ಕಪ್‌ತುಳಿತ: 5 ಪೊಲೀಸ್‌ ಅಧಿಕಾರಿಗಳ ಸಸ್ಪೆಂಡ್‌ ರದ್ದು?

Published : Jul 26, 2025, 08:05 AM IST
Karnataka Crowd Control Bill 2025 Strict Law After RCB Victory Stampede Tragedy

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ ಸಂಬಂಧ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿ.ದಯಾನಂದ್‌ ಸೇರಿ ಐವರು ಪೊಲೀಸ್ ಅಧಿಕಾರಿಗಳಿಗೆ ವಿಧಿಸಲಾಗಿದ್ದ ಅಮಾನತು ಆದೇಶ ಹಿಂಪಡೆಯುವ ಕುರಿತು ರಾಜ್ಯ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣ ಕಾಲ್ತುಳಿತ ದುರಂತ ಸಂಬಂಧ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಬಿ.ದಯಾನಂದ್‌ ಸೇರಿ ಐವರು ಪೊಲೀಸ್ ಅಧಿಕಾರಿಗಳಿಗೆ ವಿಧಿಸಲಾಗಿದ್ದ ಅಮಾನತು ಆದೇಶ ಹಿಂಪಡೆಯುವ ಕುರಿತು ರಾಜ್ಯ ಸರ್ಕಾರದ ಉನ್ನತ ಮಟ್ಟದಲ್ಲಿ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.

ಅಮಾತನು ರದ್ದುಪಡಿಸಿ ಆ ಅಧಿಕಾರಿಗಳಿಗೆ ಬೇರೆ ಹುದ್ದೆ ಕೊಟ್ಟು ನಂತರ ಅವರ ವಿರುದ್ಧ ಇಲಾಖಾ ವಿಚಾರಣೆಗೆ ಆದೇಶಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ. ಮುಖ್ಯಮಂತ್ರಿ ಅವರು ಒಪ್ಪಿದರೆ ಒಂದೂವರೆ ತಿಂಗಳಿಂದ ಕಾನೂನಿನ ಕುಣಿಕೆಯಲ್ಲಿ ಸಿಲುಕಿ ಹೈರಾಣಾಗಿದ್ದ ಐವರು ಪೊಲೀಸ್ ಅಧಿಕಾರಿಗಳು ನಿರಾಳರಾಗಲಿದ್ದಾರೆ ಎನ್ನಲಾಗಿದೆ.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ಮುಂಬಡ್ತಿ ವಿಳಂಬವಾಗುವ ನಿರಾಸೆಯಲ್ಲಿದ್ದ ಎಡಿಜಿಪಿ ದಯಾನಂದ್ ಅವರಿಗೆ ಆಶಾಭಾವನೆ ಮೂಡಲಿದೆ. ಅಮಾನತು ರದ್ದುಗೊಂಡರೆ ಇದೇ ತಿಂಗಳಾಂತ್ಯಕ್ಕೆ ಡಿಜಿಪಿ ಹುದ್ದೆಗೆ ಅವರಿಗೆ ಮುಂಬಡ್ತಿ ಸಿಗಬಹುದು ಎಂದು ಮೂಲಗಳು ತಿಳಿಸಿವೆ.

ಜೂ.4 ರಂದು ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿ ತಂಡವನ್ನು ಅಭಿನಂದಿಸಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ವೇಳೆ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟಿದ್ದರು. ಘಟನೆಗೆ ಭದ್ರತಾ ಲೋಪದ ಆರೋಪ ಮೇರೆಗೆ ಅಂದಿನ ಬೆಂಗಳೂರು ಆಯುಕ್ತ ಬಿ.ದಯಾನಂದ್‌, ಹೆಚ್ಚುವರಿ ಪೊಲೀಸ್ ಆಯುಕ್ತ (ಪಶ್ಚಿಮ) ವಿಕಾಸ್ ಕುಮಾರ್ ವಿಕಾಸ್‌, ಕೇಂದ್ರ ವಿಭಾಗದ ಡಿಸಿಪಿ ಶೇಖರ್‌, ಕಬ್ಬನ್ ಪಾರ್ಕ್ ಉಪ ವಿಭಾಗದ ಎಸಿಪಿ ಬಾಲಕೃಷ್ಣ ಹಾಗೂ ಕಬ್ಬನ್ ಪಾರ್ಕ್ ಠಾಣೆ ಇನ್ಸ್‌ಪೆಕ್ಟರ್‌ ಎ.ಕೆ.ಗಿರೀಶ್ ಅವರನ್ನು ಸರ್ಕಾರ ಅಮಾನತುಗೊಳಿಸಿತ್ತು. ಈ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆಗೆ ನ್ಯಾ.ಮೈಕಲ್ ಡಿ.ಕುನ್ಹಾ ನೇತೃತ್ವದ ನ್ಯಾಯಾಂಗ ಆಯೋಗ ಶಿಫಾರಸು ಮಾಡಿತ್ತು.

ಸಿಎಂ ಜತೆ ಅಧಿಕಾರಿಗಳ ಚರ್ಚೆ:

ಪೊಲೀಸ್ ಅಧಿಕಾರಿಗಳ ಅಮಾನತು ಹಿಂಪಡೆಯುವ ಕುರಿತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಹಿರಿಯ ಅಧಿಕಾರಿಗಳ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಮಾಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಹಾಗೂ ಡಿಜಿ-ಐಜಿಪಿ ಡಾ.ಎಂ.ಸಲೀಂ ಅವರು ಅಮಾನತು ಹಿಂಪಡೆಯುವಂತೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಅಲೋಕ್ ಕುಮಾರ್ ಅವರಿಗೆ ಮುಂಬಡ್ತಿ

ಇನ್ನು ಎರಡು ತಿಂಗಳಿಂದ ಮುಂಬಡ್ತಿ ಸಿಗದೆ ಬೇಸರಗೊಂಡಿದ್ದ ಅಲೋಕ್ ಕುಮಾರ್ ಅವರಿಗೆ ಸರ್ಕಾರ ಸಿಹಿ ಸುದ್ದಿ ನೀಡಲಿದೆ ಎನ್ನಲಾಗಿದೆ. ಸೇವಾ ಹಿರಿತನದ ಮೇರೆಗೆ ಅವರಿಗೂ ಡಿಜಿಪಿ ಹುದ್ದೆ ಪದನ್ನೋತಿ ಸಿಗಲಿದೆ. ಹಿಂದಿನ ಡಿಜಿಪಿ ಅಲೋಕ್ ಮೋಹನ್ ಅವರ ನಿವೃತ್ತಿ ಬಳಿಕ ಸೇವಾ ಹಿರಿತನ ಮೇರೆಗೆ ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಮುಂಬಡ್ತಿ ನೀಡಬೇಕಿತ್ತು. ಆದರೆ ಹಳೇ ಪ್ರಕರಣವೊಂದು ಅವರಿಗೆ ಅಡ್ಡಿಯಾಗಿತ್ತು.

PREV
Read more Articles on

Recommended Stories

ಬಾಯ್‌ಫ್ರೆಂಡಿಂದ ₹2.5 ಕೋಟಿ ಸುಲಿಗೆ ಮಾಡಲು ಮಾಜಿ ಪ್ರಿಯತಮೆ ಯತ್ನ
ಅಣ್ಣನ ಮೇಲಿನ ದ್ವೇಷಕ್ಕೆ ಇಬ್ಬರು ಮಕ್ಕಳನ್ನು ಭೀಕರವಾಗಿ ಕೊಂದ ಚಿಕ್ಕಪ್ಪ