ರೇಣುಕಾಸ್ವಾಮಿ ಅಡ್ರೆಸ್‌ ಪತ್ತೆ ಮಾಡಿದ್ದು ಪವಿತ್ರಾ! - ಅಶ್ಲೀಲ ಮೆಸೇಜ್‌ ಕಳಿಸಿದ್ದಕ್ಕೆ ಕೊಲ್ಲಲು 6 ದಿನಗಳಿಂದ ಪ್ಲಾನ್‌

Published : Sep 06, 2024, 10:42 AM IST
Renukaswamy

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಗೆ ಆರು ದಿನಗಳಿಂದ ದರ್ಶನ್ ಗ್ಯಾಂಗ್‌ ಸಂಚು ರೂಪಿಸಿತ್ತು. ಕೊನೆಗೆ ಪವಿತ್ರಾ ಸಲುಗೆಯಿಂದ ರೇಣುಕಾಸ್ವಾಮಿ ಜತೆ ಮಾತನಾಡಿ ಆತನ ಸ್ವವಿವರ ಪಡೆದು ಆತನನ್ನು ಖೆಡ್ಡಾಕ್ಕೆ ಕೆಡವಿದ್ದಳು ಎಂಬ ಸಂಗತಿ ಬಯಲಾಗಿದೆ.

ಬೆಂಗಳೂರು  :  ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆಗೆ ಆರು ದಿನಗಳಿಂದ ದರ್ಶನ್ ಗ್ಯಾಂಗ್‌ ಸಂಚು ರೂಪಿಸಿತ್ತು. ಕೊನೆಗೆ ಪವಿತ್ರಾ ಸಲುಗೆಯಿಂದ ರೇಣುಕಾಸ್ವಾಮಿ ಜತೆ ಮಾತನಾಡಿ ಆತನ ಸ್ವವಿವರ ಪಡೆದು ಆತನನ್ನು ಖೆಡ್ಡಾಕ್ಕೆ ಕೆಡವಿದ್ದಳು ಎಂಬ ಸಂಗತಿ ಬಯಲಾಗಿದೆ.

ಕಳೆದ ಫೆಬ್ರವರಿಯಿಂದ ಇನ್‌ಸ್ಟಾಗ್ರಾಂನಲ್ಲಿ ದರ್ಶನ್‌ ಪ್ರಿಯತಮೆ ಪವಿತ್ರಾಗೌಡಳಿಗೆ ರೇಣುಕಾಸ್ವಾಮಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಕಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಆತನಿಗೆ ಗತಿ ಕಾಣಿಸಲು ದರ್ಶನ್ ಗ್ಯಾಂಗ್ ನಿರ್ಧರಿಸಿತು.

ಜೂ.3ರಂದು ರೇಣುಕಾಸ್ವಾಮಿಗೆ ‘ಡ್ರಾಪ್ ಯುವರ್ ನಂಬರ್‌’ ಎಂದು ಪವಿತ್ರಾಗೌಡ ಮೆಸೇಜ್ ಮಾಡಿದ್ದಳು. ಇದಕ್ಕೆ ಪ್ರತಿಕ್ರಿಯಿಸಿದ್ದ ಆತ, ‘ಚಿನ್ನ ನಿನ್ನ ನಂಬರ್ ಕೊಡು’ ಎಂದಿದ್ದ. ಆಗ ತನ್ನ ಸಹಾಯಕ ಪವನ್‌ ನಂಬರ್‌ ಅನ್ನು ತನ್ನ ನಂಬರ್‌ ಎಂದು ಹೇಳಿ ಆಕೆ ಶೇರ್ ಮಾಡಿದ್ದಳು. ಜೂ.5 ರಂದು ರಾತ್ರಿ 9 ಗಂಟೆಗೆ ಆ ನಂಬರ್‌ಗೆ ರೇಣುಕಾಸ್ವಾಮಿ ಕರೆ ಮಾಡಿದ್ದ. ಆ ವೇಳೆ ಪವನ್ ಮನೆಯಲ್ಲೇ ಇದ್ದ ಕಾರಣ ಪವಿತ್ರಾ ಕರೆ ಸ್ವೀಕರಿಸಿ ಮಾತನಾಡಿದ್ದಳು. ಇದಾದ ನಂತರ ಪವಿತ್ರಾ ಹೆಸರಿನಲ್ಲಿ ಪವನ್ ಚಾಟಿಂಗ್ ನಡೆಸಿದ್ದ.

ಚಾಟಿಂಗ್ ವೇಳೆ ತಾನು ಜಿಗಣಿ ಅಪೋಲೋ ಫಾರ್ಮಸಿಯಲ್ಲಿ ಕೆಲಸದಲ್ಲಿದ್ದೇನೆ ಎಂದಿದ್ದಾನೆ. ತಕ್ಷಣವೇ ಆ ಫಾರ್ಮಸಿಗೆ ನಂದೀಶ್ ಹಾಗೂ ತೌಫಿಕ್ ತೆರಳಿದ್ದರು. ಅದು ಸುಳ್ಳು ಮಾಹಿತಿ ಎಂಬುದು ಖಚಿತವಾದ ನಂತರ ಪವಿತ್ರಾ, ನೀನು ಕೆಲಸ ಮಾಡುವ ಫಾರ್ಮಸಿಯ ಹೊರಗಡೆ ನಿಂತು ಫೋಟೋ ಕಳುಹಿಸುವಂತೆ ರೇಣುಕಾಸ್ವಾಮಿಗೆ ಹೇಳಿದ್ದಳು. ಕೊನೆಗೆ ತನ್ನ ಭಾವಚಿತ್ರ, ಮನೆ ವಿಳಾಸ ಹಾಗೂ ಕೆಲಸ ಮಾಡುವ ಫಾರ್ಮಸಿ ವಿವರವನ್ನು ರೇಣುಕಾಸ್ವಾಮಿ ಶೇರ್ ಮಾಡಿದ್ದ. ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಇರುವಿಕೆ ಖಚಿತವಾದ ಕೂಡಲೇ ಆತನನ್ನು ಅಪಹರಿಸಿ ಕರೆತರುವಂತೆ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರನಿಗೆ ಪವನ್ ಹೇಳಿದ್ದ. ಆದರೆ ಚಿತ್ರದುರ್ಗದ ನ್ಯಾಯಾಲಯ ಸಮೀಪ ಜೂ.7 ರಂದು ರೇಣುಕಾಸ್ವಾಮಿ ಅಪಹರಣ ಯತ್ನ ವಿಫಲವಾಯಿತು. ಮರುದಿನ ಆತ ದರ್ಶನ್‌ ಗ್ಯಾಂಗ್ ಬಲೆಗೆ ಬಿದ್ದಿದ್ದಾನೆ.

 ಶರಣಾಗಲು ಮನೆ ಕೆಲಸಗಾರರಿಗೆ ಸೂಚನೆ: 

ರೇಣುಕಾಸ್ವಾಮಿ ಹತ್ಯೆ ಬಳಿಕ ಕೊಲೆ ಆರೋಪ ಹೊತ್ತು ಪೊಲೀಸರಿಗೆ ಶರಣಾಗುವಂತೆ ಮೊದಲು ಚಿತ್ರದುರ್ಗದಿಂದ ಆತನನ್ನು ಅಪಹರಿಸಿ ಕರೆತಂದಿದ್ದ ಆ ಜಿಲ್ಲೆಯ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ, ಅನುಕುಮಾರ್‌, ರವಿಶಂಕರ್ ಹಾಗೂ ಜಗದೀಶ್‌ಗೆ ಪಟ್ಟಣಗೆರೆ ವಿನಯ್ ಮತ್ತು ಪ್ರದೂಷ್ ಸೂಚಿಸಿದ್ದರು. ಆದರೆ ಈ ಮಾತಿಗೆ ರಾಘವೇಂದ್ರ ಹೊರತುಪಡಿಸಿ ಇನ್ನುಳಿದ ಮೂವರು ಅಸಮ್ಮತಿ ಸೂಚಿಸಿದ್ದರು. ಆಗ ಕೇಶವ ಮೂರ್ತಿ, ಕಾರ್ತಿಕ್ ಅಲಿಯಾಸ್ ಕಪ್ಪೆ ಹಾಗೂ ನಿಖಿಲ್ ನಾಯಕ್‌ನನ್ನು ಹಣದಾಸೆ ತೋರಿಸಿ ದರ್ಶನ್ ಗ್ಯಾಂಗ್ ಒಪ್ಪಿಸಿತ್ತು. ಅಂತೆಯೇ ರಾಘವೇಂದ್ರ ಜತೆ ಈ ಮೂವರು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ಶರಣಾಗಿದ್ದರು. ಆದರೆ ವಿಚಾರಣೆ ವೇಳೆ ಈ ನಾಲ್ವರು ಸತ್ಯ ಬಾಯ್ಬಿಟ್ಟಿದ್ದರು. ಆಗ ಹೆದರಿದ ದರ್ಶನ್‌, ತಾವು ಹಾಗೂ ತಮ್ಮ ಪ್ರಿಯತಮೆ ಪಾರಾಗಲು ಮನೆ ಕೆಲಸಗಾರರಾದ ಪವನ್ ಹಾಗೂ ನಂದೀಶ್‌ನನ್ನು ಸಹ ಶರಣಾಗತಿ ಮಾಡಿಸಲು ಮುಂದಾಗಿದ್ದರು ಎಂದು ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ನಟಿ ಆತ್ಮ*ತ್ಯೆಗೆ ಸರ್ಕಾರಿ ನೌಕರಿಗೆ ಸೇರುವಂತೆ ಕುಟುಂಬ ಒತ್ತಡ ಕಾರಣ?
ವೈಯಕ್ತಿಕ ಕಾರಣದಿಂದ ಬೇಸತ್ತು ಕಿರುತೆರೆ ಯುವ ನಟಿ ಆತ್ಮ*ತ್ಯೆ