ಅಪಘಾತವಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ತಮ್ಮ ವಾಹನ ಬಳಸಲು ಹಿಂಜರಿದ ಹೊಯ್ಸಳ ಸಿಬ್ಬಂದಿ ವಿರುದ್ಧ ಆಕ್ರೋಶ

KannadaprabhaNewsNetwork |  
Published : Jul 19, 2024, 02:06 AM ISTUpdated : Jul 19, 2024, 04:57 AM IST
Man Accident 6 | Kannada Prabha

ಸಾರಾಂಶ

ಅಪಘಾತಕ್ಕೆ ತುತ್ತಾಗಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲು ತಮ್ಮ ವಾಹನ ಬಳಸಲು ಹಿಂಜರಿದ ಹೊಯ್ಸಳ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

 ಬೆಂಗಳೂರು :  ಅಪಘಾತಕ್ಕೀಡಾಗಿದ್ದ ಖಾಸಗಿ ಕಾಲೇಜಿನ ಕಾನೂನು ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ್ದಾರೆ ಎಂದು ಆರೋಪಿಸಿ ಯಶವಂತಪುರ ಠಾಣೆ ಹೊಯ್ಸಳ ಸಿಬ್ಬಂದಿ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆಗಳು ವ್ಯಕ್ತವಾಗಿವೆ.

ಶ್ರೀನಗರದ ನಿವಾಸಿ ರಾಹುಲ್ ಗೌಡ ಗಾಯಗೊಂಡಿದ್ದು, ಕಳೆದ ಸೋಮವಾರ ರಾತ್ರಿ ಯಶವಂತಪುರ ಸಮೀಪ ಆತನ ಬೈಕ್ ಅಪಘಾತಕ್ಕೀಡಾಗಿತ್ತು. ಆಗ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲು ಹೊಯ್ಸಳ ಸಿಬ್ಬಂದಿ ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಜನರ ಟೀಕೆ ಗುರಿಯಾಗಿದೆ.

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಅವರು, ಯಶವಂತಪುರ ಠಾಣೆ ಹೊಯ್ಸಳ ಸಿಬ್ಬಂದಿಗೆ ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.

ಎಂ.ಎಸ್.ರಾಮಯ್ಯ ಕಾನೂನು ಕಾಲೇಜಿನ ವಿದ್ಯಾರ್ಥಿ ರಾಹುಲ್, ಯಶವಂತಪುರ ಕಡೆಯಿಂದ ಸೋಮವಾರ ರಾತ್ರಿ 2.30ರ ಸುಮಾರಿಗೆ ಬುಲೆಟ್‌ನಲ್ಲಿ ಮನೆಗೆ ಮರಳುತ್ತಿದ್ದ. ಅದೇ ವೇಳೆ ಮಳೆ ಸುರಿಯುತ್ತಿದ್ದರಿಂದ ರಸ್ತೆ ತೀವವಾಗಿತ್ತು. ಇದರಿಂದ ಆತ ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದ. ಈ ಘಟನೆ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ಯಶವಂತಪುರ ಠಾಣೆ ಹೊಯ್ಸಳ ವಾಹನ ಸಿಬ್ಬಂದಿ ಹೋಗಿದ್ದರು. ಅಲ್ಲದೆ ಯಶವಂತಪುರ ಸಂಚಾರ ಠಾಣೆ ಪೊಲೀಸರು ಸಹ ಘಟನಾ ಸ್ಥಳಕ್ಕೆ ತೆರಳಿದ್ದರು.

ಆದರೆ ಅಪಘಾತಕ್ಕೀಡಾಗಿ ಕಿವಿಯಲ್ಲಿ ರಕ್ತ ಸೋರುತ್ತಿದ್ದ ಗಾಯಾಳುವನ್ನು ಹೊಯ್ಸಳ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸಿದ ಸಿಬ್ಬಂದಿ, 108 ಆ್ಯಂಬುಲೆನ್ಸ್‌ ಅನ್ನು ಕರೆಸಿ ಗಾಯಾಳುವನ್ನು ಆಸ್ಪತ್ರೆಗೆ ಕಳುಹಿಸಿದ್ದರು. ಈ ವೇಳೆ ಹೊಯ್ಸಳ ವಾಹನದಲ್ಲಿ ಯಾಕೆ ಗಾಯಾಳುವನ್ನು ಕರೆದೊಯ್ಯಲಿಲ್ಲವೆಂದು ಸಾರ್ವಜನಿಕರು ಪ್ರಶ್ನಿಸಿದರು. ಈಗಾಗಲೇ ಆ್ಯಂಬುಲೆನ್ಸ್‌ಗೆ ಕರೆ ಮಾಡಿದ್ದೇವೆ ಎಂದು ಹೊಯ್ಸಳ ಸಿಬ್ಬಂದಿ ಹೇಳುವ ಮಾತನ್ನು ಸಾರ್ವಜನಿಕರು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಈ ವಿಡಿಯೋ ಬಹಿರಂಗವಾಗಿ ಹೊಯ್ಸಳ ಪೊಲೀಸರ ಮೇಲೆ ಸಾರ್ವಜನಿಕರು ಹರಿಹಾಯ್ದಿದ್ದಾರೆ.

ಇನ್ನು ಗಾಯಗೊಂಡಿದ್ದ ರಾಹುಲ್‌ ಪ್ರಾಣಪಾಯದಿಂದ ಪಾರಾಗಿದ್ದು, ಆತ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೊಯ್ಸಳ ಸಿಬ್ಬಂದಿ ನಿರ್ಲಕ್ಷ್ಯತನ ಆರೋಪದ ಬಗ್ಗೆ ಇಲಾಖಾ ಮಟ್ಟದ ಆಂತರಿಕ ವಿಚಾರಣೆ ನಡೆದಿದೆ. ಘಟನೆ ಕುರಿತು ವಿವರಣೆ ಕೇಳಿ ಸಿಬ್ಬಂದಿಗೆ ನೋಟಿಸ್ ನೀಡಲಾಗಿದೆ. ವಿಚಾರಣೆ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ.

-ಸೈದುಲು ಅಡಾವತ್‌, ಡಿಸಿಪಿ, ಉತ್ತರ ವಿಭಾಗ.

PREV

Recommended Stories

24 ಕ್ಯಾರೆಟ್ ಶುದ್ಧ ಚಿನ್ನದ ಹೆಸರಲ್ಲಿ ಟೋಪಿ ಹಾಕಿದವ ಬಂಧನ : 30 ಲಕ್ಷ ರು. ಮೌಲ್ಯದ ವಸ್ತು ಜಪ್ತಿ
ಮಾದಕವಸ್ತು ಮಾರಾಟ ದಂಧೆಯಲ್ಲಿ ತೋಡಗಿದ್ದ ವಿದೇಶಿ ಮಹಿಳೆಯರಿಬ್ಬರ ಬಂಧನ