ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು : ವಿಕ್ಟೋರಿಯಾ ಆಸ್ಪತ್ರೆ ವೈದ್ಯರ ವಿರುದ್ಧ ಆರೋಪ

KannadaprabhaNewsNetwork |  
Published : Apr 23, 2026, 04:00 AM ISTUpdated : Apr 23, 2026, 05:06 AM IST
Bengaluru Victoria Hospital

ಸಾರಾಂಶ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಮೃತರ ಪತ್ನಿ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ವತಿಯಿಂದ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ.

 ಬೆಂಗಳೂರು :  ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ರೋಗಿಯೊಬ್ಬರು ವೈದ್ಯರ ನಿರ್ಲಕ್ಷ್ಯದಿಂದ ಸಾವನ್ನಪ್ಪಿದ್ದಾರೆ ಎಂದು ಮೃತರ ಪತ್ನಿ ಆರೋಪ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆ ವತಿಯಿಂದ ತನಿಖೆಗೆ ಸಮಿತಿ ರಚನೆ ಮಾಡಲಾಗಿದೆ. ಖಾಸಗಿ ಕಂಪನಿಯಲ್ಲಿ ಡೆಲಿವರಿ ಬಾಯ್‌ ಆಗಿ ಕೆಲಸ ಮಾಡುತ್ತಿದ್ದ ಶಾನವಾಜ್‌ (45 ವರ್ಷ) ಮೃತ ವ್ಯಕ್ತಿ. ಮರ್ಮಾಂಗದಲ್ಲಿ ಗಡ್ಡೆ ಬೆಳೆದ ಹಿನ್ನೆಲೆಯಲ್ಲಿ ಕಳೆದ ಫೆ.19ರಂದು ವಿಕ್ಟೋರಿಯಾ ಆಸ್ಪತ್ರೆಗೆ ತುರ್ತು ಚಿಕಿತ್ಸಾ ವಿಭಾಗದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.

ತಪಾಸಣೆ ನಡೆಸಿದ ಸಂದರ್ಭದಲ್ಲಿ ಸೋಂಕು ಆಗಿದೆ ಎಂದು ಹೇಳಿ ವೈದ್ಯರು ಮರ್ಮಾಂಗವನ್ನು ಕೊಯ್ದಿದ್ದರು. ನಂತರ ಪ್ಲಾಸ್ಟಿಕ್ ಸರ್ಜರಿ ವಿಭಾಗಕ್ಕೆ ಹೋಗುವಂತೆ ಸೂಚಿಸಿದ್ದರು. ಆದರೆ ಅಲ್ಲಿ ಗಾಯ ವಾಸಿ ಆಗಿಲ್ಲ ಹಾಗಾಗಿ ಚಿಕಿತ್ಸೆ ನೀಡಲು ಸಾಧ್ಯವಿಲ್ಲ. ಮನೆಯಲ್ಲಿಯೇ ಡ್ರೆಸ್ಸಿಂಗ್ ಮಾಡಿಕೊಳ್ಳಿ ಎಂದು ಹೇಳಿ ಮನೆಗೆ ಕಳುಹಿಸಿದ್ದರು. ಶಸಚಿಕಿತ್ಸೆ ಹಾಗೂ ಪ್ಲಾಸ್ಟಿಕ್ ಸರ್ಜರಿ ವಿಭಾಗದವರ ಸಮನ್ವಯದ ಕೊರತೆಯಿಂದಾಗಿ ರೋಗಿಗೆ ಮರ್ಮಾಂಗದಲ್ಲಿ ರಕ್ತಸ್ರಾವ ಆಗುತ್ತಿದ್ದರೂ, ಹೊಲಿಗೆ ಹಾಕದೆ, ಬ್ಯಾಂಡೇಜ್ ಸಹ ಮಾಡದೆ ಹಾಗೇ ಕಳುಹಿಸಿದರು. ಹೀಗಾಗಿ ಪತಿ ಮನೆಯಲ್ಲೇ ಸಾವನ್ನಪ್ಪಿದ್ದಾರೆ ಎಂದು ಪತ್ನಿ ದೂರಿದ್ದಾರೆ.

ಗ್ಯಾಂಗ್ರಿನ್‌ನಿಂದ ಸಾವು: ಆಸ್ಪತ್ರೆ

ತೀವ್ರ ಮಧುಮೇಹ ಹೊಂದಿದ್ದ ಶಾನವಾಜ್‌ ಅವರಿಗೆ ವೃಷಣಕೋಶದಲ್ಲಿ ಗ್ಯಾಂಗ್ರಿನ್ ಉಂಟಾಗಿದ್ದು, ಅದಕ್ಕೆ ಪ್ಲಾಸ್ಟಿಕ್ ಸರ್ಜರಿ ಚಿಕಿತ್ಸೆ ಮಾಡಬೇಕಿತ್ತು. ಆದರೆ ಗಾಯ ಒಣಗದ ಕಾರಣ ಅವರು ಚಿಕಿತ್ಸೆಗೆ ಅರ್ಹರಿರಲಿಲ್ಲ. ಹಾಗಾಗಿ ಮಾ. 3ರಂದು ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿತ್ತು. ರೋಗಿಗೆ ಮನೆಯಲ್ಲಿಯೇ ಡ್ರೆಸಿಂಗ್ ಮಾಡಿಸಿಕೊಳ್ಳುವಂತೆ ಸಲಹೆ ಸಹ ನೀಡಲಾಗಿತ್ತು ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಬಳಿಕ ರೋಗಿಯ ಆರೋಗ್ಯ ಸ್ಥಿತಿ ಗಂಭೀರವಾಗಿ ಮಾ. 15ರಂದು ಮನೆಯಲ್ಲಿಯೇ ನಿಧನ ಹೊಂದಿದ್ದಾರೆ. ಇದಾದ ಒಂದು ತಿಂಗಳ ನಂತರ ಮೃತ ರೋಗಿಯ ಪತ್ನಿ ಪತಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಹೇಳಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರಿಗೆ ದೂರು ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ರೋಗಿಯ ಸಾವಿಗೆ ಕಾರಣ ತಿಳಿಯಲು ತಜ್ಞರ ಸಮಿತಿ ರಚಿಸಲಾಗಿದೆ. ಸಮಿತಿ ವರದಿ ಆಧರಿಸಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ವಿಕ್ಟೋರಿಯಾ ಆಸ್ಪತ್ರೆ ವೈದ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.

ರೋಗಿಯ ಸಂಬಂಧಿಕರು ವೈದ್ಯರ ನಿರ್ಲಕ್ಷ್ಯದಿಂದ ಸಾವಾಗಿದೆ ಎಂದು ಆರೋಪಿಸಿದ್ದಾರೆ. ಹೀಗಾಗಿ ಕಾರಣ ತಿಳಿಯಲು ತಜ್ಞರ ಸಮಿತಿ ರಚಿಸಲಾಗಿದೆ. ವರದಿ ಆಧಾರದ ಮೇಲೆ ವೈದ್ಯರ ತಪ್ಪು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

- ಡಾ.ದೀಪಕ್, ವೈದ್ಯಕೀಯ ಅಧೀಕ್ಷಕ, ವಿಕ್ಟೋರಿಯಾ ಆಸ್ಪತ್ರೆ

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.
Read more Articles on

Recommended Stories

ನಾಗಸಾಧು ಸೋಗಲ್ಲಿ ಬಂದು ವಾಸ್ತು ಶಿಲ್ಪಿಯಿಂದ ಚಿನ್ನದ ಉಂಗುರ ಎಗರಿಸಿ ಪರಾರಿ
ಜಾಲತಾಣದಲ್ಲಿ ಶ್ರೀಮಂತರಿಗೆ ಗಾಳ ಹಾಕಿ ವಂಚಿಸುತ್ತಿದ್ದ ರೀಲ್ಸ್‌ ರಾಣಿ ಸೆರೆ