ರೇವಣ್ಣ ಲೈಂಗಿಕ ಶೋಷಣೆ ಕೇಸ್‌: ನಾಪತ್ತೆಯಾದವಳ ಪತ್ತೆಗೆ 40 ಕಡೆ ರೇಡ್‌!

KannadaprabhaNewsNetwork | Updated : May 04 2024, 04:54 AM IST

ಸಾರಾಂಶ

ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು ಎನ್ನಲಾದ ಮೈಸೂರು ಜಿಲ್ಲೆ ಕೆ.ಆರ್‌. ನಗರದ ಮಹಿಳೆಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ಶುಕ್ರವಾರ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ.  

 ಬೆಂಗಳೂರು :  ಮಾಜಿ ಸಚಿವ ಎಚ್.ಡಿ. ರೇವಣ್ಣ ಅವರಿಂದ ಲೈಂಗಿಕ ಶೋಷಣೆಗೆ ಒಳಗಾಗಿದ್ದಳು ಎನ್ನಲಾದ ಮೈಸೂರು ಜಿಲ್ಲೆ ಕೆ.ಆರ್‌. ನಗರದ ಮಹಿಳೆಯ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ (ಎಸ್ಐಟಿ) ಶುಕ್ರವಾರ 40ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ಈ ಸ್ಥಳದಲ್ಲಿ ಮಹಿಳೆ ಇದ್ದಾಳೆಯೇ ಎಂಬ ಶೋಧ ನಡೆಸಿದೆ.

ಈ ತಂಡಗಳು ಗುರುವಾರ ತಡರಾತ್ರಿಯಿಂದಲೇ ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳು, ಬೆಂಗಳೂರು ನಗರ ಸೇರಿದಂತೆ ವಿವಿಧೆಡೆ ತಲಾಶ್‌ ನಡೆಸುತ್ತಿವೆ. ಎಚ್‌.ಡಿ.ರೇವಣ್ಣ ಅವರ ಹೊಳೆನರಸೀಪುರ, ಪಡುವಲಹಿಪ್ಪೆ, ಬೆಂಗಳೂರು ನಿವಾಸಿಗಳು, ತೋಟದ ಮನೆಗಳು, ರೇವಣ್ಣ ಅವರ ಸಂಬಂಧಿಕರು, ಸ್ನೇಹಿತರ ಮನೆಗಳು, ತೋಟದ ಮನೆಗಳು ಸೇರಿದಂತೆ ಸುಮಾರು 40ಕ್ಕೂ ಅಧಿಕ ಸ್ಥಳಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿವೆ. ಎಲ್ಲಿಯೂ ಸದ್ಯಕ್ಕೆ ಆ ಮಹಿಳೆಯ ಸುಳಿವು ಸಿಕ್ಕಿಲ್ಲ ಎಂದು ಮೂಲಗಳಿಂದ ತಿಳಿದು ಬಂದಿದೆ.

ಮಹಿಳೆ ಅಪಹರಣ ಸಂಬಂಧ ಕೆ.ಆರ್‌.ನಗರ ಪೊಲೀಸ್‌ ಠಾಣೆಯಲ್ಲಿ ಮೇ 2ರ ರಾತ್ರಿ ಎಫ್‌ಐಆರ್‌ ದಾಖಲಾಗಿತ್ತು. ದೂರುದಾರರು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಸತೀಶ್‌ ಬಾಬು ಎಂಬುವವರ ಮೇಲೆ ಅಪಹರಣದ ಆರೋಪ ಮಾಡಿದ್ದಾರೆ. ನಾಪತ್ತೆಯಾಗಿರುವ ಮಹಿಳೆಗೆ ಜೀವ ಬೆದರಿಕೆ ಇರುವ ಬಗ್ಗೆಯೂ ದೂರುದಾರರು ತಿಳಿಸಿದ್ದಾರೆ.

ಇದೇ ವೇಳೆ, ನಾಪತ್ತೆಯಾಗಿರುವ ಮಹಿಳೆ ಮೇಲೆ ಸಂಸದ ಪ್ರಜ್ವಲ್‌ ರೇವಣ್ಣ ಈ ಹಿಂದೆ ಬೆದರಿಸಿ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪವೂ ಕೇಳಿ ಬಂದಿದೆ. ಹೀಗಾಗಿ ಈ ಪ್ರಕರಣವು ಮಹತ್ವ ಪಡೆದುಕೊಂಡಿದೆ. ಆ ಮಹಿಳೆಯ ಜೀವಕ್ಕೆ ಅಪಾಯ ಇರುವುದರಿಂದ ಎಸ್‌ಐಟಿ ಅಧಿಕಾರಿಗಳು ಮಹಿಳೆಯ ಪತ್ತೆಗಾಗಿ ರಾತ್ರೋರಾತ್ರಿ ಸುಮಾರು 25ಕ್ಕೂ ಅಧಿಕ ಪೊಲೀಸರನ್ನೊಳಗೊಂಡ ವಿಶೇಷ ತಂಡಗಳನ್ನು ರಚಿಸಿದ್ದಾರೆ.

Share this article