ದಂಡದ ಟಾರ್ಗೆಟ್ ತಲುಪಲು ಪೊಲೀಸರ ಆತುರ..!

KannadaprabhaNewsNetwork |  
Published : May 27, 2025, 12:39 AM ISTUpdated : May 27, 2025, 04:17 AM IST
ದಂಡದ ಟಾರ್ಗೆಟ್ ತಲುಪಲು ಪೊಲೀಸರ ಆತುರ..! | Kannada Prabha

ಸಾರಾಂಶ

ಹೆಲ್ಮೆಟ್ ಧರಿಸುವುದೊಂದೇ ಸಮಗ್ರ ಸಂಚಾರಿ ವ್ಯವಸ್ಥೆಯ ಸುಧಾರಣೆ ಎಂದು ಪೊಲೀಸ್ ಇಲಾಖೆ ಪರಿಭಾವಿಸಿದಂತಿದೆ. ಹೆಲ್ಮೆಟ್‌ನ್ನೇ ಗುರಿಯಾಗಿಸಿಕೊಂಡು ಸಂಚಾರಿ ಪೊಲೀಸರು ಪದೇ ಪದೇ ಎಡವಟ್ಟು ಮಾಡುತ್ತಿರುವುದರಿಂದ ಅಮಾಯಕರು ಸಾವು-ನೋವುಗಳಿಗೆ ಒಳಗಾಗುತ್ತಿದ್ದಾರೆ.

 ಮಂಡ್ಯ : ಹೆಲ್ಮೆಟ್ ಧರಿಸುವುದೊಂದೇ ಸಮಗ್ರ ಸಂಚಾರಿ ವ್ಯವಸ್ಥೆಯ ಸುಧಾರಣೆ ಎಂದು ಪೊಲೀಸ್ ಇಲಾಖೆ ಪರಿಭಾವಿಸಿದಂತಿದೆ. ಹೆಲ್ಮೆಟ್‌ನ್ನೇ ಗುರಿಯಾಗಿಸಿಕೊಂಡು ಸಂಚಾರಿ ಪೊಲೀಸರು ಪದೇ ಪದೇ ಎಡವಟ್ಟು ಮಾಡುತ್ತಿರುವುದರಿಂದ ಅಮಾಯಕರು ಸಾವು-ನೋವುಗಳಿಗೆ ಒಳಗಾಗುತ್ತಿದ್ದಾರೆ.

ಫುಟ್‌ಪಾತ್ ಒತ್ತುವರಿ, ವಾಹನಗಳ ಪಾರ್ಕಿಂಗ್ ಅವ್ಯವಸ್ಥೆ, ಸುವ್ಯವಸ್ಥೆ ಇಲ್ಲದ ಏಕಮುಖ ಸಂಚಾರ, ಅವೈಜ್ಞಾನಿಕ ರೀತಿಯ ರಸ್ತೆ ಡುಬ್ಬಗಳು, ಗುಂಡಿಬಿದ್ದ ರಸ್ತೆಗಳು ಸೇರಿದಂತೆ ಸುಗಮ ಸಂಚಾರ ವ್ಯವಸ್ಥೆಗೆ ತೀವ್ರ ಅಡಚಣೆ ಉಂಟುಮಾಡುತ್ತಿವೆ. ಅವುಗಳ ಕಡೆಗೆ ಕಿಂಚಿತ್ತೂ ಗಮನಹರಿಸದೆ, ಸುಧಾರಣೆ ತರುವ ಪ್ರಯತ್ನವನ್ನೂ ಮಾಡದೆ ಕೇವಲ ಹೆಲ್ಮೆಟ್ ಧರಿಸದೆ ಬರುವವರ ಮೇಲೆ ಹದ್ದಿನ ಕಣ್ಣಿಟ್ಟು ದಾಳಿ ನಡೆಸಿ ದಂಡ ವಿಧಿಸುವುದರಲ್ಲಿ ಪೊಲೀಸರು ಮುಂಚೂಣಿಯಲ್ಲಿದ್ದಾರೆ.

ಹೆಲ್ಮೆಟ್ ಧರಿಸದೆ ಬರುವವರ ಮೇಲಿನ ಪ್ರಾಣದ ಬಗ್ಗೆ ಕಿಂಚಿತ್ತೂ ಕರುಣೆಯಿಲ್ಲದಂತೆ ವರ್ತಿಸುವ ಸಂಚಾರಿ ಪೊಲೀಸರು ದಿಢೀರನೆ ರಸ್ತೆಗೆ ನುಗ್ಗುವುದು, ಅಡ್ಡಗಟ್ಟುವುದು, ದಂಡ ವಿಧಿಸುವುದನ್ನಷ್ಟೇ ತಮ್ಮ ಗುರಿಯಾಗಿಸಿಕೊಂಡಿದ್ದಾರೆ. ನಿತ್ಯ ಇಲಾಖೆ ನಿಗದಿಪಡಿಸಿರುವ ಟಾರ್ಗೆಟ್‌ನಷ್ಟು ದಂಡ ವಸೂಲಿ ಮಾಡುವುದಕ್ಕೆ ಎಲ್ಲೆಂದರಲ್ಲಿ ಹೆಲ್ಮೆಟ್ ಧರಿಸದೆ ಬರುವವರನ್ನು ಹಿಡಿಯುವುದಷ್ಟೇ ಅವರ ಕಾಯಕವಾಗಿದೆ. ಕಾನೂನುಬದ್ಧವಾಗಿ ಹಣ ವಸೂಲಿ ಮಾಡುವುದಕ್ಕೆ ಪೊಲೀಸರಿಗೆ ಇರುವ ದಾರಿ ಇದೊಂದೇ ಆಗಿರುವುದು ಇಂತಹ ಅವಘಡಗಳಿಗೆ ಕಾರಣವಾಗಿದೆ.

ಪೊಲೀಸರು ದಿಢೀರನೆ ರಸ್ತೆ ಮಧ್ಯಕ್ಕೆ ಬರುವುದನ್ನು ಕಂಡು ಕೆಲವರು ಆತಂಕಗೊಂಡು ಬೈಕ್‌ನಿಂದ ಬಿದ್ದು ಗಾಯಗೊಂಡಿದ್ದಾರೆ. ವಯಸ್ಸಾದವರನ್ನು ಆಸ್ಪತ್ರೆಗೆ ಸಾಗಿಸುವ ವೇಳೆಯೂ ಆಯತಪ್ಪಿ ಬಿದ್ದಿರುವ ಉದಾಹರಣೆಗಳೂ ಇವೆ. ಇಷ್ಟೆಲ್ಲಾ ಅವಘಡಗಳು ಪದೇ ಪದೇ ನಡೆಯುತ್ತಿದ್ದರೂ ಸಂಚಾರಿ ಪೊಲೀಸರು ಮಾತ್ರ ಎಚ್ಚೆತ್ತುಕೊಂಡಿಲ್ಲ. ಹೆಲ್ಮೆಟ್ ಧರಿಸದೆ ಬರುವವರನ್ನು ತಡೆಯುವ ಶೈಲಿಯಲ್ಲಿ ಬದಲಾವಣೆಯನ್ನು ಮಾಡಿಕೊಂಡಿಲ್ಲ. ಪೊಲೀಸರು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ್ದರಿಂದ ಅಮಾಯಕ ಹೆಣ್ಣು ಮಗು ಬಲಿಯಾಗುವಂತಾಯಿತು.

ಹೆಲ್ಮೆಟ್‌ನ್ನು ಗುರಿಯಾಗಿಸಿಕೊಂಡು ದಂಡ ವಸೂಲಿಗೆ ಗುರಿ ನಿಗದಿಪಡಿಸಿಕೊಂಡಿರುವ ಸಂಚಾರಿ ಪೊಲೀಸರು ಇತರೆ ಸಂಚಾರಿ ಅವ್ಯವಸ್ಥೆಯ ಕಡೆಗೂ ಗಮನಹರಿಸಿ ಅಲ್ಲಿಯೂ ಸುಧಾರಣೆ ತರುವುದಕ್ಕೆ ಪ್ರಯತ್ನಿಸಬೇಕು. ಇನ್ನಾದರೂ ಹೆಲ್ಮೆಟ್ ಬಿಟ್ಟು ಇನ್ನಿತರ ಸಂಚಾರಿ ವ್ಯವಸ್ಥೆಯಲ್ಲಿರುವ ಇನ್ನಿತರ ಅದ್ವಾನ ಪರಿಸ್ಥಿತಿಯನ್ನು ಸರಿಪಡಿಸಲು ಸಂಚಾರಿ ಪೊಲೀಸರು ಕಾರ್ಯೋನ್ಮುಖರಾಗಲಿ ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

PREV
Read more Articles on

Recommended Stories

ಡ್ರಗ್ಸ್ ನಂಟು: ಇನ್ಸ್‌ಪೆಕ್ಟರ್ ಸೇರಿ 11 ಪೊಲೀಸ್‌ ಸಸ್ಪೆಂಡ್‌
ದುಷ್ಕರ್ಮಿಗಳಿಂದ ಯುವಕನ ಕೊಲೆ; ಪೊಲೀಸರಿಂದ ಸಹೋದರನ ವಿಚಾರಣೆ