ಬಿಬಿಎಂಪಿ ಅಕ್ರಮ ಪತ್ತೆಗಾಗಿ ರಚಿಸಲಾಗಿದ್ದ ತನಿಖಾ ಸಮಿತಿಗಳು ರದ್ದು

KannadaprabhaNewsNetwork | Published : Dec 19, 2023 1:45 AM

ಸಾರಾಂಶ

ಬಿಬಿಎಂಪಿ ಅಕ್ರಮ ತನಿಖೆಗೆ ನೇಮಿಸಿದ್ದ ಸಮಿತಿ ರದ್ದು; ನ್ಯಾ.ದಾಸ್‌ಗೆ ತನಿಖೆ ಹೊಣೆ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಿಜೆಪಿ ಸರ್ಕಾರ ಅವಧಿಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ ಎಂಬ ದೂರನ್ನಾಧರಿಸಿ ತನಿಖೆ ನಡೆಸಲು ಕಳೆದ ಆಗಸ್ಟ್‌ 5ರಂದು ರಚಿಸಲಾಗಿದ್ದ ಐಎಎಸ್‌ ಅಧಿಕಾರಿಗಳ ನೇತೃತ್ವದ ತನಿಖಾ ಸಮಿತಿಗಳನ್ನು ರದ್ದುಗೊಳಿಸಲಾಗಿದೆ. ಆ ಸಮಿತಿಗಳಿಗೆ ವಹಿಸಲಾಗಿದ್ದ ಜವಾಬ್ದಾರಿಯನ್ನು ನಿವೃತ್ತ ನ್ಯಾ.ನಾಗಮೋಹನ್‌ದಾಸ್‌ ವಿಚಾರಣಾ ಆಯೋಗಕ್ಕೆ ವಹಿಸಲಾಗಿದೆ.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ದೂರು ಸೇರಿದಂತೆ ಮತ್ತಿತರ ಆರೋಪಗಳನ್ನಾಧರಿಸಿ 2019-20ರಿಂದ 2022-23ರವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಾಮಗಾರಿಗಳ ಗುಣಮಟ್ಟ ಪರಿಶೀಲನೆ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ನಾಲ್ವರು ಐಎಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ತನಿಖಾ ಸಮಿತಿಯನ್ನು ರಚಿಸಿತ್ತು. ಜತೆಗೆ ಸಮಿತಿಗಳು 30 ದಿನಗಳಲ್ಲಿ ವರದಿ ನೀಡುವಂತೆಯೂ ಸೂಚಿಸಲಾಗಿತ್ತು. ತನಿಖಾ ಸಮಿತಿಗಳು ವರದಿ ನೀಡುವವರೆಗೆ ಗುತ್ತಿಗೆದಾರರಿಗೆ ಬಿಲ್‌ ಪಾವತಿಸುವುದನ್ನು ತಡೆಹಿಡಿಯಲಾಗಿತ್ತು.

ಈ ಕುರಿತಂತೆ ಗುತ್ತಿಗೆದಾರರು ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದರು. ಆ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಸರ್ಕಾರ ರಚಿಸಿದ್ದ ತನಿಖಾ ಸಮಿತಿಗಳ ಕಾರ್ಯಕ್ಕೆ ತಡೆ ನೀಡಿದೆ. ಆ ಹಿನ್ನೆಲೆಯಲ್ಲಿ ಹಾಗೂ ನ್ಯಾ. ನಾಗಮೋಹನ್‌ದಾಸ್‌ ವಿಚಾರಣಾ ಆಯೋಗವೂ ಅದೇ ಮಾದರಿಯ ಕಾರ್ಯ ಮಾಡುತ್ತಿರುವ ಕಾರಣದಿಂದ ತನಿಖಾ ಸಮಿತಿಗಳನ್ನು ರದ್ದು ಮಾಡಿ ಸರ್ಕಾರ ಆದೇಶಿಸಿದೆ. ಅಲ್ಲದೆ, ತನಿಖಾ ಸಮಿತಿಗಳಿಗೆ ವಹಿಸಿದ್ದ ಕಾರ್ಯಗಳನ್ನೆಲ್ಲ ವಿಚಾರಣಾ ಆಯೋಗಕ್ಕೆ ವರ್ಗಾಯಿಸಲಾಗಿದೆ.

ನಾಲ್ವರು ಐಎಎಸ್‌ ಪ್ರತ್ಯೇಕ ಸಮಿತಿ:

ರಾಜ್ಯ ಸರ್ಕಾರ ಘನತ್ಯಾಜ್ಯ ನಿರ್ವಹಣಾ ಕಾಮಗಾರಿ ಉಜ್ವಲ್‌ ಕುಮಾರ್‌ ಘೋಷ್‌ ನೇತೃತ್ವದ ಸಮಿತಿ, ರಸ್ತೆ ಅಭಿವೃದ್ಧಿ ಮತ್ತು ಒಎಫ್‌ಸಿ ಅಳವಡಿಕೆ ಕಾಮಗಾರಿಗಳಿಗೆ ಆಮ್ಲನ್‌ ಆದಿತ್ಯ ಬಿಸ್ವಾಸ್‌ ನೇತೃತ್ವದ ಸಮಿತಿ, ರಾಜಕಾಲುವೆ, ನಗರ ಯೋಜನೆ ವಿಭಾಗದಲ್ಲಿ ನಕ್ಷೆ ಮಂಜೂರಾತಿ, ಸ್ವಾಧೀನಾನುಭವ ಪತ್ರ ನೀಡುವ ಬಗ್ಗೆ ಪಿ.ಸಿ.ಜಾಫರ್‌, ಕೆರೆ ಅಭಿವೃದ್ಧಿ, ಸ್ಮಾರ್ಟ್‌ಸಿಟಿ ಹಾಗೂ ವಾರ್ಡ್‌ ಮಟ್ಟದ ಕಾಮಗಾರಿಗಳಲ್ಲಿನ ಅಕ್ರಮಗಳ ಕುರಿತು ಡಾ। ಆರ್‌.ವಿಶಾಲ್‌ ನೇತೃತ್ವದ ಸಮಿತಿಯನ್ನು ರಚಿಸಲಾಗಿತ್ತು.

----

ವಿಚಾರಣಾ ಆಯೋಗವೂ ರಚನೆ

ಬಿಬಿಎಂಪಿ ತನಿಖಾ ಸಮಿತಿಗಳ ರಚನೆ ನಂತರ ಬಿಬಿಎಂಪಿ ಹೊರತುಪಡಿಸಿ ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆ ಮತ್ತು ಸಣ್ಣ ನೀರಾವರಿ ಇಲಾಖೆಗಳಲ್ಲಿನ ಅಕ್ರಮಗಳ ಕುರಿತು ತನಿಖೆ ನಡೆಸಲು ಆ.25ರಂದು ನ್ಯಾ. ನಾಗಮೋಹನದಾಸ್‌ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಿದೆ. ಆಯೋಗವು ಗುತ್ತಿಗೆದಾರರ ಸಂಘದ ಕೆಂಪಣ್ಣ ಮಾಡಿದ್ದ ಶೇ.40 ಪರ್ಸೆಂಟ್‌ ಆರೋಪವೂ ಸೇರಿದಂತೆ ಇನ್ನಿತರ ಅಕ್ರಮಗಳ ಕುರಿತು ತನಿಖೆ ನಡೆಸುವಂತೆ ಸರ್ಕಾರ ನಿರ್ದೇಶಿಸಿದೆ. ಅದರಂತೆ ಆಯೋಗವು ಈಗಾಗಲೇ ತನಿಖಾ ಕಾರ್ಯ ಆರಂಭಿಸಿದ್ದು, ಕೆಂಪಣ್ಣ ಅವರಿಂದ 6 ಸಾವಿರಕ್ಕೂ ಹೆಚ್ಚು ಪುಟಗಳ ದಾಖಲೆಗಳನ್ನೂ ಪಡೆದುಕೊಂಡಿದೆ.

ಇದೀಗ ತನಿಖಾ ಸಮಿತಿಯನ್ನು ರದ್ದು ಮಾಡಿರುವ ಹಿನ್ನೆಲೆಯಲ್ಲಿ, ಆ ಸಮಿತಿಗಳಿಗೆ ವಹಿಸಿದ್ದ ಕೆಲಸ ಅಂದರೆ ಬಿಬಿಎಂಪಿ ವ್ಯಾಪ್ತಿಯಲ್ಲಿನ ಅಕ್ರಮಗಳ ತನಿಖೆಯ ಹೊಣೆಯನ್ನು ನ್ಯಾ. ನಾಗಮೋಹನ ದಾಸ್‌ ವಿಚಾರಣಾ ಆಯೋಗದ ಹೆಗಲಿಗೆ ಬಂದಿದೆ.

Share this article