ಬೆಂಗಳೂರು : ಪ್ರತಿಷ್ಠಿತ ಬಹುರಾಷ್ಟ್ರೀಯ ಖಾಸಗಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿಗಳಿಂದ 14.23 ಲಕ್ಷ ರು. ವಸೂಲಿ ಮಾಡಿ ವಂಚಿಸಿದ್ದ ವ್ಯಕ್ತಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಜೆ.ಪಿ.ನಗರದ ಸಾರಕ್ಕಿ ಕೆರೆಯ ಸಮೀಪದ ನಿವಾಸಿ ಪತೂಲ್ ಕಲಂದರ್ ಖಾನ್ ಬಂಧಿತನಾಗಿದ್ದು, ಆರೋಪಿಯಿಂದ 1.4 ಲಕ್ಷ ರು ಹಣ ಜಪ್ತಿ ಮಾಡಲಾಗಿದೆ. ಈ ಕೃತ್ಯದಲ್ಲಿ ತಲೆಮರೆಸಿಕೊಂಡಿರುವ ವೀರೇಶ್ ಹಾಗೂ ಇನಾಯತ್ ಎಂಬುವರ ಪತ್ತೆಗೆ ತನಿಖೆ ನಡೆದಿದೆ. ಕೆಲ ದಿನಗಳ ಹಿಂದೆ ಗೀತಾ ಎಂಬುವರಿಗೆ ಮೈಕ್ರೋ ಸ್ಟಾಫ್ಟ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಕಲಂದರ್ ತಂಡ ವಂಚಿಸಿತ್ತು. ಈ ಬಗ್ಗೆ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಆತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮತ್ತೆ ಏಳು ಪ್ರಕರಣಗಳು ಬಯಲಾಗಿದ್ದು, 14.23 ಲಕ್ಷ ರು. ಹಣ ಸುಲಿಗೆ ಆಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಮೊದಲು ಕನ್ಸಲ್ಟೆಂಟ್ ಏಜೆನ್ಸಿಯಲ್ಲಿ ಕಲಂದರ್ ಕೆಲಸ ಮಾಡುತ್ತಿದ್ದ ವೇಳೆ ಕರ್ತವ್ಯಲೋಪದಿಂದ ಆತನನ್ನು ಸಂಸ್ಥೆ ಕೆಲಸದಿಂದ ವಜಾಗೊಳಿಸಿತ್ತು. ಬಳಿಕ ಆ ಕಂಪನಿಯ ಹೆಸರು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮೈಕ್ರೋ ಸಾಫ್ಟ್ ಹಾಗೂ ಬಾಷ್ ಸೇರಿದಂತೆ ಎಂಎನ್‌ಸಿ ಕಂಪನಿಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಆತ ಜಾಹೀರಾತು ಪ್ರಕಟಿಸುತ್ತಿದ್ದ. ಈತನ ಜಾಹೀರಾತಿಗೆ ಪ್ರತಿಕ್ರಿಯಿಸಿದವರಿಗೆ ಹಣ ಪಡೆದು ಆತ ವಂಚಿಸುತ್ತಿದ್ದನು. ಇದೇ ರೀತಿ ಎಂಟು ಅಭ್ಯರ್ಥಿಗಳಿಂದ ಒಟ್ಟು 14.23 ಲಕ್ಷ ರು ಹಣ ಪಡೆದು ಆರೋಪಿ ವಂಚಿಸಿದ್ದ ಎಂದು ಸಿಸಿಬಿ ತಿಳಿಸಿದೆ.
ಎಂಎನ್ ಸಿ ಕಂಪನಿಗಳಲ್ಲಿ ಕೆಲಸ ಖಾಲಿ ಇದ್ದು, ಸದರಿ ಕೆಲಸಕ್ಕೆ 2.7 ಲಕ್ಷ ರು. ಹಣ ನೀಡಿದರೆ ಉದ್ಯೋಗ ಸಿಗುತ್ತದೆ ಎಂದು ಹೇಳುತ್ತಿದ್ದನು. ಈ ಸುಳ್ಳು ಆಶ್ವಾಸನೆ ನಂಬಿದ್ದವರಿಂದ ಹಂತ ಹಂತವಾಗಿ ತಮ್ಮ ಮೊಬೈಲ್ ಯುಪಿಐ ಮುಖಾಂತರ ಹಣವನ್ನು ವರ್ಗಾಯಿಸಿಕೊಂಡಿದ್ದ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
2024 ರಲ್ಲಿ ಉದ್ಯೋಗವನ್ನು ಅರಸಿಕೊಂಡು ಹೊರರಾಜ್ಯದಿಂದ ನಗರಕ್ಕೆ ಕಲಂದರ್ ಬಂದಿದ್ದ. ನಂತರ ಬಿಟಿಎಂ ಲೇಔಟ್‌ನಲ್ಲಿ ಮ್ಯಾಗ್ನಾಮಿಕ್ಸ್ ಸರ್ವೀಸ್ ಪ್ರೈ.ಲಿನಲ್ಲಿ ಹೆಚ್.ಆರ್.ಮತ್ತು ಟ್ರೈನರ್ ಆಗಿ ಕೆಲಸಕ್ಕೆ ಸೇರಿದ್ದ. ನಂತರ ಸಿಂಥೆಟಿಕ್ ಸಾಫ್ಟ್‌ವೇರ್ ಹಾಗೂ ಮ್ಯಾಗ್ನಾಮಿಕ್ಸ್ ಸರ್ವಿಸ್ ಕಂಪನಿಗಳಲ್ಲಿ ಕೆಲಸಕ್ಕೆ ಬರುವ ಅಭ್ಯರ್ಥಿಗಳ ಬಳಿ ಇನ್ನೂ ಉತ್ತಮ ಎಂಎನ್‌ಸಿ ಕಂಪನಿಗಳಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಮೋಸ ಮಾಡಿದ್ದನು ಎಂದು ತಿಳಿದು ಬಂದಿದೆ.