ಬೆಂಗಳೂರು : ಗುಂಪು ಹತ್ಯೆ ಕೃತ್ಯಗಳ ಸಂಬಂಧ ಎಫ್‌ಐಆರ್ ದಾಖಲಿಸುವ ಮುನ್ನ ಹಿರಿಯ ಅಧಿಕಾರಿಗಳಿಂದ ಅನುಮೋದನೆ ಪಡೆಯುವಂತೆ ಸೂಚಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಸುತ್ತೋಲೆ ಹೊರಡಿಸಿದ್ದಾರೆ.
ಕೇಂದ್ರ ಗೃಹ ಕಾರ್ಯದಶಿಗಳ ಸೂಚನೆ ಹಿನ್ನೆಲೆಯಲ್ಲಿ ಗುಂಪು ಹತ್ಯೆ ಕೃತ್ಯದ ಸಂಬಂಧ ಎಫ್‌ಐಆರ್ ದಾಖಲು ಪ್ರಕ್ರಿಯೆ ಬಗ್ಗೆ ಡಿಜಿ-ಐಜಿಪಿ ಅವರು ಸುತ್ತೋಲೆ ಹೊರಡಿಸಿದ್ದಾರೆ.
ಎಲ್ಲಾ ಠಾಣಾಧಿಕಾರಿಗಳು ಹಾಗೂ ತನಿಖಾಧಿಕಾರಿಗಳು ಪ್ರಥಮ ವರ್ತಮಾನ ವರದಿಯಲ್ಲಿ ಗುಂಪು ಹತ್ಯೆ ಆರೋಪದ 304, 103(2), 111 & 113(2) ಅಳವಡಿಸಿಕೊಳ್ಳುವ ಮುನ್ನ ಮೇಲಾಧಿಕಾರಿಗಳ ಅನುಮೋದನೆ ಪಡೆದುಕೊಳ್ಳ ಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ಸೂಚನೆಗಳು ಹೀಗಿವೆ:
1.ದೂರುದಾರರು ಸಲ್ಲಿಸುವ ದೂರನ್ನು ಸ್ವೀಕರಿಸಿದಾಗ ಅದರಲ್ಲಿ ಭಾರತ ನ್ಯಾಯ ಸಂಹಿತೆ-2023 ರ ಅಪರಾಧಿಕ ಕಲಂ ಗಳಾದ 304, 103(2), 111 & 113(ಬಿ) ಗಳ ಅಪರಾಧಿಕ ಅಂಶಗಳು ಮೇಲ್ನೋಟಕ್ಕೆ ಕಂಡುಬರುತ್ತವೆಯೇ ಎಂಬುದನ್ನು ಪರಿಶೀಲಿಸುವುದು.
2. ಸದರಿ ದೂರಿನಲ್ಲಿ ಮೇಲ್ಕಾಣಿಸಿದ ಅಪರಾಧಿಕ ಅಂಶಗಳು ಕಂಡು ಬಂದರೆ ಮೇಲಾಧಿಕಾರಿಗಳ ಗಮನಕ್ಕೆ ತರಬೇಕು. ಬಳಿಕ ಅಧಿಕಾರಿಗಳ ಅನುಮತಿ ಪಡೆದು ಎಫ್‌ಐಆರ್ ದಾಖಲಿಸಬೇಕು.
3.ಜಿಲ್ಲಾ ಮಟ್ಟದಲ್ಲಿ ಎಸ್ಪಿ ಹಾಗೂ ಕಮಿಷನರೇಟ್‌ಗಳಲ್ಲಿ ಡಿಸಿಪಿ ಅವರಿಗೆ ಅನುಮೋದನೆ ನೀಡುವ ಅಧಿಕಾರವಿದೆ.
4. ಒಂದು ವೇಳೆ ಕಾನೂನು ಮತ್ತು ಸುವ್ಯವಸ್ಥೆ ಅಥವಾ ಸಾರ್ವಜನಿಕ ಸುರಕ್ಷತೆಯ ತುರ್ತು ಸಂದರ್ಭಗಳಲ್ಲಿ ಲಿಖಿತವಾಗಿ ಕೋರಿಕೆ ಸಲ್ಲಿಸಲು ಮತ್ತು ಅನುಮೋದನೆ ಪಡೆದುಕೊಳ್ಳಲು ಸಾಧ್ಯವಾಗದಿದ್ದಲ್ಲಿ, ಆಗ ಸಂಬಂಧಿಸಿದ ಠಾಣಾಧಿಕಾರಿ/ತನಿಖಾಧಿಕಾರಿಗಳು ಮೌಖಿಕವಾಗಿ ತಮ್ಮ ಕೋರಿಕೆ ಸಲ್ಲಿಸಿ ಹಿರಿಯ ಅಧಿಕಾರಿಯಿಂದ ಮೌಖಿಕವಾಗಿ ಅನುಮೋದನೆಯ ಆದೇಶ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕು. ನಂತರ 24 ಘಂಟೆಯೊಳಗಾಗಿ ಲಿಖಿತ ರೂಪದಲ್ಲಿ ಘಟನೋತ್ತರ ಅನುಮೋದನೆ ಪಡೆದುಕೊಳ್ಳಬೇಕು.