ವಿದೇಶಿ ಡ್ರಗ್ಸ್‌ ಪೆಡ್ಲರ್‌ನ ಬ್ಯಾಂಕ್‌ ಖಾತೆ ಜಪ್ತಿ

KannadaprabhaNewsNetwork | Published : Jan 13, 2024 1:31 AM

ಸಾರಾಂಶ

ದೇಶದಲ್ಲೇ ಪ್ರಥಮ ಬಾರಿಗೆ ವಿದೇಶಿ ಡ್ರಗ್ಸ್‌ ಪೆಡ್ಲರ್‌ವೊಬ್ಬನ ಬ್ಯಾಂಕ್‌ ಖಾತೆಗಳಲ್ಲಿದ್ದ ₹12.60 ಲಕ್ಷವನ್ನು ಮುಟ್ಟುಗೋಲು ಹಾಕಿಕೊಂಡಿದ್ದು, ವಿವಿಧ ಬ್ಯಾಂಕ್‌ಗಳ 30 ಪಾಸ್‌ಬುಕ್‌ಗಳು ಹಾಗೂ 39 ಕ್ರೆಡಿಟ್‌ ಕಾರ್ಡ್‌ ಜಪ್ತಿ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ದೇಶದಲ್ಲೇ ಪ್ರಥಮ ಬಾರಿಗೆ ವಿದೇಶಿ ಡ್ರಗ್ಸ್‌ ಪೆಡ್ಲರ್‌ವೊಬ್ಬನ ಬ್ಯಾಂಕ್‌ ಖಾತೆಗಳಲ್ಲಿದ್ದ ₹12.60 ಲಕ್ಷವನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ನಾರ್ಕೊಟಿಕ್‌ ಡ್ರಗ್ಸ್‌ ಆ್ಯಂಡ್‌ ಸೈಕೋಟ್ರೋಪಿಕ್‌ ಸಬ್‌ಸ್ಟಾನ್ಸಸ್‌ ಆ್ಯಕ್ಟ್‌ (ಎನ್‌ಡಿಪಿಎಸ್‌) ಕಾಯ್ದೆಯಲ್ಲಿ ಕಲ್ಪಿಸಿರುವ ಅಧಿಕಾರ ಚಲಾಯಿಸಿ ಹಣ ಜಪ್ತಿ ಮಾಡಲಾಗಿದೆ.

ಕಳೆದ ನವೆಂಬರ್‌ನಲ್ಲಿ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ಬಿಇಎಎಲ್‌ ಲೇಔಟ್‌ 6ನೇ ಬ್ಲಾಕ್‌ನ ಬಿಬಿಎಂಪಿ ಪಾರ್ಕ್‌ ಬಳಿ ವಿದೇಶಿ ಪ್ರಜೆಯೊಬ್ಬ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ದೊರಕಿತ್ತು. ದಾಳಿ ನಡೆಸಿದ ವಿದ್ಯಾರಣ್ಯಪುರ ಠಾಣೆ ಪೊಲೀಸರು ಬಾಣಸವಾಡಿ ನಿವಾಸಿ ನೈಜಿರಿಯಾ ಮೂಲದ ಡ್ರಗ್ಸ್‌ ಪೆಡ್ಲರ್‌ ಪೀಟರ್‌ ಇಕೇಡಿ ಬಿಲಾನ್ವೋ(38) ಎಂಬಾತನನ್ನು ಬಂಧಿಸಿದ್ದರು.

ಆರೋಪಿಯಿಂದ ₹5.15 ಲಕ್ಷ ಮೌಲ್ಯದ ಎಂಡಿಎಂಎ ಮಾದಕವಸ್ತು, ವಿವಿಧ ಬ್ಯಾಂಕ್‌ಗಳ 30 ಪಾಸ್‌ಬುಕ್‌ಗಳು ಹಾಗೂ 39 ಕ್ರೆಡಿಟ್‌ ಕಾರ್ಡ್‌ ಜಪ್ತಿ ಮಾಡಿದ್ದರು. ಈ ಸಂಬಂಧ ವಿದ್ಯಾರಣ್ಯಪುರ ಠಾಣೆಯಲ್ಲಿ ಎನ್‌ಡಿಪಿಎಸ್‌ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಬಳಿಕ ಈ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿತ್ತು.

₹7 ಖಾತೆಗಳಲ್ಲಿನ ₹12.60 ಲಕ್ಷ ಮುಟ್ಟುಗೋಲು:

ಸಿಸಿಬಿ ಮಾದಕದ್ರವ್ಯ ನಿಗ್ರಹ ದಳದ ಪೊಲೀಸರು ತನಿಖೆ ವೇಳೆ ಆರೋಪಿಯ ಪತ್ನಿಯ ಎರಡು ಬ್ಯಾಂಕ್ ಖಾತೆಗಳಲ್ಲಿ ₹2.55 ಲಕ್ಷ ಹಾಗೂ ಇತರೆ ಐದು ಬ್ಯಾಂಕ್‌ ಖಾತೆಗಳಿಂದ ₹4.90 ಲಕ್ಷ ಇರುವುದು ಕಂಡು ಬಂದಿತ್ತು. ಬಳಿಕ ಎನ್‌ಡಿಪಿಎಸ್‌ ಕಾಯ್ದೆ-1985ರ ಅಧ್ಯಾಯ 5(ಎ)ರ ಕಲಂ 68(ಇ) ಮತ್ತು (ಎಫ್‌) ಅಡಿ ತನಿಖಾಧಿಕಾರಿಗೆ ಕಲ್ಪಿಸಿರುವ ಅಧಿಕಾರ ಚಲಾಯಿಸಿ ನಗದು ಹಣ ಹಾಗೂ ಏಳು ಬ್ಯಾಂಕ್‌ ಖಾತೆಗಳಲ್ಲಿದ್ದ ಒಟ್ಟು ₹12.60 ಲಕ್ಷವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿತ್ತು.

ಮುಟ್ಟುಗೋಲಿಗೆ ಅನುಮೋದನೆ:

ಇದೀಗ ಚೆನ್ನೈನ ಸಕ್ಷಮ ಪ್ರಾಧಿಕಾರ ಮತ್ತು ಆಡಳಿತಾಧಿಕಾರಿಗಳಾದ ಸಂಗ್ಲರ್ಸ್‌ ಆ್ಯಂಡ್‌ ಫಾರಿನ್‌ ಎಕ್ಸ್‌ಚೇಂಜ್‌ ಮ್ಯಾನಿಪುಲೇಟರ್ಸ್‌(ಫೋರ್‌ಫೀಚರ್‌ ಆಫ್‌ ಪ್ರಾಪರ್ಟಿ) ಆಕ್ಟ್‌ (ಸಫೆಮಾ) (ಎಫ್‌ಒಪಿ) ಮತ್ತು ನಾರ್ಕೊಟಿಕ್‌ ಡ್ರಗ್ಸ್‌ ಆ್ಯಂಡ್‌ ಸೈಕೋಟ್ರೋಪಿಕ್‌ ಸಬ್ಸ್‌ಸ್ಟಾನ್ಸ್‌ಸ್‌ ಆಕ್ಟ್‌ ಅಡಿ ವಿಚಾರಣೆ ನಡೆಸಿ ಸಿಸಿಬಿಯ ಈ ಮುಟ್ಟುಗೋಲು ಆದೇಶವನ್ನು ಅನುಮೋದಿಸಿದೆ. ವಿದೇಶಿ ಡ್ರಗ್ಸ್‌ ಪೆಡ್ಲರ್‌ ಅಕ್ರಮವಾಗಿ ಸಂಪಾದಿಸಿದ ಹಣವನ್ನು ಮುಟ್ಟುಗೋಲು ಹಾಕಿಕೊಂಡಿರುವುದು ದೇಶದಲ್ಲಿ ಇದೇ ಮೊದಲು ಎಂದು ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ್‌ ತಿಳಿಸಿದರು.ಮಣಿಪುರ ಮೂಲದ ಮಹಿಳೆ ಜತೆ ಮದುವೆ

ಆರೋಪಿ ಪೀಟರ್‌ ವೈದ್ಯಕೀಯ ವೀಸಾ ಪಡೆದು 2018ರಲ್ಲಿ ಭಾರತಕ್ಕೆ ಬಂದಿದ್ದಾನೆ. ಬಳಿಕ 2022ರಲ್ಲಿ ಮಣಿಪುರ ರಾಜ್ಯದ ಮಹಿಳೆಯರನ್ನು ಮದುವೆಯಾಗಿದ್ದು, ಆಕೆಯ ಹೆಸರಿನಲ್ಲಿ ಬೆಂಗಳೂರು ನಗರದಲ್ಲಿ ಎರಡು ಬ್ಯಾಂಕ್‌ ಖಾತೆ ತೆರೆದಿದ್ದ. ಬಳಿಕ ನಕಲಿ ದಾಖಲೆಗಳನ್ನು ನೀಡಿ ಬೇರೆ ಬೇರೆ ವ್ಯಕ್ತಿಗಳ ಹೆಸರಿನಲ್ಲಿ ಐದು ಬ್ಯಾಂಕ್‌ ಖಾತೆ ಸೇರಿದಂತೆ ಒಟ್ಟು ಏಳು ಬ್ಯಾಂಕ್‌ ಖಾತೆ ತೆರೆದಿದ್ದ. ಮಾದಕವಸ್ತು ಮಾರಾಟ ಮಾಡಿದಾಗ ಗ್ರಾಹಕರಿಂದ ಗೂಗಲ್‌ ಪೇ ಮತ್ತು ಫೋನ್‌ ಪೇ ಮುಖಾಂತರ ಬ್ಯಾಂಕ್‌ ಖಾತೆಗಳಿಗೆ ಹಣ ಹಾಕಿಸಿಕೊಳ್ಳುತ್ತಿದ್ದ ವಿಚಾರ ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Share this article