ಶೂಟಿಂಗ್‌ಗೆಂದು ಪೊಲೀಸ್ ಸಮವಸ್ತ್ರ ಖರೀದಿಸಿದ್ದ ಪೆರೋಲ್‌ ಕೈದಿಯಿಂದ ದರೋಡೆ

KannadaprabhaNewsNetwork |  
Published : Mar 03, 2026, 03:15 AM IST
HDK JDs | Kannada Prabha

ಸಾರಾಂಶ

ಇತ್ತೀಚೆಗೆ ಪೊಲೀಸ್ ಸಮವಸ್ತ್ರ ಧರಿಸಿ ಬಂದು ರಿಯಲ್ ಎಸ್ಟೇಟ್ ಉದ್ಯಮಿ ದಂಪತಿಯನ್ನು ಬೆದರಿಸಿ ಲಕ್ಷಾಂತರ ರುಪಾಯಿ ನಗದು ಹಾಗೂ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಭೇದಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಇತ್ತೀಚೆಗೆ ಪೊಲೀಸ್ ಸಮವಸ್ತ್ರ ಧರಿಸಿ ಬಂದು ರಿಯಲ್ ಎಸ್ಟೇಟ್ ಉದ್ಯಮಿ ದಂಪತಿಯನ್ನು ಬೆದರಿಸಿ ಲಕ್ಷಾಂತರ ರುಪಾಯಿ ನಗದು ಹಾಗೂ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಭೇದಿಸುವಲ್ಲಿ ಬ್ಯಾಡರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕೃತ್ಯದ ಹಿಂದೆ ಕಾರಾಗೃಹದಲ್ಲಿರುವ ಕೈದಿಯೊಬ್ಬನ ಕೈವಾಡವಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಕೈದಿಯು ಪೆರೋಲ್ ಮೇಲೆ ಹೊರಬಂದಿದ್ದು ಈ ಕೃತ್ಯ ಎಸಗಿದ್ದಾನೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿ ಕೇಂದ್ರ ಕಾರಾಗೃಹದಲ್ಲಿರುವ ಕೈದಿ ನಾಗೇಂದ್ರ ಎಂಬಾತನನ್ನು ಬಾಡಿ ವಾರೆಂಟ್ ಮೇಲೆ ಬ್ಯಾಡರಹಳ್ಳಿ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲ ದಿನಗಳ ಹಿಂದೆ ಬ್ಯಾಡರಹಳ್ಳಿಯ ಬಿಇಎಲ್ ಲೇಔಟ್‌ನಲ್ಲಿರುವ ಹೊಂಬಾಳೆಗೌಡ ಎಂಬುವರ ಮನೆಗೆ ಪೊಲೀಸ್ ಸಮವಸ್ತ್ರದಲ್ಲಿ ಬಂದಿದ್ದ ಆರೋಪಿಗಳು ತಾವು ಯಲಹಂಕ ಸಬ್‌ ಇನ್ಸ್‌ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದರು. ಬಳಿಕ ಮನೆಯವರ ಕೈಕಾಲುಗಳಿಗೆ ಟೇಪ್ ಸುತ್ತಿ, ಪಿಸ್ತೂಲ್ ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದರು. ನಂತರ ದಂಪತಿಯನ್ನು ಬೆದರಿಸಿ ಸುಮಾರು 20 ಲಕ್ಷ ರು. ನಗದು ಹಾಗೂ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದರು.

ದೂರು ದಾಖಲಿಸಿಕೊಂಡು ತನಿಖೆಗೆ ಇಳಿದಿದ್ದ ಪೊಲೀಸರು, ಸುತ್ತಮುತ್ತಲಿನ ಸಿ.ಸಿ ಕ್ಯಾಮೆರಾ ದೃಶ್ಯಾವಳಿ ಹಾಗೂ ಘಟನಾ ಸ್ಥಳದಲ್ಲಿ ಲಭ್ಯವಾದ ಸಾಂದರ್ಭಿಕ ಪುರಾವೆಗಳ ಸೂಕ್ಷ್ಮ ವಿಶ್ಲೇಷಣೆ ನಡೆಸಿದರು. ಕೈದಿಯೊಬ್ಬನ ಬೆರಳಚ್ಚು ಕೃತ್ಯ ನಡೆದ ಸ್ಥಳದಲ್ಲಿ ಪತ್ತೆಯಾಗಿತ್ತು. ಕೈದಿಯೊಬ್ಬನ ಸುಳಿವು ದೊರೆತಿದ್ದು, ನಂತರ ಆ ದಿಕ್ಕಿನಲ್ಲಿ ಪೊಲೀಸರು ತನಿಖೆ ಮುಂದುವರಿಸಿದರು.

ಶೂಟಿಂಗ್‌ಗೆ ಅಂತೇಳಿ ಪೊಲೀಸ್ ಸಮವಸ್ತ್ರ ಖರೀದಿ:

ಆರೋಪಿಯು ಕೃತ್ಯಕ್ಕೆ ಬಳಸಿದ್ದ ಪೊಲೀಸ್ ಸಮವಸ್ತ್ರವನ್ನು ಶಿವಾಜಿನಗರದ ಅಂಗಡಿಯೊಂದರಲ್ಲಿ ಖರೀದಿಸಿದ್ದ ಎಂದು ತಿಳಿದು ಬಂದಿದೆ. ಅಂಗಡಿಯವರಿಗೆ ಸಿನಿಮಾ ಶೂಟಿಂಗ್‌ಗಾಗಿ ಯೂನಿಫಾರ್ಮ್ ಬೇಕು ಎಂದು ಸುಳ್ಳು ಹೇಳಿ ಖರೀದಿ ಮಾಡಿದ್ದ. ಪರಿಚಯವಿಲ್ಲದವರಿಗೆ ಪೊಲೀಸ್‌ ಸಮವಸ್ತ್ರ ಮಾರಾಟ ಮಾಡುವುದಿಲ್ಲ ಎಂದು ಮೊದಲಿಗೆ ಅಂಗಡಿಯವರು ನಿರಾಕರಿಸಿದ್ದರು. ಆದರೆ ಆರೋಪಿ ಶೂಟಿಂಗ್ ಕಾರಣ ನೀಡಿ ಆತನನ್ನು ನಂಬಿಸಿ ಯೂನಿಫಾರ್ಮ್ ಪಡೆದುಕೊಂಡಿದ್ದ. ಈ ಸಂಬಂಧ ಅಂಗಡಿ ಮಾಲೀಕನನ್ನೂ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಕೃತ್ಯದ ಬಳಿಕ ದಾವಣಗೆರೆಗೆ ಪರಾರಿಆರೋಪಿಯು ದರೋಡೆ ಕೃತ್ಯ ಎಸಗಿದ ಬಳಿಕ ದಾವಣಗೆರೆಗೆ ಪರಾರಿಯಾಗಿದ್ದ. ಆರೋಪಿಯು ಪೆರೋಲ್ ಮೇಲೆ ಹೊರಬಂದಿದ್ದ ಸಂದರ್ಭದಲ್ಲಿ ಈ ಕೃತ್ಯ ಎಸಗಿರುವುದು ತನಿಖೆಯಿಂದ ಗೊತ್ತಾಗಿದೆ. ಕದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ಎಲ್ಲಿಟ್ಟಿದ್ದಾನೆ ಎಂಬುದರ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಸದ್ಯ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆದಿರುವ ಆರೋಪಿ ನಾಗೇಂದ್ರನನ್ನು ವಿಚಾರಣೆ ನಡೆಸಲಾಗುತ್ತಿದ್ದು, ಈ ದರೋಡೆಗೆ ಇನ್ನು ಯಾರ್‍ಯಾರು ಸಹಕಾರ ನೀಡಿದ್ದಾರೆ ಎಂಬುದರ ಬಗ್ಗೆಯೂ ಪೊಲೀಸರು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

PREV
Stay informed with the latest crime news in Kannada from Karnataka and India, criminal incidents, police actions, investigations, court verdicts, public safety alerts and breaking updates on Kannada Prabha.

Recommended Stories

ವಾರ್ಡ್‌, ಮತಗಟ್ಟೆವಾರು ಜೆಡಿಎಸ್‌ ಪಕ್ಷ ಸಂಘಟಿಸಲು ಎಚ್‌.ಡಿ.ಕುಮಾರಸ್ವಾಮಿ ಸೂಚನೆ
ಒಣ ಕಸ ಮಾರಾಟದಿಂದ ₹1.80 ಕೋಟಿ ಆದಾಯ!