ದರೋಡೆ: ಮದ್ದೂರು ಪುರಸಭೆ ಮಾಜಿ ಅಧ್ಯಕ್ಷನ ಬಂಧನ

KannadaprabhaNewsNetwork |  
Published : Nov 24, 2025, 02:00 AM IST
23ಕೆಎಂಎನ್ ಡಿ17 | Kannada Prabha

ಸಾರಾಂಶ

ಮದ್ದೂರು ಪಟ್ಟಣದ ದೊಡ್ಡಿಬೀದಿಯ ಶ್ರೀವೆಂಕಟೇಶ್ವರ ಇಂಡೇನ್ ಗ್ಯಾಸ್ ಮಾಲೀಕ ಎಂ.ಸಿ.ಚಂದ್ರಶೇಖರ್ ಮನೆಗೆ ನುಗ್ಗಿ ಆತನ ಪತ್ನಿಗೆ ಬೆದರಿಕೆ ಹಾಕಿ ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಭೇದಿಸುವಲ್ಲಿ ಮದ್ದೂರು ಪೊಲೀಸರು ಸಫಲರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮದ್ದೂರು

ಪಟ್ಟಣದ ದೊಡ್ಡಿಬೀದಿಯ ಶ್ರೀವೆಂಕಟೇಶ್ವರ ಇಂಡೇನ್ ಗ್ಯಾಸ್ ಮಾಲೀಕ ಎಂ.ಸಿ.ಚಂದ್ರಶೇಖರ್ ಮನೆಗೆ ನುಗ್ಗಿ ಆತನ ಪತ್ನಿಗೆ ಬೆದರಿಕೆ ಹಾಕಿ ನಗದು ಸೇರಿದಂತೆ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಭೇದಿಸುವಲ್ಲಿ ಮದ್ದೂರು ಪೊಲೀಸರು ಸಫಲರಾಗಿದ್ದಾರೆ.

ಕೃತಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖಂಡ, ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ಮರೀಗೌಡನನ್ನು ಬಂಧಿಸಿರುವ ಪೊಲೀಸರು ಈತನಿಂದ 12 ಲಕ್ಷ ರು. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಪ್ರಕರಣ ಸಂಬಂಧ ಮರೀಗೌಡನ ವಿರುದ್ಧ ಬಿಎಸ್ಎನ್ ಕಾಯ್ದೆ 303 ಹಾಗೂ 318 ಅನ್ವಯ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ನಂತರ ಮದ್ದೂರು ಜೆಎಂಎಫ್‌ಸಿ ನ್ಯಾಯಾಲಯದ ಎರಡನೇ ಅಪರ ಸಿವಿಲ್ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿ ಪುರಸಭೆ ಮಾಜಿ ಅಧ್ಯಕ್ಷ ಎಂ.ಕೆ.ಮರೀಗೌಡ ಕಳೆದ ಆ.26ರಂದು ರಾತ್ರಿ 7.50 ಸಮಯದಲ್ಲಿ ತನ್ನ ಮನೆ ಪಕ್ಕದಲ್ಲಿದ್ದ ಎಂ.ಸಿ.ಚಂದ್ರಶೇಖರ್ ಮನೆಗೆ ಮುಸುಕುದಾರಿ ವೇಷದಲ್ಲಿ ನುಗ್ಗಿ ಆತನ ಪತ್ನಿ ಸುಶೀಲಮ್ಮರಿಗೆ ಬೆದರಿಕೆ ಹಾಕಿ ಮಾಂಗಲ್ಯ ಸರ, ಎರಡು ವಜ್ರದ ಓಲೆ, ಎರಡು ಬಳೆ ಸೇರಿದಂತೆ 50 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ರು. ನಗದು ದೋಚಿ ಪರಾರಿಯಾಗಿದ್ದನು.

ಈ ಸಂಬಂಧ ಸುಶೀಲಮ್ಮ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲು ಮಾಡಿಕೊಂಡಿದ್ದ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಎಎಸ್‌ಪಿಗಳಾದ ತಿಮ್ಮಯ್ಯ, ಗಂಗಾಧರಸ್ವಾಮಿ, ಡಿವೈಎಸ್ಪಿ ಎಸ್.ಬಿ.ಯಶವಂತ ಕುಮಾರ್ ಮಾರ್ಗದರ್ಶನದಲ್ಲಿ ಆರೋಪಿ ಪತ್ತೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು.

ಸರ್ಕಲ್ ಇನ್ಸ್ ಪೆಕ್ಟರ್ ಎಚ್.ಎಸ್.ನವೀನ, ಪಿಎಸ್ಐ ಮಂಜುನಾಥ್, ಅಪರಾಧ ವಿಭಾಗದ ಪಿಎಸ್ಐ ರವಿ, ಸಿಬ್ಬಂದಿ ಕೆ.ಎನ್. ಸ್ವಾಮಿ, ಎಂ.ಶರತ್, ಮಹೇಶ್, ಪ್ರಸನ್ನ ಹಾಗೂ ಕುಮಾರಸ್ವಾಮಿ ಅವರು ತಂಡ ಸಿಸಿಟಿವಿ ದೃಶ್ಯಾವಳಿಗಳು ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ ಮಾಜಿ ಪುರಸಭಾ ಅಧ್ಯಕ್ಷ ಎಂ.ಕೆ.ಮರೀಗೌಡ ಕೃತ್ಯ ನಡೆಸಿರುವುದು ಬೆಳಕಿಗೆ ಬಂದಿದೆ.

ನಂತರ ಈತನನ್ನು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆ ನಡೆಸಿದಾಗ ಚಿನ್ನಾಭರಣಗಳನ್ನು ಕಳವು ಮಾಡಿರುವುದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾರೆ. ನಂತರ ಪೊಲೀಸರು ಮಂಡ್ಯ ಹಾಗೂ ಮಳವಳ್ಳಿ ಗಿರವಿ ಅಂಗಡಿಗಳಲ್ಲಿ ಅಡವಿಟ್ಟಿದ್ದ ಚಿನ್ನಾಭರಣಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV

Recommended Stories

ಜಮೀನಿನಲ್ಲಿದ್ದ ಬೋರ್‌ವೆಲ್ ವಿದ್ಯುತ್ ಬೋರ್ಡ್ ಕಳವು..!
ರಾಜ್ಯ ರಸ್ತೆ ಸಾರಿಗೆ ಬಸ್ ಡಿಕ್ಕಿ: ಬೈಕ್‌ಗೆ ಸವಾರ ಸಾವು