ್ಲಿ ಗಲಾಟೆ ಮಾಡಿದ್ದಕ್ಕೆ ಕೆರಳಿ ಸತೀಶ್ ಕುಮಾರ್‌ (32) ತಲೆ ಮೇಲೆ ಸಿಮೆಂಟ್ ಇಟ್ಟಿ ಎತ್ತಿ ಹಾಕಿ ಆತನ ಸ್ನೇಹಿತರೇ ಹತ್ಯೆಗೈದಿರುವ ಘಟನೆ ಹಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕೊರಿಯರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸತೀಶ್‌, ವಿಪರೀತ ಮದ್ಯ ವ್ಯಸನಿಯಾಗಿದ್ದ. ಮದ್ಯ ಸೇವಿಸಿ ಹುಚ್ಚು ಹುಚ್ಚಾಗಿ ಮನಬಂದಂತೆ ಜೊತೆಯಲ್ಲಿದ್ದವರಿಗೆ ಬೈದು ಆತ ಗಲಾಟೆ ಮಾಡುತ್ತಿದ್ದ. ದೊಮ್ಮಲೂರಿನಲ್ಲಿ ಗುರುವಾರ ರಾತ್ರಿ ನಡೆದ ದೇವರ ಪಲ್ಲಕಿ ಉತ್ಸವಕ್ಕೆ ತನ್ನ ಗೆಳೆಯರ ಜತೆ ಸತೀಶ್ ಬಂದಿದ್ದ. ಈ ಉತ್ಸವ ಮುಗಿದ ಬಳಿಕ ಅಲ್ಲೇ ಸಮೀಪದ ಬಿಡಿಎ ಉದ್ಯಾನ ಬಳಿ ಸ್ನೇಹಿತರ ಜತೆ ಆತ ಮದ್ಯ ಸೇವಿಸಿದ್ದ. ಆಗ ಕಂಠಮಟ್ಟ ಕುಡಿದ ಬಳಿಕ ಗೆಳೆಯರ ಮೇಲೆ ಸತೀಶ್ ಗಲಾಟೆ ಮಾಡಿದ್ದಾನೆ.ಈ ವರ್ತನೆಯಿಂದ ಕೋಪಗೊಂಡ ಆತನ ಗೆಳೆಯರು, ಸತೀಶ್ ತಲೆ ಮೇಲೆ ಸಿಮೆಂಟ್ ಇಟ್ಟಿಗೆ ಎತ್ತಿ ಹಾಕಿ ಹತ್ಯೆಗೈದು ಪರಾರಿಯಾಗಿದ್ದಾರೆ.

ಕೊಲ್ಲುತ್ತೇನೆ ಎಂದ ಸ್ನೇಹಿತನ ಹತ್ಯೆ

 ಬೆಂಗಳೂರು :  ತನಗೆ ಹಣಕಾಸು ಸಹಕಾರ ನೀಡದ ಕಾರಣಕ್ಕೆ ಗಲಾಟೆ ಮಾಡುತ್ತಿದ್ದ ಕೀರ್ತಿ(24)ಯನ್ನು ಮೃತನ ಆಪ್ತ ಸ್ನೇಹಿತ ಸೇರಿ ನಾಲ್ವರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಭೀಕರವಾಗಿ ಹತ್ಯೆಗೈದಿರುವ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಹತ್ಯೆ ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಹೊರಮಾವು ನಿವಾಸಿಗಳಾದ ಮೃತನ ಗೆಳೆಯ ಕಿಶೋರ್‌, ಆತನ ಸಹಚರರಾದ ಸಂತೋಷ್‌, ನಿರ್ಮಲ್‌ ಹಾಗೂ ವೆಂಕಟ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಹಲವು ವರ್ಷಗಳಿಂದ ಕೀರ್ತಿ ಹಾಗೂ ಕಿಶೋರ್ ಸ್ನೇಹಿತರಾಗಿದ್ದು, ಈ ಗೆಳೆತದಲ್ಲಿ ಸ್ನೇಹಿತನಿಗೆ ಕಿಶೋರ್ ಹಣಕಾಸು ಸಹಾಯ ಮಾಡಿದ್ದ, ಆರು ತಿಂಗಳ ಹಿಂದೆ ಗೆಳೆಯನ ಮದುವೆಗೂ ಕಿಶೋರ್ ಆರ್ಥಿಕ ನೆರವು ಕೊಟ್ಟಿದ್ದ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ತನ್ನ ದೊಡ್ಡಪ್ಪನ ಮಗನ ಮೇಲೆ ಕೊಲೆ ಯತ್ನ ಪ್ರಕರಣದಲ್ಲಿ ಬಂಧಿತನಾಗಿ ಕೀರ್ತಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದ.

ಆಗ ಜಾಮೀನು ಪಡೆಯಲು ಕಿಶೋರ್‌ ಸಹಾಯ ಮಾಡಲಿಲ್ಲ ಎಂದು ಕೀರ್ತಿ ಬೇಸರಗೊಂಡಿದ್ದ. ಅಲ್ಲದೆ ಕಿಶೋರ್‌ನನ್ನು ಹೊಡೆದು ಹಾಕುತ್ತೇನೆ ಎಂದು ಪರಿಚಿತರ ಬಳಿ ಕೀರ್ತಿ ಹೇಳಿಕೊಂಡಿದ್ದ. ಬೃಂದಾವನ ಲೇಔಟ್‌ಗೆ ಚಹಾ ಸೇವನೆ ಬಂದಿದ್ದ ಕೀರ್ತಿ ಮೇಲೆ ತನ್ನ ಸಹಚರರ ಜತೆ ಸೇರಿ ಆತ ದಾಳಿ ನಡೆಸಿದ್ದಾನೆ. ಆಗ ಮಾರಕಾಸ್ತ್ರಗಳಿಂದ ಮನಬಂದಂತೆ ಹಲ್ಲೆ ನಡೆಸಿ ಆರೋಪಿಗಳು ಹತ್ಯೆಗೈದಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ಸಹವಾಸ, ಒತ್ತಾಯಕ್ಕೆ ಗಾಂಜಾ ಜಾಲಕ್ಕೆ ವಿದ್ಯಾರ್ಥಿಗಳು!
15 ವರ್ಷಗಳಿ ಸುವರ್ಣನ್ಯೂಸ್, ಕನ್ನಡಪ್ರಭದಲ್ಲಿ ಕೆಲಸ ಮಾಡುತ್ತಿದ್ದ ಮಹಿ‍ಳೆ ಅಪಘಾತದಲ್ಲಿ ದಾರುಣ ಸಾವು