ಮುಂಬೈ ಬಂಧಿತ ಸ್ಮಗ್ಲರ್‌ಗೆ ರನ್ಯಾ ನಂಟು : ಡಿಆರ್‌ಐ ತನಿಖೆಯಲ್ಲಿ ಬಹಿರಂಗ - ಸಿಬಿಐನಿಂದ ತನಿಖೆ

ಸಾರಾಂಶ

ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿತ ನಟಿ ರನ್ಯಾರಾವ್‌ಗೂ, ಮುಂಬೈನಲ್ಲಿ ಬಂಧಿತರಾಗಿರುವ ವಿದೇಶದ ಇಬ್ಬರು ವ್ಯಕ್ತಿಗಳಿಗೂ ನಂಟಿದೆ ಎಂಬ ಅಂಶವನ್ನು ಡಿಆರ್‌ಐ ಬಯಲು ಮಾಡಿದೆ.

 ಬೆಂಗಳೂರು :  ಚಿನ್ನ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿತ ನಟಿ ರನ್ಯಾರಾವ್‌ಗೂ, ಮುಂಬೈನಲ್ಲಿ ಬಂಧಿತರಾಗಿರುವ ವಿದೇಶದ ಇಬ್ಬರು ವ್ಯಕ್ತಿಗಳಿಗೂ ನಂಟಿದೆ ಎಂಬ ಅಂಶವನ್ನು ಡಿಆರ್‌ಐ ಬಯಲು ಮಾಡಿದೆ.

ಪ್ರಕರಣ ಸಂಬಂಧ ಡಿಆರ್‌ಐ ಅಧಿಕಾರಿಗಳು ನೀಡಿರುವ ಮಾಹಿತಿ ಆಧರಿಸಿ ಸಿಬಿಐ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. ಎಫ್‌ಐಆರ್‌ನಲ್ಲಿ ಯಾವುದೇ ಹೆಸರು ಉಲ್ಲೇಖ ಮಾಡಿಲ್ಲವಾದರೂ, ಸರ್ಕಾರಿ ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳು ಎಂದು ಮಾತ್ರ ನಮೂದು ಮಾಡಲಾಗಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆರೆಯಾದ ಆರೋಪಿಗಳ ಬಗ್ಗೆ ಮಾಹಿತಿ ನೀಡಿ, ಡಿಆರ್‌ಐ ಅಧಿಕಾರಿಗಳು ಸಿಬಿಐಗೆ ಪತ್ರ ಬರೆದಿದ್ದಾರೆ. ಈ ಪತ್ರದ ಆಧಾರದ ಮೇಲೆ ತನಿಖೆ ನಡೆಸುವಂತೆ ಡಿಆರ್‌ಐ ಅಧಿಕಾರಿಗಳು ಮನವಿ ಮಾಡಿದ್ದಾರೆ.

ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಒಮಾನ್‌ ಮತ್ತು ಯುಎಇಯ ಇಬ್ಬರನ್ನು ಮುಂಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ₹18.92 ಕೋಟಿ ಮೌಲ್ಯದ 21.28 ಕೇಜಿ ಚಿನ್ನವನ್ನು ಜಪ್ತಿ ಮಾಡಲಾಗಿದೆ. ಈ ಇಬ್ಬರು ದುಬೈನಿಂದ ಬಂದಿದ್ದು, ಹಲವು ಬಾರಿ ಮುಂಬೈಗೆ ಆಗಮಿಸಿದ್ದರು. ಅಂತೆಯೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರನ್ನು (ರನ್ಯಾರಾವ್‌) ಬಂಧಿಸಿ ₹12.56 ಕೋಟಿ ಮೌಲ್ಯದ 14.2 ಕೆಜಿ ಚಿನ್ನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ದುಬೈನಿಂದ ಪ್ರಯಾಣಿಸಿ ಚಿನ್ನ ಕಳ್ಳಸಾಗಣೆಯಲ್ಲಿ ಸಿಕ್ಕಿಬಿದ್ದ ಈ ಎರಡೂ ಪ್ರಕರಣಗಳ ಆರೋಪಿಗಳಿಂದ ಭಾರತಕ್ಕೆ ದೊಡ್ಡ ಪ್ರಮಾಣದ ಚಿನ್ನವನ್ನು ಕಳ್ಳ ಸಾಗಣೆ ಮಾಡಲು ಪ್ರಯತ್ನಿಸುತ್ತಿರುವುದು ತನಿಖೆಯಿಂದ ತಿಳಿದು ಬಂದಿದೆ. ಭಾರತೀಯ ಮತ್ತು ವಿದೇಶಿ ಪ್ರಜೆಗಳ ದುಬೈ ಭೇಟಿ ಕಳ್ಳ ಸಾಗಾಣಿಕೆ ಪ್ರಕರಣಕ್ಕೆ ಪುಷ್ಠಿ ನೀಡಿದೆ. ಅಲ್ಲದೆ, ದುಬೈನಿಂದ ಕಾರ್ಯ ನಿರ್ವಹಿಸುವ ಸಂಘಟಿತ ಕಳ್ಳಸಾಗಣೆ ಸಿಂಡಿಕೇಟ್‌ನೊಂದಿಗೆ ಸಂಬಂಧವನ್ನು ಸೂಚಿಸುತ್ತದೆ. ಇದು ದೊಡ್ಡ ಮಟ್ಟದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಣಾಮಗಳನ್ನು ಹೊಂದಿರಬಹುದು. ಪ್ರಕರಣದಲ್ಲಿ ಸರ್ಕಾರಿ ನೌಕರರು ಸಹ ಭಾಗಿಯಾಗಿರುವ ಸಾಧ್ಯತೆ ಇದೆ. ಅಂತಹ ಸಂಘಟಿತ ನೆಟ್‌ವರ್ಕ್‌ ಬಗ್ಗೆ ತನಿಖೆ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

 

Share this article